ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮುಸ್ಲಿಂ ಶಿಕ್ಷಕಿಯೊಬ್ಬರು ತಾವು ಹಿಜಾಬ್ ಧರಿಸಿದ್ದಕ್ಕಾಗಿ ಖಾಸಗಿ ಶಾಲೆಯೊಂದು ಕೆಲಸ ನೀಡಲು ನಿರಾಕರಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಮ್ರೀನ್ ಬಾನೋ ಎಂಬ ಶಿಕ್ಷಕಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಭಾರಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಶಿಕ್ಷಕಿಯ ಆರೋಪವೇನು?
ಖಾಸಗಿ ಶಾಲೆಯೊಂದರಲ್ಲಿ ಒಂದು ದಿನದ ಪ್ರಾಯೋಗಿಕ ತರಗತಿ (Trial Class) ನಡೆಸಿದ್ದೆ. ಮರುದಿನ ಪೋಷಕರ ಸಭೆಯಲ್ಲಿ ಶಾಲಾ ಮಂಡಳಿಯು ಹಿಜಾಬ್ ಧರಿಸಬಾರದು ಎಂದು ಸೂಚಿಸಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ, ಅಂದಿನ ಕೆಲಸಕ್ಕೆ 200 ರೂಪಾಯಿ ನೀಡಿ ನನ್ನನ್ನು ಕೆಲಸದಿಂದ ಕೈಬಿಡಲಾಯಿತು ಎಂದು ಸಮ್ರೀನ್ ಬಾನೋ ಆರೋಪಿಸಿದ್ದಾರೆ. ಅಲ್ಲದೆ, ಮುಸ್ಲಿಂ ಶಿಕ್ಷಕರ ಬಗ್ಗೆ ಮಕ್ಕಳಲ್ಲಿ ತಪ್ಪು ಕಲ್ಪನೆ ಮೂಡಿಸಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಲೆಯ ಸ್ಪಷ್ಟನೆ:
ಈ ಆರೋಪಗಳನ್ನು ಶಾಲೆಯ ನಿರ್ದೇಶಕಿ ಉಷಾರಾಜ್ ಮೌರ್ಯ ತಳ್ಳಿಹಾಕಿದ್ದಾರೆ. “ಸಮ್ರೀನ್ ಬಾನೋ ಅವರು ತರಗತಿಯ ಒಳಗೆ ಮೊಬೈಲ್ ಬಳಸುತ್ತಿದ್ದರು, ಇದು ಶಾಲೆಯ ನಿಯಮಕ್ಕೆ ವಿರುದ್ಧವಾಗಿದೆ. ನಮ್ಮ ಶಾಲೆಯಲ್ಲಿ ಶೇ. 90ರಷ್ಟು ಮುಸ್ಲಿಂ ವಿದ್ಯಾರ್ಥಿಗಳಿದ್ದು, ಈಗಾಗಲೇ ನಾಲ್ವರು ಮುಸ್ಲಿಂ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಎಂದೂ ಈ ರೀತಿಯ ಸಮಸ್ಯೆ ಎದುರಿಸಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಶಿಕ್ಷಕಿ ಸಮ್ರೀನ್ ಅವರು ಶಾಲೆಯ ಪ್ರಾರ್ಥನೆ ಹಾಗೂ ಇತರ ಶಿಕ್ಷಕರ ಆಚಾರ-ವಿಚಾರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಆಡಳಿತ ಮಂಡಳಿ ಮರು ಆರೋಪ ಮಾಡಿದೆ.
ಪ್ರಸ್ತುತ ಪೊಲೀಸ್ ವಿಚಾರಣೆಯ ನಂತರ ಶಿಕ್ಷಕಿ ಸಮ್ರೀನ್ ತಮ್ಮ ವಿಡಿಯೋವನ್ನು ಡಿಲೀಟ್ ಮಾಡಿದ್ದು, ಪ್ರಕರಣವನ್ನು ಇಲ್ಲಿಗೇ ಕೈಬಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.





Leave a comment