ಜಜ್ಜರ್ (ರಾಜಸ್ಥಾನ): ಚುನಾವಣೆ ಬಂದರೆ ಸಾಕು ಅಭ್ಯರ್ಥಿಗಳು ರಸ್ತೆ, ಕುಡಿಯುವ ನೀರು, ನಿವೇಶನ, ಸಾಲ ಮನ್ನಾದಂತಹ ಸಾಂಪ್ರದಾಯಿಕ ಭರವಸೆಗಳನ್ನು ನೀಡುವುದು ಸಾಮಾನ್ಯ. ಆದರೆ ರಾಜಸ್ಥಾನದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಯುವತಿಯೊಬ್ಬಳು ನೀಡಿರುವ ವಿನೂತನ ಭರವಸೆ ಇಡೀ ದೇಶದಲ್ಲೇ ಭಾರಿ ಸಂಚಲನ ಮೂಡಿಸಿದೆ.
ತನಗೆ ಮತ ನೀಡಿ ಗೆಲ್ಲಿಸಿದರೆ ಊರಿನ ಎಲ್ಲಾ ಬ್ರಹ್ಮಚಾರಿಗಳಿಗೆ ಹೆಣ್ಣು ಹುಡುಕಿ ಮದುವೆ ಮಾಡಿಸುವುದಾಗಿ ಆಕೆ ಘೋಷಿಸಿದ್ದಾಳೆ.
ರಾಜಸ್ಥಾನದ ಜಜ್ಜರ್ ಗ್ರಾಮದಲ್ಲಿ ನಡೆಯುತ್ತಿರುವ ಪಂಚಾಯತ್ ಚುನಾವಣೆಯಲ್ಲಿ ಅನಿತಾ ಸೈನಿ ಎಂಬ ಯುವತಿ ಕಣಕ್ಕಿಳಿದಿದ್ದು, ಗ್ರಾಮದ ಯುವಕರ ಜ್ವಲಂತ ಸಮಸ್ಯೆಗೆ ನೇರವಾಗಿ ಕೈಹಾಕುವ ಮೂಲಕ ಗಮನ ಸೆಳೆದಿದ್ದಾರೆ.
“ನನ್ನ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಊರಿನಲ್ಲಿ ಮದುವೆಯಾಗದೆ ಉಳಿದಿರುವ ಎಲ್ಲ ಯುವಕರಿಗೆ ಕನ್ಯೆ ಹುಡುಕಿ ಮದುವೆ ಮಾಡಿಸುತ್ತೇನೆ. ಇದಕ್ಕಾಗಿ ವಧುಗಳನ್ನು ಹುಡುಕಲು ಪ್ರತ್ಯೇಕ ಸಂಸ್ಥೆಯೊಂದನ್ನು ಸ್ಥಾಪಿಸುತ್ತೇನೆ” ಎಂದು ಅವರು ಭರವಸೆ ನೀಡಿದ್ದಾರೆ.
ಈ ವಿಶಿಷ್ಟ ಭರವಸೆಯಿಂದ ಗ್ರಾಮದ ಯುವಕರು ಮಾತ್ರವಲ್ಲದೆ, ವಯಸ್ಸಾದರೂ ಮದುವೆಯಾಗದ ಅವಿವಾಹಿತರು ಫುಲ್ ಖುಷ್ ಆಗಿದ್ದಾರೆ.
ಲಿಂಗಾನುಪಾತದ ಸಮಸ್ಯೆ: ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ, ಪಂಜಾಬ್ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಲಿಂಗಾನುಪಾತದ ವ್ಯತ್ಯಾಸದಿಂದಾಗಿ ಯುವಕರಿಗೆ ಹೆಣ್ಣು ಸಿಗುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ವಿಶೇಷ ಸಂಸ್ಥೆ ಸ್ಥಾಪನೆ: ಗೆದ್ದ ನಂತರ ಅವಿವಾಹಿತ ಯುವಕರಿಗೆ ವಧುಗಳನ್ನು ಹುಡುಕಲು ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸುವುದಾಗಿ ಅಭ್ಯರ್ಥಿ ಅನಿತಾ ಸೈನಿ ಭರವಸೆ ನೀಡಿದ್ದಾರೆ.
ರಾಜಕೀಯ ಅಸ್ತ್ರ: ಜಜ್ಜರ್ ಗ್ರಾಮದ ಪ್ರತಿಯೊಂದು ಕುಟುಂಬದಲ್ಲೂ ಇರುವ ಅವಿವಾಹಿತರ ಸಮಸ್ಯೆಯನ್ನೇ ರಾಜಕೀಯ ಅಸ್ತ್ರವನ್ನಾಗಿಸಿಕೊಂಡು ಯುವಕರು ಮತ್ತು ಪೋಷಕರ ಮತಗಳನ್ನು ಸೆಳೆಯುವ ತಂತ್ರ ರೂಪಿಸಲಾಗಿದೆ.
ಅನಿತಾ ಸೈನಿ ನೀಡಿರುವ ಈ ಭರವಸೆ ಚುನಾವಣಾ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಈಕೆ ಚುನಾವಣೆ ಗೆದ್ದು ಭರವಸೆ ಈಡೇರಿಸುತ್ತಾಳೋ ಇಲ್ಲವೋ ಎಂಬುದು ಮುಂದಿನ ಮಾತು, ಆದರೆ ಈ ಒಂದೇ ಒಂದು ವಿನೂತನ ಘೋಷಣೆಯಿಂದ ಅನಿತಾ ಸೈನಿ ದೇಶಾದ್ಯಂತ ಭಾರಿ ಸುದ್ದಿಯಾಗಿದ್ದಾರೆ.





Leave a comment