ವಾಷಿಂಗ್ಟನ್ / ಲ್ಯಾಂಡ್ ಓವರ್: ಅಮೆರಿಕದ ಕಾಂಗ್ರೆಸ್ ಸಭೆಯ ಉಭಯ ಸದನಗಳ ನಿಯಂತ್ರಣವನ್ನು ನಿರ್ಧರಿಸುವ 2026ರ ಅಮೆರಿಕ ಮಧ್ಯಾಂತರ ಚುನಾವಣೆಯ ಫಲಿತಾಂಶಗಳು ಹೊರಬೀಳಲು ಆರಂಭವಾಗಿದ್ದು, ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.
ಒಹಾಯೋ ರಾಜ್ಯದ ಗವರ್ನರ್ ಹುದ್ದೆಯ ರೇಸ್‌ನಲ್ಲಿ ಭಾರತೀಯ ಮೂಲದ ರಿಪಬ್ಲಿಕನ್ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಅವರು ಡೆಮಾಕ್ರಟಿಕ್ ಅಭ್ಯರ್ಥಿ ಆಮಿ ಆಕ್ಟನ್ ವಿರುದ್ಧ ಹಿನ್ನಡೆ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ಫ್ಲೋರಿಡಾ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಪ್ರಮುಖ ತಿರುವುಗಳು ಕಂಡುಬಂದಿವೆ.
ಇರಾನ್ ಯುದ್ಧದ ಪರಿಣಾಮ, ಜಾಗತಿಕ ಇಂಧನ ಮಾರುಕಟ್ಟೆಯ ಬಿಕ್ಕಟ್ಟು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳ ಮೇಲಿನ ಜನಾಭಿಪ್ರಾಯ ಎಂದೇ ಈ ಚುನಾವಣೆಯನ್ನು ವಿಶ್ಲೇಷಿಸಲಾಗುತ್ತಿದೆ. ಹೌಸ್ ಆಫ್ ರಿಪ್ರೆಸೆಂಟೇಟಿವ್ಸ್ ಹಾಗೂ ಸೆನೆಟ್‌ನಲ್ಲಿ ರಿಪಬ್ಲಿಕನ್ನರು ತಮ್ಮ ಅತ್ಯಲ್ಪ ಬಹುಮತವನ್ನುಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಡೆಮಾಕ್ರಟನ್ನರು ಅಧಿಕಾರವನ್ನು ಕಸಿದುಕೊಳ್ಳಲು ತೀವ್ರ ಪೈಪೋಟಿ ನೀಡುತ್ತಿದ್ದಾರೆ.
ನ್ಯೂಜೆರ್ಸಿ ಫಲಿತಾಂಶ: ನ್ಯೂಜೆರ್ಸಿಯ 7ನೇ ಕಾಂಗ್ರೇಶನಲ್ ಕ್ಷೇತ್ರದಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ರೆಬೆಕಾ ಬೆನ್ನೆಟ್ ಅವರು ರಿಪಬ್ಲಿಕನ್ ಸಂಸದ ಥಾಮಸ್ ಹೆಚ್. ಕೀನ್ ಜೂನಿಯರ್ ಅವರನ್ನು ಸೋಲಿಸಿ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಒಕ್ಲಹೋಮಾ ಸೆನೆಟ್ ಗೆಲುವು: ಒಕ್ಲಹೋಮಾ ಸೆನೆಟ್ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಕೆವಿನ್ ಹೆರ್ನ್ ಅವರು ಡೆಮಾಕ್ರಟಿಕ್ ಅಭ್ಯರ್ಥಿ ಎನ್’ಕಿಲಾ ಜಾಸ್ಮಿನ್ ಥಾಮಸ್ ಅವರನ್ನು ಮಣಿಸಿ ವಿಜಯ ಸಾಧಿಸಿದ್ದಾರೆ.
ಸದನಗಳ ಸಂಖ್ಯಾಬಲ: ಪ್ರಸ್ತುತ ಸೆನೆಟ್‌ನಲ್ಲಿ ರಿಪಬ್ಲಿಕನ್ನರು 53-47 ಬಹುಮತ ಹೊಂದಿದ್ದರೆ, 435 ಸದಸ್ಯರ ಹೌಸ್‌ನಲ್ಲಿ 218 ರಿಪಬ್ಲಿಕನ್ ಹಾಗೂ 214 ಡೆಮಾಕ್ರಟಿಕ್ ಬಲವಿದೆ. ಡೆಮಾಕ್ರಟನ್ನರಿಗೆ ಸೆನೆಟ್‌ನಲ್ಲಿ 4 ಮತ್ತು ಹೌಸ್‌ನಲ್ಲಿ 3 ಹೆಚ್ಚುವರಿ ಸ್ಥಾನಗಳ ಅಗತ್ಯವಿದೆ.
ಈ ನಡುವೆ ಟೆಕ್ಸಾಸ್, ಮಿಚಿಗನ್, ಮೇನ್ ಮತ್ತು ಅಲಸ್ಕಾಗಳಲ್ಲಿ ಮತ ಎಣಿಕೆ ಮುಂದುವರಿದಿದ್ದು, ಅಮೆರಿಕದ ರಾಜಕೀಯ ಭವಿಷ್ಯ ತೀವ್ರ ಕುತೂಹಲ ಮೂಡಿಸಿದೆ.





Leave a comment