SUDDIKSHANA KANNADA NEWS/ DAVANAGERE/ DATE:25-06-2024
ದಾವಣಗೆರೆ: ಬೆಲೆ ಏರಿಕೆ ಕಾಂಗ್ರೆಸ ಸರ್ಕಾರದ ಆರನೇ ಗ್ಯಾರಂಟಿ ಎಂದು ಮಹಾನಗರ ಪಾಲಿಕೆ ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯೆ ಉಮಾ ಪ್ರಕಾಶ್ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಸ್ಕೀಮ್ ಗಳನ್ನು ಪಡೆಯುತ್ತಿರುವ ಜನರಿಗೆ ಸರ್ಕಾರ ಶಾಕ್ ಮೇಲೆ ಶಾಕ್ ಕೊಡುತ್ತಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಲ್ಲೇ ಹಾಲಿನ ದರವನ್ನೂ ಹೆಚ್ಚಿಸಿದೆ ಎಂದು ಕಿಡಿಕಾರಿದ್ದಾರೆ.
ಐದು ಗ್ಯಾರಂಟಿಗಳನ್ನು ನೀಡಿದ್ದ ಕಾಂಗ್ರೆಸ್ ಸರ್ಕಾರಕ್ಕೆ ತಾವು ಎಷ್ಟು ವಾಪಸ್ ಕೊಡುತ್ತಿದ್ದೇವೆ ಎಂಬ ಅರಿವಿಲ್ಲ. ಮನೆ ಕಂದಾಯ ಹೆಚ್ಚಳ, ನೀರಿನ ಕಂದಾಯ ಹೆಚ್ಚಳ, ಸ್ಟ್ಯಾಂಪ್ ಶುಲ್ಕ ಏರಿಕೆ, ಅಬಕಾರಿ ಸುಂಕ ಹೆಚ್ಚಳ, ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ, ಈಗ ಹಾಲಿನ ದರ ಹೆಚ್ಚಳ, ಇವೆಲ್ಲವೂ ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿಯಾಗಿದೆ. ಸರ್ಕಾರ ನಡೆಸುವವರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಡವರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಡುವುದನ್ನು ಬಿಟ್ಟು ಅನುಕೂಲಸ್ಥರಿಗೂ ಸರ್ಕಾರದ ಪುಕ್ಕಟೆ ಯೋಜನೆಗಳನ್ನು ನೀಡಿ ಸರ್ಕಾರದ ಬೊಕ್ಕಸ ಖಾಲಿ ಮಾಡಿ ಈಗ ಬೊಕ್ಕಸ ತುಂಬಿಕೊಳ್ಳಲು ಬೆಲೆ ಏರಿಕೆ ಎಂಬ ಆರನೇ ಗ್ಯಾರಂಟಿಯನ್ನು ಚುನಾವಣೆ ಮುಂಚೆ ಘೋಷಿಸದೇ ಈಗ ಘೋಷಿಸುವ ಮೂಲಕ ಜಾರಿ ಮಾಡಲಾಗುತ್ತಿದೆ. ಕರ್ನಾಟಕದ ಜನತೆ ಇನ್ನು ಯಾವ ಯಾವ ಬೆಲೆ ಏರಿಕೆ ಮಾಡಬಹುದು ಎಂದು 6ನೇ ಗ್ಯಾರಂಟಿಯ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ.