SUDDIKSHANA KANNADA NEWS/ DAVANAGERE/ DATE:02-11-2024
ದಾವಣಗೆರೆ: ನಗರದ ಕೆಟಿಜೆ ನಗರ ಪೊಲೀಸರು ಮೊಬೈಲ್ ಸುಲಿಗೆ ಮಾಡಿದ್ದವರನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ.
ಕಳೆದ ತಿಂಗಳು 31ರಂದು ಬಾಬು ಎಂಬುವವರು ತನ್ನ ಅಜ್ಜಿಯ ಮನೆಗೆ ಹೋಗಲು ದಾವಣಗೆರೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬಂದು ಆಟೋದಲ್ಲಿ ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ಯಾರೋ ಸುಮಾರು 19-20 ವರ್ಷ ವಯಸ್ಸಿನ
ಇಬ್ಬರು ಹುಡುಗರು ಮೊಬೈಲ್ ಅನ್ನು ಸುಲಿಗೆ ಮಾಡಿಕೊಂಡು ಹೋಗಿದ್ದರು ಎಂದು ದೂರು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪೊಲೀಸ್ ಇನ್ ಸ್ಪೆಕ್ಟರ್ ಸುನೀಲ್ ಕುಮಾರ್.ಹೆಚ್.ಎಸ್. ಅವರು ಈ ಕೇಸ್ ನಲ್ಲಿ ಆರೋಪಿ ಹಾಗೂ ಮಾಲು ಪತ್ತೆಗೆ ಸಿಬ್ಬಂದಿಯವರ ತಂಡ ರಚನೆ ಮಾಡಿ ಎಸ್.ಎಸ್.ಹೈಟೆಕ್ ಆಸ್ಪತ್ರೆ ರಸ್ತೆ ಹತ್ತಿರದ ಎನ್.ಹೆಚ್.-4 ಬೈಪಾಸ್
ಸರ್ವಿಸ್ ರಸ್ತೆಯಲ್ಲಿ ಪಿರ್ಯಾದಿಯವರು ದೂರಿನಲ್ಲಿ ನೀಡಿದ ಚಹರೆ ಗುರುತಿನ ಮಾಹಿತಿ ಪಡೆದರು. ಆರೋಪಿತರಾದ ದಾವಣಗೆರೆಯ ಹರಳಯ್ಯ ನಗರದ ಹಳೇಚಿಕ್ಕನಹಳ್ಳಿಯ ಪೇಂಟ್ ಕೆಲಸ ಮಾಡುತ್ತಿದ್ದ ಶಿವಮೊಗ್ಗದ ನವಲೆ ಡಬಲ್ ರಸ್ತೆಯ ಬಸ್ ನಿಲ್ದಾಣದ ಸಮೀಪ ವಾಸವಿದ್ದ ಅರವಿಂದ ಎಂ ಅಲಿಯಾಸ್ ಎಂ.ಸಿ.ಸ್ಟಾಂಡ್ (19), ನಿಟ್ಟುವಳ್ಳಿಯ ತರಕಾರಿ ಮಾರ್ಕೆಟ್ ನಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಕಿರಣ್ ನಾಯ್ಕ (19)ನನ್ನು ಬಂಧಿಸಲಾಗಿದೆ.
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿತರು ಸುಲಿಗೆ ಮಾಡಿಕೊಂಡು ಹೋಗಿದ್ದ ಪಿರ್ಯಾದಿಯವರ 9,000 ರೂ. ಬೆಲೆಯ ಇನ್ ಫಿಕ್ಸ್ ಹಾಟ್ 401ಕಂಪನಿಯ ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ ಹೋಂಡಾ ಡಿಯೋ ಬೈಕನ್ನು ವಶ ಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್ ಮತ್ತು ಮಂಜುನಾಥ್ ರ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್.ಹೆಚ್.ಎಸ್. ನೇತೃತ್ವದ ತಂಡದ ಪಿ.ಎಸ್.ಐ ಸಾಗರ ಅತ್ತರವಾಲ ಮತ್ತು ಲತಾ.ಆರ್, ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಪುರುಶೋತ್ತಮ, ಸಿದ್ದಪ್ಪ, ಮಾರುತಿ.ಸಿ.ಜಿ. ಮತ್ತು ಗೀತಾ.ಸಿ.ಕೆ. ಅವರನ್ನೊಳಗೊಂಡ ತಂಡುವು ಆರೋಪಿತರನ್ನು 24 ಗಂಟೆಗಳ ಒಳಗಾಗಿ ಬಂಧಿಸಿ ಸ್ವತ್ತು ವಶಪಡಿಸಿಕೊಂಡಿದ್ದಕ್ಕೆ ಎಸ್ಪಿ ಉಮಾ ಪ್ರಶಾಂತ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.