SUDDIKSHANA KANNADA NEWS/ DAVANAGERE/ DATE:18-07-2024
ದಾವಣಗೆರೆ: ಮಲೆನಾಡಿನ ಭಾಗದಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದ್ದು ತುಂಗಭದ್ರಾ ನದಿಯಲ್ಲಿನ ನೀರಿನ ಹರಿವು ಹೆಚ್ಚಳವಾಗಿದೆ. ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ನದಿಪಾತ್ರದಲ್ಲಿನ ಜನ, ಜಾನುವಾರುಗಳ ರಕ್ಷಣೆಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದ್ದಾರೆ.
ತುಂಗಾ ಜಲಾಶಯದಿಂದ ಸುಮಾರು 50 ಸಾವಿರ ಕ್ಯೂಸೆಕ್ಸ್ ಗಿಂತಲೂ ಅಧಿಕ ನೀರು ಬಿಡಲಾಗುತ್ತಿದ್ದು ಈ ಪ್ರಮಾಣ ಇನ್ನೂ ಹೆಚ್ಚಳವಾಗುವ ನಿರೀಕ್ಷೆ ಇರುವುದರಿಂದ ಹೊನ್ನಾಳಿಯ ಬಾಲರಾಜ್ ಘಾಟ್ ಬಳಿ ಸಮಸ್ಯೆಯಾಗಲಿದೆ. ಇಲ್ಲಿನ ಜನರಿಗೆ ತಾತ್ಕಾಲಿಕವಾಗಿ ಕಾಳಜಿ ಕೇಂದ್ರ ತೆರೆಯಲು ಹಾಗೂ ಹರಿಹರದ ಗಂಗಾ ನಗರದ ಬಳಿ ನೀರಿನ ಪ್ರಮಾಣ ಹೆಚ್ಚಳದಿಂದ ಜನರಿಗೆ ತೊಂದರೆಯಾಗಲಿದೆ. ಇಲ್ಲಿನ ಜನರಿಗೆ ತಾತ್ಕಾಲಿಕವಾಗಿ ಎಪಿಎಂಸಿ ಭವನದಲ್ಲಿ ಕಾಳಜಿಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳುವಂತೆ ತಹಶೀಲ್ದಾರ್ ಗೆ ಹೇಳಿದ್ದಾರೆ.
ಹೊನ್ನಾಳಿಯಲ್ಲಿ ವಿಪತ್ತು ನಿರ್ವಹಣೆ ಪರಿಶೀಲನೆಗಾಗಿ ಜುಲೈ 23 ರಂದು ಸಭೆ ಕರೆಯಲಾಗಿದೆ. ನದಿಯಲ್ಲಿ ನೀರಿನ ಹರಿವು ಏರಿಕೆಯಾಗುವುದರಿಂದ ವಿಪತ್ತು ನಿರ್ವಹಣಾ ತಂಡವನ್ನು ಸನ್ನದ್ದವಾಗಿಡಲು ಸೂಚನೆ ನೀಡಲಾಗಿದೆ. ಸಾರ್ವಜನಿಕರು
ನದಿ ಪಾತ್ರದಲ್ಲಿ ಓಡಾಟ ಮಾಡಬಾರದು ಮತ್ತು ಜಾನುವಾರುಗಳನ್ನು ನದಿಗೆ ಇಳಿಸದಂತೆ ನೋಡಿಕೊಳ್ಳಲು ಸೂಚಿಸಿ ಎಚ್ಚರಿಕೆಯಿಂದಿರಲು ಡಿಸಿ ಗಂಗಾಧರ ಸ್ವಾಮಿ ತಿಳಿಸಿದ್ದಾರೆ.