SUDDIKSHANA KANNADA NEWS/ DAVANAGERE/ DATE:24-02-2024
ದಾವಣಗೆರೆ: ಅದು ನಿಜಕ್ಕೂ ಧನ್ಯತಾ ಭಾವ. ಅಲ್ಲಿ ಖುಷಿಯ ಜೊತೆಗೆ ಭಾವನಾತ್ಮಕ ಕ್ಷಣವೂ ಏರ್ಪಟ್ಟಿತ್ತು. ಮಕ್ಕಳು ಕೆಳಗಡೆ ಕುಳಿತಿದ್ದರು. ಪೋಷಕರು ಚೇರ್ ಮೇಲೆ ಕುಳಿತಿದ್ದರು. ಪೋಷಕರಿಗೆ ಮಕ್ಕಳಿಂದ ಪೂಜೆ ಮಾಡಿಸಿಕೊಂಡ ಸಂತಸ. ಮಕ್ಕಳಿಗೆ ದೇವರ ಸ್ವರೂಪವಾದ ತಂದೆ ತಾಯಿಗೆ ಪೂಜೆ ಸಲ್ಲಿಸಿದ ಖುಷಿಯ ಕ್ಷಣ.
ಇಂದಿನ ಆಧುನಿಕ ಯುಗದಲ್ಲಿ ಪೋಷಕರು ಮಕ್ಕಳನ್ನು ವೃದ್ಧಾಶ್ರಮದಲ್ಲಿ ಬಿಟ್ಟು ವಿದೇಶಗಳಲ್ಲಿ ಬದುಕುತ್ತಾರೆ. ಕೆಲವರಂತೂ ಹಣ ಕಳುಹಿಸಿದರೆ ಆಯ್ತು, ಅವರು ಹೇಗೋ ಬದುಕುತ್ತಾರೆ ಎಂದು ಸುಮ್ಮನಾಗಿ ಬಿಡುತ್ತಾರೆ.
ತಂದೆ ತಾಯಿ ಮೃತಪಟ್ಟರೂ ನೋಡದಂಥ ನತದೃಷ್ಟ ಮಕ್ಕಳೂ ಇದ್ದಾರೆ. ಆದ್ರೆ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಲ್ಲಿ ಪೋಷಕರ ಬಗ್ಗೆ ಗೌರವ ಭಾವನೆ ಮೂಡಿಸುವ ಸಲುವಾಗಿ ವಿಶಿಷ್ಟ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.
ಇಂಥ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ನಗರದ ಈಶ್ವರಮ್ಮ ಶಾಲೆಯ ಪ್ರಶಾಂತಿ ಸಭಾಂಗಣ. ಎಸ್. ಎಸ್. ಎಲ್ ಸಿ ವಿದ್ಯಾರ್ಥಿಗಳಿಂದ ಅವರ ಪೋಷಕರಿಗೆ ಏರ್ಪಡಿಸಿದ್ದ ಪಾದಪೂಜೆ ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಯಿತು. ಮಾತಾ – ಪಿತೃ ವಂದನಾ ಸಮಾರಂಭಕ್ಕೆ ಅರ್ಥ ಬಂತು. ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಪಾದಪೂಜೆಗೆ ವಿಶಿಷ್ಟ ಗೌರವ, ಮಹತ್ವ ಇದೆ. ಶ್ರೀದೇವಿ ಬಿ. ಮಾತಾ-ಪಿತೃ ವಂದನಾ ಕಾರ್ಯಕ್ರಮದ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಪೋಷಕರು ಮಕ್ಕಳ ಏಳಿಗೆ, ಬದುಕು ರೂಪಿಸಲು, ಶಿಕ್ಷಣ ಕೊಡಿಸಲು, ದೊಡ್ಡವರನ್ನಾಗಿ ಮಾಡಲು ಪಡುವ ಕಷ್ಟ ಅಷ್ಟಿಷ್ಟಲ್ಲ. ಮಕ್ಕಳ ಭವಿಷ್ಯವೇ ತಮ್ಮ ಜೀವನ ಎಂದುಕೊಂಡ ಪೋಷಕರ ಪಾದಪೂಜೆ ನಡೆಸುವ ಮೂಲಕ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯ್ತು. ಕೆಲ ಪೋಷಕರ ಕಣ್ಣಂಚಲಿ ನೀರು ಜಿನುಗಿದರೆ, ಮತ್ತೆ ಕೆಲವರ ಕಣ್ಣಲ್ಲಿ ಆನಂದ ಭಾಷ್ಪ ಸುರಿಯಿತು. ಮಕ್ಕಳಂತೂ ತಂದೆ ತಾಯಿ ಪಾದ ತೊಳೆದು ಪೂಜೆ ಮಾಡಿ ಊದುಬತ್ತಿ ಬೆಳಗಿ ಸಂಭ್ರಮಿಸಿದರು.
ಅಲ್ಲಿ ತಂದೆ ತಾಯಿಯರೇ ದೇವರಾಗಿದ್ದರು. ತಮ್ಮ ಮಕ್ಕಳೇ ಪೂಜಾರಿಗಳಾಗಿದ್ದರು. ಎಲ್ಲರ ಕಣ್ಣಂಚಿನಲ್ಲೂ ನೀರು ತುಂಬಿ ಬಂದಿತ್ತು. ಎಲ್ಲರ ಹೃದಯಗಳು ತುಂಬಿ ಬಂದಿದ್ದು ಧನ್ಯತೆಯ ಭಾವ ಮನೆ ಮಾಡಿತ್ತು. ನಗರದ ಈಶ್ವರಮ್ಮ ಶಾಲೆಯ ಪ್ರಶಾಂತಿ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಅವರ ಪೋಷಕರಿಗೆ ಪಾದಪೂಜೆ ನೇರವೇರಿಸುವ ಮಾತಾ-ಪಿತೃ ವಂದನಾ ಕಾರ್ಯಕ್ರಮವು ಅದ್ಭುತ ಕ್ಷಣಗಳು ಕಂಡು ಬಂದವು.
ರಾಜನಹಳ್ಳಿ ಜಿ. ಶ್ರೀನಿವಾಸ ಮೂರ್ತಿ ಏನಂದ್ರು..?
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆರ್.ಜಿ.ಎಸ್. ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಜನಹಳ್ಳಿ ಜಿ. ಶ್ರೀನಿವಾಸ ಮೂರ್ತಿ ಅವರು ಮಾತನಾಡಿ, ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ. ಪೋಷಕರಿಗೆ ಪಾದಪೂಜೆ ನೆರವೇರಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ ಈಶ್ವರಮ್ಮ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಈ ಅದೃಷ್ಟ ದೊರೆತಿದೆ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಇದೊಂದು ಜೀವನದ ತಿರುವಿನಂಶವಾಗಿದೆ. ಪೋಷಕರು ಮಕ್ಕಳಿಗೆ ಒತ್ತಡ ಹೇರದೇ, ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದೇ ಕ್ಷೇತ್ರದಲ್ಲಿ ಮುಂದುವರೆದು ಸಾಧಿಸಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಮಕ್ಕಳು ಎಷ್ಟೇ ಹಣ ಗಳಿಸಿದರೂ, ತಂದೆ-ತಾಯಿಯರಿಗೆ ವೃದ್ದಾಪ್ಯದಲ್ಲಿ ಪ್ರೀತಿಯ ಆಸರೆಯಾಗಿರಬೇಕು. ಅವರಿಗೆ ಊರುಗೋಲಿನ ಅವಶ್ಯಕತೆ ಬೀಳದಂತೆ, ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಸಲಹೆ ನೀಡಿದ್ರು.
ಮತ್ತೊಬ್ಬ ಅತಿಥಿಗಳಾಗಿ ಆಗಮಿಸಿದ್ದ ಹೇಮಾ ಶ್ರೀನಿವಾಸ ಅವರು ಮಕ್ಕಳು ತಪ್ಪು ಮಾಡುವುದು ಸಹಜ, ಭಾರತೀಯ ಸಂಸ್ಕೃತಿಯಲ್ಲಿ ತಂದೆ-ತಾಯಿಗಳ ಪಾದಕ್ಕೆ ನಮಸ್ಕರಿಸಿ, ಕ್ಷಮೆ ಕೋರುವುದು ವಿಭನ್ನವಾಗಿದೆ. ನಮಸ್ಕಾರ ಎನ್ನುವುದು ತಪ್ಪಿಗೆ ವಿರಾಮವಾಗಬೇಕು. ಪುನರಾವರ್ತನೆಯಾಗಬಾರದು. ಮಕ್ಕಳು ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು, ಚೆನ್ನಾಗಿ ಓದಿ ಹೆಚ್ಚು ಅಂಕಗಳನ್ನು ಗಳಿಸಬೇಕೆಂಬುದು ಪ್ರತಿಯೊಬ್ಬ ತಂದೆ-ತಾಯಿಯರ ಆಸೆಯಾಗಿರುತ್ತದೆ. ಮಕ್ಕಳು ಸಂಸ್ಕಾರವಂತರಾಗಿ ಪೋಷಕರ ಆಸೆಯನ್ನು ನೇರವೇರಿಸಬೇಕೆಂದು ಮಾತನಾಡಿದರು.
ಕೆ. ವಿ. ಸುಜಾತಾ ಏನಂದ್ರು…?
ಈಶ್ವರಮ್ಮ ಶಾಲಾಡಳಿತ ಮಂಡಳಿ ಸದಸ್ಯೆ ಕೆ. ವಿ. ಸುಜಾತ ಅವರು ಅಮ್ಮನ ಮಮತೆ ಆಕಾಶದಷ್ಟು ವಿಶಾಲ, ಅಪ್ಪನ ಉದಾರತೆ ಆಕಾಶದಲ್ಲಿ ಮಿನುಗುವ ಲೆಕ್ಕವಿರದಷ್ಟು ನಕ್ಷತ್ರಗಳಿದ್ದಂತೆ. ಪುರಾಣ ಕಾಲದಿಂದ ತಂದೆ-ತಾಯಿಯರ ಹೆಸರಿಸಿನ ಜೊತೆ ಮಹಾತ್ಮರ ಹೆಸರನ್ನು ಸೇರಿಸಿ, ಹೇಳುವುದನ್ನು ಕೇಳಿದ್ದೇವೆ. ಆದ್ದರಿಂದ ತಂದೆ-ತಾಯಿಯರಿಗೆ ಗೌರವಿಸಿ, ಒಳ್ಳೆಯ ಕೆಲಸಗಳನ್ನು ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಡಳಿತ ಮಂಡಳಿಯ ಅಧ್ಯಕ್ಷೆ ಸುಜಾತಾ ಕೃಷ್ಣ ಕೆ.ಆರ್. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಾಲೆಯ ಸಂಸ್ಥಾಪಕರಾದ ಮಾತೃಸ್ವರೂಪಿಗಳಾದ ಬಿ. ಆರ್. ಶಾಂತ ಕುಮಾರಿಯರು ನಮ್ಮನ್ನಗಲಿ 3 ವರ್ಷಗಳಾದವು. ಆದರೆ ಅವರ ಆದರ್ಶಗಳು ಮಾತ್ರ ನಮ್ಮೆಲ್ಲರಲ್ಲಿ ಮೇಳೈಸಿವೆ. ಯಾರು ತಂದೆ-ತಾಯಿಗಳನ್ನು ಗೌರವಿಸುತ್ತಾರೋ ಅವರನ್ನು ಎಲ್ಲರು ಗೌರವಿಸುತ್ತಾರೆ. ನಿಸ್ವಾರ್ಥ ಪ್ರೇಮವನ್ನು ತಂದೆ-ತಾಯಿಗಳಲ್ಲಿ ಮಾತ್ರ ನೋಡಲು ಸಾಧ್ಯ. ತಂದೆ-ತಾಯಿ ಗುರುಗಳನ್ನು ಗೌರವಿಸಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಲಾಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಎ. ಆರ್. ಉಷಾ ರಂಗನಾಥ್ ಮತ್ತು ಖಜಾಂಚಿ ಎ. ಪಿ. ಸುಜಾತಾ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲರಾದ ಕೆ. ಎಸ್. ಪ್ರಭು ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಜಿ. ಎಸ್. ಶಶಿರೇಖಾ ವಂದಿಸಿದರು. ರಂಜನಿ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಸಂಗೀತ ಶಿಕ್ಷಕಿ ವಿದ್ಯಾ ಹೆಗಡೆ ಭಾವಗೀತೆಗಳನ್ನು ಹಾಡಿದರು. ನೂರಾರು ಮಕ್ಕಳು, ಪೋಷಕರು ಆಗಮಿಸಿದ್ದರು. ಶಾಲಾ ಆಡಳಿತ ಮಂಡಳಿ ಏರ್ಪಡಿಸಿದ್ದ ಈ ಕಾರ್ಯಕ್ರಮ ಪ್ರತಿಯೊಬ್ಬರಲ್ಲಿಯೂ ಖುಷಿ ತರುವ ಜೊತೆಗೆ ಪೋಷಕರಲ್ಲಿಯೂ ಸಂಭ್ರಮ ಮನೆ ಮಾಡಿತ್ತು. ಮಕ್ಕಳಿಂದ ಪಾದಪೂಜೆ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಪೋಷಕರು ಇಂಥ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು ಎಂದು ಆಶಿಸಿದರು.