SUDDIKSHANA KANNADA NEWS/ DAVANAGERE/ DATE:24-02-2024
ದಾವಣಗೆರೆ: ದಾವಣಗೆರೆ ಜಿಲ್ಲೆಯ ಜೀವನಾಡಿ ಭದ್ರಾ ಜಲಾಶಯದ ನೀರು. ಜಿಲ್ಲೆಗೆ ತಲುಪದ ಹಿನ್ನೆಲೆಯಲ್ಲಿ ರೈತರು ಹತ್ತಾರು ವರ್ಷಗಳಿಂದ ಬೆವರು ಸುರಿಸಿ ಬೆಳೆಸಿದ ತೋಟಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದಾರೆ. ಜೊತೆಗೆ ಬೋರ್ ವೆಲ್ ಸಹ ಬತ್ತಿ ಹೋಗುತ್ತಿದ್ದು, ಅಂತರ್ಜಲ ಮಟ್ಟ ಕುಸಿದು ಹೋಗಿದೆ. ರೈತರ ಬದುಕು ಮೂರಾಬಟ್ಟೆಯಾಗಿದೆ.
ಈಗಿರುವ ಬೋರ್ ವೆಲ್ ಬತ್ತಿ ಹೋಗುತ್ತಿದ್ದು ಅಂತರ್ಜಲ ಮಟ್ಟ ಕುಸಿದು ಹೋಗಿದೆ. ಆದ್ರೂ ರೈತರು ಮನೆ ಮಡದಿಯ ಮೈ ಮೇಲಿರುವ ಬಂಗಾರ ಆಡವಿಟ್ಟು ಬೋರ್ವಲ್ ಕೊರೆಸುವಂಥ ದುಃಸ್ಥಿತಿ ನಿರ್ಮಾಣವಾಗಿದೆ. 800 ಅಡಿಗಳವರೆಗೆ ಕೊರೆಸಿದ್ರೂ ನೀರು ಸಿಗುತ್ತಿಲ್ಲ. ಕೆಲವರು ಇದ್ದ ಬೋರ್ ಗಳಲ್ಲಿ ನೀರು ಕಡಿಮೆಯಾಗಿರುವುದರಿಂದ ಬೋರ್ ಕೊರೆಸುತ್ತಿದ್ದಾರೆ. ಕೆರೆ ಕಟ್ಟೆಗಳು ನೀರಿಲ್ಲದೇ ಬಣ ಬಣ ಎನ್ನುತ್ತಿವೆ.
ಒಂದು ಕಡೆ ಭೀಕರ ಬರ. ಮತ್ತೊಂದು ಕಡೆ ಭದ್ರಾ ನೀರು ಜಿಲ್ಲೆಗೆ ಹರಿಯದಿರುವುದು ರೈತರನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡುವಂತೆ ಮಾಡಿದೆ. ಇದರಿಂದ ರೈತರು ಮತ್ತು ಜನಸಾಮಾನ್ಯರು ನೀರು ಬೇಕು ನೀರು ಎನ್ನುವಂತ ವಾತಾವರಣ ನಿರ್ಮಾಣ ಆಗಿದೆ. ನೀರಿನ ಸಮಸ್ಯೆ ತೀವ್ರವಾಗಿದೆ. ಹಲವಾರು ರೈತರು ಟ್ಯಾಂಕರ್ ಗಳ ಮೂಲಕ ನೀರು ಹರಿಸಿ ತೋಟ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ಟ್ಯಾಂಕರ್ ನೀರೇ ಗತಿಯಾಗಿದೆ. ಬಿಸಿಲಿನ ತಾಪ ದಿನೇ ದಿನೇ ಹೆಚ್ಚುತ್ತಿದ್ದು, ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಲು ಆರಂಭಿಸಿದೆ. ಮುಂದಿನ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಕುಡಿಯುವ ನೀರಿನ ದಾಹ ಏರಿಕೆಯಾಗಿ ಹಾಹಾಕಾರವಾಗುವ ಎಲ್ಲಾ ಲಕ್ಷಣಗಳು ಜಿಲ್ಲೆಯಲ್ಲಿ ಗೋಚರಿಸುತ್ತಿವೆ.
ಬೇಸಿಗೆಯ ಆರಂಭಿಕ ಹಂತದಲ್ಲೇ ದಾವಣಗೆರೆ ಜಿಲ್ಲೆ ಕಾದ ಕಾವಲಿಯಂತಾಗಿದೆ. ಗರಿಷ್ಠ ತಾಪಮಾನ ವಾಡಿಕೆಯ ಪ್ರಮಾಣವನ್ನು ಮೀರಿದೆ. ಭದ್ರಾ ನೀರು ಕೂನೆ ಭಾಗಕ್ಕೆ ತಲುಪಿದ್ದರೆ ಈ ರೀತಿಯ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ. ಭದ್ರಾ ನೀರಾವರಿ ಸಲಹಾ ಸಮಿತಿ ( ಐಸಿಸಿ ) ಸಭೆಯ ಅವೈಜ್ಞಾನಿಕ ತೀರ್ಮಾನದಿಂದಾಗಿ ನಮ್ಮ ಜಿಲ್ಲೆಗೆ ನಾಲೆಗಳಲ್ಲಿ ನೀರು ಹರಿದು ಬಂದಿಲ್ಲ. ಐಸಿಸಿ ಸಭೆಗೆ ಜಿಲ್ಲಾಧಿಕಾರಿಯವರು, ಕೃಷಿ , ತೋಟಗಾರಿಕೆ ಮತ್ತು ನೀರಾವರಿ ಅಧಿಕಾರಿಗಳೊಂದಿಗೆ ಹಾಜರಾಗಿದ್ದರೂ ಸಹ ಜಿಲ್ಲೆಯ ನೀರಿನ ಅವಶ್ಯಕತೆ, ಅಚ್ಚುಕಟ್ಟು ಪುದೇಶದ ವ್ಯಾಪ್ತಿಯ ಬಗ್ಗೆ ಯಾವುದೇ ಪೂರ್ವ ಸಿದ್ಧತೆಯಿಲ್ಲದ ಕೇವಲ ನೀರಿನ ಗಣಿತದ ಲೆಕ್ಕಾಚಾರಕ್ಕೆ ತಲೆದೂಗಿ ಬರಿಗೈಲಿ ವಾಪಸ್ ಬಂದಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ಆರೋಪಿಸಿದೆ.
ಐಸಿಸಿ ಸಭೆ ಪೂರ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಎಕ್ಸಿಕ್ಯುಟೀವ್ ಇಂಜಿನಿಯರ್ ಆರ್. ಮಂಜುನಾಥ್ರವರು ಕರೆದಿದ್ದ ಸಭೆಯಲ್ಲಿ ಕನಿಷ್ಠ 20 ದಿನ ನೀರು ಹರಿಸಿದ ಜಿಲ್ಲೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ತಲುಪುತ್ತದೆ ಎಂದು ರೈತರು ನಿರ್ಣಯಿಸಿದ್ದರು. ರೈತರ ಈ ನಿರ್ಣಯವನ್ನು ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಐಸಿಸಿ ಸಭೆಯಲ್ಲಿ ಮಂಡಿಸಲಿಲ್ಲ. ಜಿಲ್ಲೆಯ ಶಾಸಕರು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಐಸಿಸಿ ಸಭೆಗೆ ಗೈರು ಹಾಜರಾಗಿ ಜಿಲ್ಲೆಯ ಜನಸಮಾನ್ಯರ ಮತ್ತು ರೈತರ ಹಿತಾಸಕ್ತಿಯನ್ನು ಕಾಪಾಡುವ ಇಚ್ಛಾಶಕ್ತಿ ತೋರಲಿಲ್ಲ. ಅಂದು ಅವರಿಗೆ ನೀರು ಅಮೂಲ್ಯವಾದದ್ದು ಎಂದೆನಿಸಲಿಲ್ಲ ಎಂದು ದೂರಿದೆ.
ಎಸ್. ಎಸ್. ಮಲ್ಲಿಕಾರ್ಜುನ್ ಅವರ ಜಿಲ್ಲಾಧಿಕಾರಿಗಳ ದೂರದೃಷ್ಟಿಯ ಕೊರತೆಯಿಂದ ಇಂದು ನೀರಿನ ಹಾಹಾಕಾರವಾಗಿ ಪರಿಸ್ಥಿತಿ ತೀವ್ರವಾಗಿ ಬಿಗಡಾಯಿಸಿದೆ. ಇದರಿಂದ ರೈತರು ಮತ್ತು ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತವು ರೈತರ ಹಿತ ಗಮನಿಸಬೇಕು ಎಂದು ಮೋರ್ಚಾದ ಪ್ರಮುಖರಾದ ಸತೀಶ್ ಕೊಳೇನಹಳ್ಳಿ ತಿಳಿಸಿದರು.