ಶಿವಮೊಗ್ಗ/ ದಾವಣಗೆರೆ: ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಮದುವೆ-ವಿಚ್ಛೇದನದ ಸುದ್ದಿಗಳು ಸಾಮಾನ್ಯವಾಗಿ ಕಣ್ಣೀರು, ಕೋರ್ಟ್ ಮೆಟ್ಟಿಲೇರುವುದು ಹಾಗೂ ಪರಸ್ಪರ ಆರೋಪಗಳೊಂದಿಗೆ ಕೊನೆಗೊಳ್ಳುತ್ತವೆ. ಆದರೆ ಇಲ್ಲೊಬ್ಬ ಪ್ರಸಿದ್ಧ ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಹಾಗೂ ಟ್ಯಾಟೂ ಆರ್ಟಿಸ್ಟ್, ತಮ್ಮ ಡಿವೋರ್ಸ್ ಅನ್ನು ಅತ್ಯಂತ ವಿಭಿನ್ನವಾಗಿ, ನಗುನಗುತ್ತಾ ಇಡೀ ಜಗತ್ತಿಗೆ ಪರಿಚಯಿಸಿ ನೆಟ್ಟಿಗರನ್ನು ಅಚ್ಚರಿಗೀಡು ಮಾಡಿದ್ದಾರೆ.
ಅವರೇ ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಇನ್‌ಸ್ಟಾಗ್ರಾಮ್ ಸ್ಟಾರ್ ‘ಟ್ಯಾಟೂ ಘೋಸ್ಟ್’ (The Tattoo Ghost). ಇಷ್ಟು ದಿನ ಸಸ್ಪೆನ್ಸ್ ಆಗಿದ್ದ ತಮ್ಮ ಹೆಂಡತಿ ಕಾವ್ಯ ಅವರನ್ನು ಇವರು ಪರಿಚಯಿಸಿದ್ದು ಶಿವಮೊಗ್ಗದ ಫ್ಯಾಮಿಲಿ ಕೋರ್ಟ್ ಮುಂಭಾಗದಲ್ಲಿ! ತಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯುತ್ತಿರುವ ಇಡೀ ಪ್ರಕ್ರಿಯೆಯನ್ನೇ ಇವರು ವಿಡಿಯೋ ಮಾಡಿ ರೀಲ್ಸ್ ರೂಪದಲ್ಲಿ ಹಂಚಿಕೊಂಡಿದ್ದಾರೆ.
ಸ್ನೇಹಿತರಾಗಿ ದೂರವಿರುವುದೇ ಲೇಸು!
ವಿಡಿಯೋದ ಆರಂಭದಲ್ಲಿ ಶಿವಮೊಗ್ಗ ಕೋರ್ಟ್ ಮುಂದೆ ನಿಂತು ಮಾತನಾಡುವ ಟ್ಯಾಟೂ ಘೋಸ್ಟ್, “ಇವತ್ತು ನನ್ನ ಜೀವನದಲ್ಲಿ ಮರೆಯೋಕಾಗದೇ ಇರೋ ದಿನ. ಐದು ವರ್ಷದ ನಂತರ ನಾನು ಇವರನ್ನ ಭೇಟಿಯಾಗುತ್ತಿದ್ದೇನೆ,” ಎನ್ನುತ್ತಾರೆ. “ನಾವು ಕಾರಣಾಂತರಗಳಿಂದ ಸ್ನೇಹಿತರಾಗಿ ಉಳಿದುಕೊಂಡಿದ್ದೇವೆ. ಗಂಡ-ಹೆಂಡತಿಯಾಗಿ ಬಲವಂತವಾಗಿ ಒಟ್ಟಿಗೆ ಬದುಕಿ ಪ್ರತಿದಿನ ಜಗಳವಾಡುವ ಬದಲು, ಫ್ರೆಂಡ್ಶಿಪ್‌ನಲ್ಲಿ ಇದ್ದು ದೂರ ಇರೋದೇ ಒಳ್ಳೆಯದು. ಅದಕ್ಕೇ ಇಬ್ಬರೂ ಒಪ್ಪಿ ಡಿವೋರ್ಸ್ ತಗೋತಾ ಇದ್ದೀವಿ,” ಎಂದು ಅತ್ಯಂತ ಪ್ರಬುದ್ಧತೆಯಿಂದ ಹೇಳಿದ್ದಾರೆ.
ಕೋರ್ಟ್‌ನಲ್ಲಿ ಸಹಿ, ಒಟ್ಟಿಗೆ ಚಹಾ..
ವಿಚ್ಛೇದನದ ಪ್ರಕ್ರಿಯೆ ನಡೆಯುವಾಗ ಇಬ್ಬರಲ್ಲೂ ಯಾವುದೇ ದ್ವೇಷ ಅಥವಾ ಬೇಸರ ಕಾಣಿಸಲಿಲ್ಲ. ವಕೀಲರ ಸಮ್ಮುಖದಲ್ಲಿ ಕಾನೂನಾತ್ಮಕ ಕಾಗದ ಪತ್ರಗಳಿಗೆ ಸಹಿ ಹಾಕಿದ ಬಳಿಕ ಇಬ್ಬರೂ ಒಟ್ಟಿಗೆ ನಿಂತು ನಗುತ್ತಾ ಪೋಸ್ ನೀಡಿದ್ದಾರೆ. ಕೋರ್ಟ್‌ನಿಂದ ಹೊರಬಂದ ಮೇಲೆ ಒಟ್ಟಿಗೆ ಟೀ ಕುಡಿಯುತ್ತಾ ಸೌಹಾರ್ದಯುತವಾಗಿ ಕೊನೆಯ ಕ್ಷಣಗಳನ್ನು ಕಳೆದಿದ್ದಾರೆ.
ವಿಡಿಯೋದ ಕೊನೆಯಲ್ಲಿ ಪತ್ನಿ ಆಟೋ ಹತ್ತಿ ಹೊರಡುವಾಗ ಒಬ್ಬರಿಗೊಬ್ಬರು “ಬೆಸ್ಟ್ ಆಫ್ ಲಕ್, ಖುಷಿಯಾಗಿರಿ” ಎಂದು ಕೈಬೀಸಿ, ನಗುತ್ತಲೇ ತಮ್ಮ ದಾಂಪತ್ಯ ಜೀವನಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ. ಸಂಬಂಧವೊಂದು ಮುರಿದುಬೀಳುವಾಗಲೂ ಅಲ್ಲಿ ದ್ವೇಷದ ಬದಲು ಗೌರವ ಹಾಗೂ ಪ್ರೀತಿ ಇರಬಹುದು ಎಂಬುದನ್ನು ತೋರಿಸಿಕೊಟ್ಟ ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದೆ.





Leave a comment