Home ದಾವಣಗೆರೆ ಪತಿ ಕೊಲೆ ಮಾಡಿ ಹಾವಿನ ಕಡಿತವೆಂದು ನಾಟಕವಾಡಿದ್ದ ಪತ್ನಿ ಹಾಗೂ ಪ್ರೇಮಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮೀರತ್ ಕೋರ್ಟ್ ತೀರ್ಪು!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಪತಿ ಕೊಲೆ ಮಾಡಿ ಹಾವಿನ ಕಡಿತವೆಂದು ನಾಟಕವಾಡಿದ್ದ ಪತ್ನಿ ಹಾಗೂ ಪ್ರೇಮಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮೀರತ್ ಕೋರ್ಟ್ ತೀರ್ಪು!

Share
ಪತ್ನಿ
Share

ಮೀರತ್: ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದ್ದ ಅತ್ಯಂತ ಬೆಚ್ಚಿಬೀಳಿಸುವ ಹಾಗೂ ಅಪರೂಪದ ಕೊಲೆ ಪ್ರಕರಣವೊಂದರಲ್ಲಿ ನ್ಯಾಯಾಲಯವು ಮಹತ್ವದ ತೀರ್ಪು ಪ್ರಕಟಿಸಿದೆ.ತನ್ನ ಪತಿಯನ್ನು ಪ್ರೇಮಿಯೊಂದಿಗೆ ಸೇರಿ ಹತ್ಯೆಗೈದು, ಆ ಸಾವನ್ನು ಹಾವಿನ ಕಡಿತದಿಂದ ಸಂಭವಿಸಿದ ಸಾವು ಎಂದು ಬಿಂಬಿಸಲು ಯತ್ನಿಸಿದ್ದ ಪತ್ನಿ ಹಾಗೂ ಆಕೆಯ ಪ್ರೇಮಿಗೆ ಮೀರತ್ ನ್ಯಾಯಾಲಯವು ಮರಣದಂಡನೆ ವಿಧಿಸಿ ಆದೇಶಿಸಿದೆ.

ಈ ಪ್ರಕರಣವನ್ನು ನ್ಯಾಯಾಲಯವು ‘ಅಪರೂಪದಲ್ಲೇ ಅತ್ಯಂತ ಅಪರೂಪದ ಪ್ರಕರಣ’ಎಂದು ಬಣ್ಣಿಸಿದೆ.

ಅಕ್ಬರ್‌ಪುರ ಸಾದತ್ ಗ್ರಾಮದ ನಿವಾಸಿ ಅಮಿತ್ ಕಶ್ಯಪ್ ಅಲಿಯಾಸ್ ಮಿಕ್ಕಿ (25) ಎಂಬುವವರು 2025ರ ಏಪ್ರಿಲ್ 12 ರಂದು ತಮ್ಮ ಮನೆಯಲ್ಲಿ ಮೃತರಾಗಿ ಪತ್ತೆಯಾಗಿದ್ದರು. ಅವರ ಮೃತದೇಹದ ಕೆಳಗೆ ಹಾಪೊಂದು ಸಿಲುಕಿಕೊಂಡಿದ್ದರಿಂದ ಕುಟುಂಬಸ್ಥರು ಮತ್ತು ಸ್ಥಳೀಯರು ಇದು ಹಾವಿನ ಕಡಿತದಿಂದ ಸಂಭವಿಸಿದ ಸಾವು ಎಂದು ಶಂಕಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಅಮಿತ್ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.

ಪ್ರಕರಣದ ಹಿನ್ನೆಲೆ ಮತ್ತು ಸಂಚು:

ಮೃತ ಅಮಿತ್ ಕಶ್ಯಪ್ ಪತ್ನಿ ರವಿತಾ ಹಾಗೂ ಆಕೆಯ ನೆರೆಹರೆಯದ ಹಾಗೂ ಸ್ನೇಹಿತನಾಗಿರುವ ಅಮರ್‌ದೀಪ್ ನಡುವೆ ಅಕ್ರಮ ಸಂಬಂಧವಿತ್ತು. ಈ ಅನೈತಿಕ ಸಂಬಂಧಕ್ಕೆ ಪತಿ ಅಮಿತ್ ಅಡ್ಡಿಯಾಗಿದ್ದರಿಂದ ಇಬ್ಬರೂ ಸೇರಿ ಆತನನ್ನು ಅಮುಕಿ ಕೊಲೆ ಮಾಡಲು ಸಂಚು ರೂಪಿಸಿದ್ದರು. ಕೊಲೆ ಮಾಡಿದ ಬಳಿಕ ಪೊಲೀಸರನ್ನು ಹಾಗೂ ಕುಟುಂಬಸ್ಥರನ್ನು ದಾರಿ ತಪ್ಪಿಸಲು ಹಾವೊಂದನ್ನು ತಂದು ಮೃತದೇಹದ ಬಳಿ ಇರಿಸಿದ್ದರು. ತನಿಖೆ ವೇಳೆ ಆ ಹಾವಿನ ವಿಷದ ಚೀಲವನ್ನು (Venom Sac) ಮುಂಚಿತವಾಗಿ ತೆಗೆಯಲಾಗಿತ್ತು ಎಂಬ ಆಘಾತಕಾರಿ ಅಂಶ ಹೊರಬಂದಿತ್ತು.

ಬಲವಾದ ಸಾಕ್ಷ್ಯಾಧಾರಗಳು:

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೈವೀರ್ ಸಿಂಗ್ ನಗರ್ ಅವರು ಅಕ್ಟೋಬರ್ 7 ರಂದೇ ರವಿತಾ ಮತ್ತು ಅಮರ್‌ದೀಪ್ ಅನ್ನು ದೋಷಿಗಳೆಂದು ತೀರ್ಪು ನೀಡಿದ್ದರು. ತನಿಖಾಧಿಕಾರಿಗಳು 500ಕ್ಕೂ ಅಧಿಕ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದು, ಹತ್ತಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು.

ಪ್ರಮುಖವಾಗಿ ಮರಣೋತ್ತರ ಪರೀಕ್ಷಾ ವರದಿ ಮತ್ತು ಮೊಬೈಲ್ ಕಾಲ್ ರೆಕಾರ್ಡ್‌ಗಳು ಪ್ರಕರಣದ ದಿಕ್ಕನ್ನೇ ಬದಲಾಯಿಸಿದವು. ಪತಿಯ ಮರಣದ ನಂತರದ ನಾಲ್ಕು ದಿನಗಳಲ್ಲಿಯೇ ದೋಷಿಗಳಿಬ್ಬರೂ 70ಕ್ಕೂ ಹೆಚ್ಚು ಬಾರಿ ಮಾತನಾಡಿದ್ದರು ಮತ್ತು ಒಟ್ಟಾರೆಯಾಗಿ 500ಕ್ಕೂ ಅಧಿಕ ಬಾರಿ ಪರಸ್ಪರ ಸಂಪರ್ಕದಲ್ಲಿದ್ದರು ಎಂಬ ತಾಂತ್ರಿಕ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಒದಗಿಸಿತ್ತು.
ವಿಚಾರಣೆ ವೇಳೆ ಸರಕಾರಿ ವಕೀಲರು ಕೃತ್ಯದ ಕ್ರೂರತೆ ಮತ್ತು ಸಾಕ್ಷ್ಯ ನಾಶಪಡಿಸುವ ಯತ್ನವನ್ನು ವಿವರಿಸಿ ಗರಿಷ್ಠ ಶಿಕ್ಷೆಗೆ ಆಗ್ರಹಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಇಬ್ಬರಿಗೂ ಮರಣದಂಡನೆ ವಿಧಿಸಿ ತೀರ್ಪು ಪ್ರಕಟಿಸಿದೆ.
Share

Leave a comment

Leave a Reply

Your email address will not be published. Required fields are marked *