ಕಾನ್ಪುರ: ವ್ಯಾಪಾರದ ಸೋಗಿನಲ್ಲಿ ಪರಿಚಯವಾಗಿ, ಪ್ರೀತಿಸಿ ಮದುವೆಯಾಗಿದ್ದ ಥಾಯ್‌ಲೆಂಡ್ ಮೂಲದ ಮಹಿಳೆಯೊಬ್ಬರಿಗೆ ಬರೊಬ್ಬರಿ ₹60 ಲಕ್ಷ ರೂಪಾಯಿ ವಂಚಿಸಿ, ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಕಿರುಕುಳ ನೀಡುತ್ತಿದ್ದ ಕಾನ್ಪುರದ ನಿವಾಸಿ, ಚರ್ಮದ ಉದ್ಯಮಿ ಮೊಹಮ್ಮದ್ ಇರ್ಫಾನ್ ಎಂಬಾತನನ್ನು ಕಾನ್ಪುರ ಪೊಲೀಸರು ಬಂಧಿಸಿದ್ದಾರೆ.
ಮೊದಲ ಮದುವೆ ಹಾಗೂ ಮೂವರು ಮಕ್ಕಳಿರುವ ವಿಚಾರವನ್ನು ಮುಚ್ಚಿಟ್ಟು ವಂಚಿಸಿರುವುದು ಬಯಲಾಗುತ್ತಿದ್ದಂತೆಯೇ, ಸಂತ್ರಸ್ತ ಮಹಿಳೆ 3,000 ಕಿ.ಮೀ ಪ್ರಯಾಣಿಸಿ ಭಾರತಕ್ಕೆ ಬಂದು ಕಾನ್ಪುರ ಪೊಲೀಸರ ಮೊರೆ ಹೋಗಿದ್ದಾರೆ.
ಇನ್‌ಸ್ಟಾಗ್ರಾಂ ಮೂಲಕ ನಾಲ್ಕು ವರ್ಷಗಳ ಹಿಂದೆ ಪರಿಚಯಗೊಂಡಿದ್ದ ಕಾನ್ಪುರದ ಅನ್ವರ್‌ಗಂಜ್ ನಿವಾಸಿ ಮೊಹಮ್ಮದ್ ಇರ್ಫಾನ್, ವ್ಯಾಪಾರದ ನಿಮಿತ್ತ ಥಾಯ್‌ಲೆಂಡ್‌ಗೆ ತೆರಳುತ್ತಿದ್ದಾಗ ಸಂತ್ರಸ್ತೆಯ ಭೇಟಿಯಾಗಿದ್ದ. ಈ ಪರಿಚಯ ಪ್ರೇಮಕ್ಕೆ ತಿರುಗಿ, ಎರಡು ವರ್ಷಗಳ ಹಿಂದೆ ಥಾಯ್ ಸಂಪ್ರದಾಯದಂತೆ ಇಬ್ಬರೂ ವಿವಾಹವಾಗಿದ್ದರು. ಮದುವೆಯ ನಂತರ ವ್ಯಾಪಾರ ಹಾಗೂ ವಿವಿಧ ಅಗತ್ಯಗಳ ನೆಪದಲ್ಲಿ ಹಂತ ಹಂತವಾಗಿ 20 ಲಕ್ಷ ಥಾಯ್ ಭಾಟ್ (ಆಗಿನ ಮೌಲ್ಯ ಸುಮಾರು ₹60 ಲಕ್ಷ) ಸುಲಿಗೆ ಮಾಡಿದ್ದ ಇರ್ಫಾನ್, ಹಣ ವಾಪಸ್ ಕೇಳಿದಾಗ ಧರ್ಮ ಮತಾಂತರಗೊಂಡು ಭಾರತದಲ್ಲಿ ಬುರ್ಖಾ ಧರಿಸಿ ನೆಲೆಸುವಂತೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾನೆ.
ವ್ಯಾಪಾರದ ನೆಪದಲ್ಲಿ ₹60 ಲಕ್ಷ ಸುಲಿಗೆ: ಮದುವೆಯ ನಂತರ ತನ್ನ ಉದ್ಯಮದ ಅಗತ್ಯಗಳಿಗಾಗಿ ಹಂತ ಹಂತವಾಗಿ ₹60 ಲಕ್ಷದವರೆಗೆ ಹಣ ಪಡೆದು, ವಾಪಸ್ ಕೇಳಿದಾಗ ಸಂಪರ್ಕ ಕಡಿತಗೊಳಿಸಿದ್ದ ಇರ್ಫಾನ್.
ಮೊದಲ ಮದುವೆ ಮರೆಮಾಚಿ ವಂಚನೆ: ಇರ್ಫಾನ್‌ಗೆ 14 ವರ್ಷಗಳ ಹಿಂದೆಯೇ ಮದುವೆಯಾಗಿ ಮೂವರು ಮಕ್ಕಳಿರುವ ಅಘಾತಕಾರಿ ಸತ್ಯ ಸಂತ್ರಸ್ತೆ ಕಾನ್ಪುರದ ಆತನ ಮನೆಗೆ ಬಂದಾಗ ಬೆಳಕಿಗೆ ಬಂದಿದೆ.
ಧರ್ಮ ಮತಾಂತರಕ್ಕೆ ತೀವ್ರ ಒತ್ತಡ: ಹಣ ಹಿಂತಿರುಗಿಸಲು ನಿರಾಕರಿಸಿ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಭಾರತಕ್ಕೆ ಬಂದು ನೆಲೆಸುವಂತೆ ಮಹಿಳೆಯ ಮೇಲೆ ತೀವ್ರ ಕಿರುಕುಳ.
ದೌರ್ಜನ್ಯ ಮತ್ತು ಪೊಲೀಸ್ ದೂರು: ಹಣ ಕೇಳಲು ಹೋದಾಗ ಹಲ್ಲೆ ನಡೆಸಿ ಬೆದರಿಕೆ ಒಡ್ಡಲಾಗಿದ್ದು, ಮದುವೆಯ ದಾಖಲೆಗಳು ಹಾಗೂ ಫೋಟೋಗಳೊಂದಿಗೆ ಕಾನ್ಪುರ ಎಡಿಸಿಪಿ ಅವರನ್ನು ಭೇಟಿಯಾಗಿ ಸಂತ್ರಸ್ತೆ ಕಣ್ಣೀರಿಟ್ಟು ದೂರು ನೀಡಿದ್ದಾರೆ.
ತನ್ನ ತಾಯ್ನಾಡಿನಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದ ಸಂತ್ರಸ್ತೆ, ಬ್ಯಾಂಕ್ ಹಾಗೂ ಸಂಬಂಧಿಕರಿಂದ ಸಾಲ ಪಡೆದು ಇರ್ಫಾನ್‌ಗೆ ಹಣ ನೀಡಿದ್ದರು. ತನಗೆ ಮತಾಂತರಗೊಳ್ಳುವ ಉದ್ದೇಶವಿಲ್ಲ, ಕೇವಲ ತನ್ನ ಹಣವನ್ನು ಕೊಡಿಸಬೇಕೆಂದು ಮನವಿ ಮಾಡಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಅನ್ವರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಐಪಿಆರ್ ಹಾಗೂ ಬಲವಂತದ ಧರ್ಮ ಮತಾಂತರ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಕಾನ್ಪುರ ಪೊಲೀಸರು ಆರೋಪಿ ಮೊಹಮ್ಮದ್ ಇರ್ಫಾನ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.





Leave a comment