ಬೆಂಗಳೂರು: ದೆಹಲಿಯಲ್ಲಿ ಅಕ್ಟೋಬರ್ 10 ರಂದು ನಡೆಯಲಿರುವ ಬೃಹತ್ ಪ್ರತಿಭಟನೆಗೂ ಮುನ್ನ, ಕಾಕ್ರೋಚ್ ಜನತಾ ಪಾರ್ಟಿ (CJP) ಗುರುವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸನ್ನಾಹದ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಿದೆ. ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಖ್ಯಾತ ಯೂಟ್ಯೂಬರ್ ಧ್ರುವ್ ರಟೀ ಮತ್ತು ನಟ ಪ್ರಕಾಶ್ ರಾಜ್ ಭಾಗವಹಿಸಲಿದ್ದಾರೆ.
CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹಂಚಿಕೊಳ್ಳುವ ಮೂಲಕ ಧ್ರುವ್ ರಟೀ ಅವರ ಆಗಮನವನ್ನು ಖಚಿತಪಡಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವಿರೋಧಿಸಿ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಈ ಧರಣಿ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಿರುವ ಧ್ರುವ್ ರಟೀ, “ಇದು ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟ” ಎಂದು ಬಣ್ಣಿಸಿದ್ದಾರೆ. ಇನ್ನು ನಟ ಪ್ರಕಾಶ್ ರಾಜ್ ಅವರು ‘ಸಿಂಗಂ’ ಸಿನಿಮಾದ ಶೈಲಿಯಲ್ಲಿ “ಆಲಿ ರೇ ಆಲಿ, ಜ್ಞಾನು, ಆತಾ ತುಝಿ ಬಾರಿ ಆಲಿ” (ಬಂದ ಸೈ, ಜ್ಞಾನು, ಈಗ ನಿನ್ನ ಸರದಿ ಬಂತು) ಎಂದು ಸಿಇಸಿ ಅವರಿಗೆ ಖಾರವಾಗಿ ಎಚ್ಚರಿಕೆ ನೀಡಿದ್ದಾರೆ.
ಜನರ ಟ್ರಿಬ್ಯೂನಲ್ : ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡ ಸಂತ್ರಸ್ತ ನಾಗರಿಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ‘SIR ಜನತಾ ಟ್ರಿಬ್ಯೂನಲ್’ ಆಯೋಜನೆ.
ಚಪ್ಪಲಿ ಪ್ರತಿಭಟನೆ: ದೆಹಲಿ ಪೊಲೀಸರಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾರೆನ್ನಲಾದ ಮಹಿಳಾ ಪತ್ರಕರ್ತೆಯರಿಗೆ ಬೆಂಬಲ ಸೂಚಿಸಿ ‘ಚಪ್ಪಲಿ ಪ್ರತಿಭಟನೆ’ ನಡೆಸುವುದು.
ಪ್ರಮುಖ ಬೇಡಿಕೆಗಳು: ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆ, ಚುನಾವಣಾ ಅಕ್ರಮಗಳ ಕುರಿತು ಸ್ವತಂತ್ರ ತನಿಖೆ, SIR ಪ್ರಕ್ರಿಯೆಯ ಅಮಾನತು ಮತ್ತು ಹಳೆಯ ಮತದಾರರ ಪಟ್ಟಿಯ ಮರುಸ್ಥಾಪನೆ.
ವಿಪಕ್ಷಗಳ ಬೆಂಬಲ: ದೆಹಲಿಯಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನೇತೃತ್ವದಲ್ಲಿ ಈಗಾಗಲೇ ಪ್ರತಿಭಟನೆಗಳು ನಡೆಯುತ್ತಿದ್ದು, AISA, SFI, AISF ಮತ್ತು ASAP ನಂತಹ ವಿದ್ಯಾರ್ಥಿ ಸಂಘಟನೆಗಳು CJP ಹೋರಾಟಕ್ಕೆ ಬೆಂಬಲ ಸೂಚಿಸಿವೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯು ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಬೃಹತ್ ಹೋರಾಟಕ್ಕೆ ಪೂರ್ವಭಾವಿ ಹೆಜ್ಜೆಯಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ನಾಗರಿಕ ಸಮಾಜ, ವಿದ್ಯಾರ್ಥಿಗಳು ಮತ್ತು ಸಂತ್ರಸ್ತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಟ ಪ್ರಕಾಶ್ ರಾಜ್ ಮನವಿ ಮಾಡಿದ್ದಾರೆ.





Leave a comment