SUDDIKSHANA KANNADA NEWS/ DAVANAGERE/ DATE:23-03-2024
ದಾವಣಗೆರೆ: ಕಳೆದ ಒಂದು ವರ್ಷದಿಂದ ಪಾದಯಾತ್ರೆ ನಡೆಸುವ ಮೂಲಕ ಜಿಲ್ಲೆಯಾದ್ಯಂತ ಮನೆ ಮಾತಾಗಿರುವ ಕಾಂಗ್ರೆಸ್ ಯುವ ನಾಯಕ ಜಿ. ಬಿ. ವಿನಯ್ ಕುಮಾರ್ ಗೆ ಬಿಜೆಪಿ ಗಾಳ ಹಾಕಲು ಶುರು ಮಾಡಿದೆಯಾ? ಈ ಟ್ವೀಟ್ ನೋಡಿದರೆ ಖಂಡಿತ ಹೌದು ಎನಿಸುತ್ತದೆ.
ಬಿಜೆಪಿ ಯುವ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವುದು ಈಗ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಬೆಳೆಸುತ್ತದೆ, ಎಷ್ಟರ ಮಟ್ಟಿಗೆ ಎಂದರೆ ಸ್ವತಃ ತೇಜಸ್ವಿ ಸೂರ್ಯ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಲು ಕಾರಣವೂ ಬಿಜೆಪಿ ಹಾಗೂ ಸಂಘ ಪರಿವಾರ. ಆದ್ರೆ, ಈಗ ಇನ್ಟ್ರ್ಯಾಟ್ ಸಂಸ್ಥೆ ಮೂಲಕ ದೇಶಾದ್ಯಂತ ಹೆಸರು ಮಾಡಿರುವ ವಿನಯ್ ಕುಮಾರ್ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆಯಾ ಎಂಬ ಗುಸುಗುಸು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರಲಾರಂಭಿಸಿದೆ.
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿದ್ದ ವಿನಯ್ ಕುಮಾರ್ ಅವರ ಹೆಸರು ದೆಹಲಿ ಮಟ್ಟದಲ್ಲಿ ಜೋರಾಗಿತ್ತು. ಮೊದಲ ಪಟ್ಟಿಯಲ್ಲಿ ದಾವಣಗೆರೆ ಅಭ್ಯರ್ಥಿ ಘೋಷಣೆ ಮಾಡಿರಲಿಲ್ಲ. ಆದ್ರೆ, ಎರಡನೇ
ಪಟ್ಟಿಯಲ್ಲಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ಘೋಷಿಸಿತು. ಇದಾದ ಬಳಿಕ ವಿನಯ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಕೊನೆ ಕ್ಷಣದಲ್ಲಿ ನನಗೆ ಟಿಕೆಟ್ ತಪ್ಪಿದ್ದು ನೋವು ತಂದಿದೆ. ಕೊನೆ ಕ್ಷಣದವರೆಗೂ ನನ್ನ ಹೆಸರಿತ್ತು. ಆದ್ರೆ, ಅಂತಿಮವಾಗಿ ಬದಲಾಗಿದ್ದು ದುರಂತ ಎಂದು ಹೇಳಿದ್ದರು.
ಮಾತ್ರವಲ್ಲ, ಹದಿನೈದು ದಿನಗಳ ಕಾಲ ಜಿಲ್ಲೆಯಾದ್ಯಂತ ಸಂಚರಿಸಿ ಜನರ ಅಭಿಪ್ರಾಯ ಸಂಗ್ರಹಿಸುತ್ತೇನೆ. ತಕ್ಷಣವೇ ಯಾವುದೇ ನಿರ್ಧಾರ ಘೋಷಿಸುವುದಿಲ್ಲ. ಮತ್ತೆ ಹಳ್ಳಿ ಕಡೆಗೆ ಹೋಗಿ ಜನರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರು. ಸೆಂಟಿಮೆಂಟ್ ಅಥವಾ ಉದ್ವೇಗಕ್ಕೆ ಒಳಗಾಗಿ ನಿರ್ಧಾರಕ್ಕೆ ಬರಲ್ಲ. ಚರ್ಚಿಸಿ, ಎಲ್ಲರ ಜೊತೆ ಚರ್ಚಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು. ವಿನಯ್ ಕುಮಾರ್ ಅವರ ಈ ರಾಜಕೀಯ ನಡೆ, ತಂತ್ರಗಾರಿಕೆ, ಜನಪ್ರಿಯತೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಬೆಂಬಲ ಸೇರಿದಂತೆ ರಾಜಕಾರಣದಲ್ಲಿ ಮೂಡಿಸುತ್ತಿರುವ ಸಂಚಲನವೂ ಬಿಜೆಪಿಗೆ ಆಹ್ವಾನಿಸುವಂತೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಕುರುಬ ಸಮುದಾಯದ ನಾಯಕರಾಗಿದ್ದ ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಬಂಡೆದ್ದು ಬಿಜೆಪಿ ಅಧಿಕೃತ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಅವರ ವಿರುದ್ಧ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಇದು ಬಿಜೆಪಿ ವರಿಷ್ಠರು ಹಾಗೂ
ಆರ್ ಎಸ್ ಎಸ್ ನಾಯಕರಿಗೆ ಇರಿಸು ಮುರಿಸು ತಂದಿದೆ. ಸಂಧಾನಕ್ಕೆ ಎಷ್ಟೇ ಪ್ರಯತ್ನ ನಡೆಸಿದರೂ ಸಾಧ್ಯವಾಗುತ್ತಿಲ್ಲ. ಕೆ. ಎಸ್. ಈಶ್ವರಪ್ಪ ಸಹ ಒಪ್ಪುತ್ತಿಲ್ಲ.ವಿನಯ್ ಕುಮಾರ್ ಪಾದಯಾತ್ರೆ ಮೂಲಕ ದಾವಣಗೆರೆಯಲ್ಲಿ ಸಂಚಲನ ಮೂಡಿಸಿದವರು. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಕೆಲಸ ಮಾಡಿದವರು. ಹಾಗಾಗಿ, ಪಕ್ಷಕ್ಕೆ ಸೆಳೆದರೆ ಶಿಕ್ಷಣ ತಜ್ಞ, ಶಿಕ್ಷಣ ಪ್ರೇಮಿ, ಯುವ ನಾಯಕ. ಸಮುದಾಯವನ್ನ ಬಿಜೆಪಿಯತ್ತ ಸೆಳೆಯುವಲ್ಲಿ ಯಶಸ್ವಿಯಾದರೆ ಬಿಜೆಪಿ ಮತ್ತಷ್ಟು ಬಲಿಷ್ಠವಾಗುತ್ತದೆ ಎಂಬ ಲೆಕ್ಕಾಚಾರವೂ ಇದರ ಹಿಂದೆ ಅಡಗಿದೆ ಎಂದು ಹೇಳಲಾಗುತ್ತಿದೆ.
ತೇಜಸ್ವಿ ಸೂರ್ಯ ಮಾಡಿರುವ ಟ್ವೀಟ್ ನಲ್ಲೇನಿದೆ…?
ನೀವು ತಪ್ಪಾದ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಸಹೋದರ ನಮ್ಮೊಂದಿಗೆ ಸೇರಿಕೊಳ್ಳಿ. ಬಿಜೆಪಿಗೆ ಬನ್ನಿ. ಯು ರಿಯಲಿ ವೆಲ್. ನಿಮಗೆ ಶುಭ ಹಾರೈಕೆಗಳು ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಬಹಿರಂಗವಾಗಿಯೇ ಬಿಜೆಪಿ ಪಕ್ಷಕ್ಕೆ ವಿನಯ್ ಕುಮಾರ್ ಅವರನ್ನು ಆಹ್ವಾನಿಸಿದ್ದಾರೆ.
ವಿನಯ್ ಕುಮಾರ್ ಏನು ಪ್ರತಿಕ್ರಿಯಿಸಿದ್ದಾರೆ..?
ಎಕ್ಸ್ ನಲ್ಲಿ ಬಹಿರಂಗವಾಗಿ ಬಿಜೆಪಿ ಆಹ್ವಾನ ನೀಡಿದ್ದ ತೇಜಸ್ವಿ ಸೂರ್ಯ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ವಿನಯ್ ಕುಮಾರ್ ಅವರು, ಸಾಮಾನ್ಯ ಕುಟುಂಬದಲ್ಲಿ ಹುಟ್ಟಿರುವುದು ನನ್ನ ತಪ್ಪಲ್ಲ ಎಂದು ಸಾಬೀತುಪಡಿಸಲು ಬಯಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ದಾವಣಗೆರೆಯಲ್ಲಿ ಕಾಂಗ್ರೆಸ್ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಡಾ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಿದೆ. ಇದರ ಬೆನ್ನಲ್ಲಿಯೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವಿನಯ್ ಕುಮಾರ್ ಅವರು ಟಿಕೆಟ್ ಕೈ ತಪ್ಪಿದ್ದು ಗೊತ್ತಾಗುತ್ತಿದ್ದಂತೆ ಬೇಸರ ವ್ಯಕ್ತಪಡಿಸಿದ್ದರು.
ಜಿಲ್ಲೆಯಾದ್ಯಂತ ಪಾದಯಾತ್ರೆ ಮೂಲಕ ರಾಜ್ಯ ರಾಜಕಾರಣ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿಯೂ ಸದ್ದು ಮಾಡಿದ್ದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಔಟ್ರೀಚ್ ಸೆಲ್ ವಿಭಾಗದ ಉಪಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಮುಂದಿನ ನಡೆ ನಿಗೂಢವಾಗಿದೆ. ಈಗ ಹಳ್ಳಿಗಳತ್ತ ಹೋಗುತ್ತಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ವಿನಯ್ ಕುಮಾರ್ ಅವರಿಗೆ ಕೊನೆ ಗಳಿಗೆಯಲ್ಲಿ ಟಿಕೆಟ್ ತಪ್ಪಿರುವುದು ಸ್ಪಷ್ಟವಾಗಿದೆ. ಆದ್ರೆ, ಕೊನೆ ಹಂತದವರೆಗೂ ಇದ್ದ ಹೆಸರು ಯಾಕೆ ತಪ್ಪಿತು ಎಂಬ ಅನುಮಾನ ಈಗಲೂ ಕಾಡುತ್ತಿದೆ. ಮಾತ್ರವಲ್ಲ, ಟಿಕೆಟ್ ಸಿಗದೇ ಇರುವುದು ದುರಂತ. ಜನರ ಪ್ರೀತಿ, ವಿಶ್ವಾಸ, ಸರ್ವೆಯಲ್ಲಿ ಬಂದದ್ದು ನನ್ನ ಪರವಾಗಿಯೇ. ಅಂತಿಮವಾಗಿ ಯಾಕೆ ಟಿಕೆಟ್ ಸಿಕ್ಕಿಲ್ಲ ಎಂಬುದು ವಿನಯ್ ಕುಮಾರ್ ಅವರಿಗೂ ಶಾಕ್ ಕೊಟ್ಟಿದೆ.
ಪಕ್ಷೇತರ ಸ್ಪರ್ಧೆಗೆ ಒತ್ತಡ:
ಜಿ. ಬಿ. ವಿನಯ್ ಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಎಸ್. ಎಸ್. ಬಡಾವಣೆಯಲ್ಲಿರುವ ಜನ ಸಂಪರ್ಕ ಕಚೇರಿಯಲ್ಲಿ ನೂರಾರು ಮಂದಿ ಸೇರಿದ್ದರು. ವಿನಯ್ ಕುಮಾರ್ ಅವರು ದಾವಣಗೆರೆಗೆ ಬರುತ್ತಾರೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಬೇರೆ ಬೇರೆ ತಾಲೂಕುಗಳ ವಿವಿಧ ಸಮುದಾಯದ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಹಿತೈಷಿಗಳು ಹಾಗೂ ಯುವಕರು ಸೇರಿದಂತೆ ಹಲವರು ಆಗಮಿಸಿದ್ದರು. ವಿನಯ್ ಕುಮಾರ್ ಅವರಿಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದ ನಮಗೆಲ್ಲಾ ನೋವು, ಬೇಸರ ತಂದಿದೆ. ಗೆಲ್ಲುವ ಕುದುರೆಗೆ ಕಾಂಗ್ರೆಸ್ ಹೈಕಮಾಂಡ್ ನೀಡಿಲ್ಲ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ವಿನಯ್ ಕುಮಾರ್ ಅವರು ಇನ್ನೂ ನಾಮಪತ್ರ ಸಲ್ಲಿಕೆಗೆ ಕಾಲಾವಕಾಶ ಇದೆ. ಜನರ ಬಳಿಗೆ ಹೋಗುತ್ತೇನೆ. ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು.