ತಮಿಳುನಾಡು: ಧಾರ್ಮಿಕ ಭಾವೈಕ್ಯತೆ ಮತ್ತು ಸೌಹಾರ್ದತೆಗೆ ಹೆಸರಾಗಿರುವ ತಮಿಳುನಾಡಿನ ನಾಗಾಪಟ್ಟಿನಂ ಜಿಲ್ಲೆಯಲ್ಲಿ ಅಪರೂಪದ ಹಾಗೂ ಮನಮುಟ್ಟುವ ಘಟನೆಯೊಂದು ನಡೆದಿದೆ. ಇಲ್ಲಿನ ವಿಶ್ವಪ್ರಸಿದ್ಧ ‘ನಾಗೂರ್ ಆಂಡಾವರ್ ದರ್ಗಾ’ಆವರಣದಲ್ಲಿ ಹಿಂದೂ ಜೋಡಿಯೊಂದರ ವಿವಾಹ ಕಾರ್ಯಕ್ರಮವು ಮುಸ್ಲಿಂ ಧರ್ಮಗುರುಗಳು ಮತ್ತು ಹಿರಿಯರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನೆರವೇರಿದೆ.
ಕುಟುಂಬಸ್ಥರು ಮತ್ತು ಮುಸ್ಲಿಂ ಧರ್ಮಗುರುಗಳ ಸಮ್ಮುಖದಲ್ಲಿ ಮದುವೆ:
ಸಾಮಾನ್ಯವಾಗಿ ದೇವಾಲಯಗಳಲ್ಲಿ ನಡೆಯುವ ಹಿಂದೂ ಸಂಪ್ರದಾಯದ ವಿವಾಹವು, ಇಲ್ಲಿನ ದರ್ಗಾ ಆವರಣದಲ್ಲಿ ಕುಟುಂಬಸ್ಥರು, ಬಂಧು-ಮಿತ್ರರ ಸಮ್ಮುಖದಲ್ಲಿ ನೆರವೇರಿತು. ದರ್ಗಾ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ವಂಶಪಾರಂಪರ್ಯ ಟ್ರಸ್ಟಿ ಮಹಮ್ಮದ್ ಖಲೀಫಾ ಸಾಹಿಬ್ ಸೇರಿದಂತೆ ಹಲವು ಮುಸ್ಲಿಂ ಹಿರಿಯರು ಸ್ವತಃ ಮದುವೆಗೆ ಹಾಜರಾಗಿ, ನವಜೋಡಿಗೆ ಅಕ್ಷತೆ ಹಾಕಿ ಆಶೀರ್ವದಿಸಿದರು.
ಧಾರ್ಮಿಕ ಸೌಹಾರ್ದತೆಯ ಸಂದೇಶ:
ಮದುವೆ ಕುರಿತು ಮಾತನಾಡಿದ ಖಲೀಫಾ ಸಾಹಿಬ್, “ನಾಗಾಪಟ್ಟಿನಂ ಜಿಲ್ಲೆಯು ಧಾರ್ಮಿಕ ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ನಾಗೂರ್ ದರ್ಗಾವು ಎಲ್ಲ ಧರ್ಮದ ಜನರನ್ನು ಪ್ರೀತಿಯಿಂದ ಸ್ವೀಕರಿಸುವ ಪರಂಪರೆ ಹೊಂದಿದೆ. ನಮ್ಮ ದರ್ಗಾದಲ್ಲಿ ಹಿಂದೂ ಸಹೋದರನ ಮದುವೆ ಮುಸ್ಲಿಂ ಹಿರಿಯರ ಸಮ್ಮುಖದಲ್ಲಿ ನಡೆದಿರುವುದು ಸಂತಸ ತಂದಿದೆ. ಇಂತಹ ಘಟನೆಗಳು ಇಲ್ಲಿ ಹೊಸದೇನಲ್ಲವಾದರೂ, ಪ್ರಸ್ತುತ ಸಮಾಜದಲ್ಲಿ ಧಾರ್ಮಿಕ ಭಾವೈಕ್ಯತೆಯನ್ನು ಮುಂದಿನ ಪೀಳಿಗೆಗೆ ಸಾರಲು ಈ ವಿಡಿಯೋಗಳನ್ನು ಹಂಚಿಕೊಳ್ಳುವುದು ಅಗತ್ಯವಾಗಿದೆ” ಎಂದು ಹೇಳಿದರು.
ಜಾಲತಾಣಗಳಲ್ಲಿ ವಿಡಿಯೋ ವೈರಲ್:
ನವಜೋಡಿಗೆ ಮುಸ್ಲಿಂ ಹಿರಿಯರು ಅಕ್ಷತೆ ಹಾಕಿ ಶುಭ ಹಾರೈಸುವ ದೃಶ್ಯಗಳು ಮತ್ತು ವಿವಾಹದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಭಾರತೀಯ ಸಂಸ್ಕೃತಿ ಮತ್ತು ನೈಜ ಸೌಹಾರ್ದತೆಗೆ ಇದುವೇ ಉತ್ತಮ ಉದಾಹರಣೆ ಎಂದು ನೆಟ್ಟಿಗರು ಪ್ರಶಂಸಿಸುತ್ತಿದ್ದಾರೆ.





Leave a comment