ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಬಿಕ್ಕಟ್ಟು ತೀವ್ರಗೊಂಡಿದೆ. ರೈತರ ತೋಟಗಳು ಒಣಗುತ್ತಿವೆ. ಜಾನುವಾರುಗಳಿಗೆ ಹಾಗೂ ಗ್ರಾಮೀಣ ಜನರಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಭದ್ರಾ ಡ್ಯಾಂನಿಂದ ಭದ್ರಾ ಬಲದಂಡೆ ಕಾಲುವೆಗೆ ತುರ್ತಾಗಿ ನೀರು ಹರಿಸುವಂತೆ ಆಗ್ರಹಿಸಿ ಹರಿಹರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಅವರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಒತ್ತಾಯಿಸಿದರು. ಬೆಂಗಳೂರಿನಲ್ಲಿ ಈ ಸಂಬಂಧ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಸಲ್ಲಿಸಿರುವ ಮನವಿಯಲ್ಲಿ ಏನಿದೆ?
ದಾವಣಗೆರೆ ಜಿಲ್ಲಾ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ. ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದು, ಅನೇಕ ತೋಟಗಳು ನೀರಿನ ಕೊರತೆಯಿಂದ ಒಣಗುವ ಹಂತ ತಲುಪಿವೆ.
ಇದರ ಜೊತೆಗೆ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಬೋರ್‌ವೆಲ್‌ಗಳು ಬತ್ತಿಹೋಗುತ್ತಿರುವುದು, ದನಕರುಗಳಿಗೆ ಕುಡಿಯುವ ನೀರು ದೊರೆಯದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಹಾಗೂ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ ಎಂದು ವಿವರಿಸಲಾಗಿದೆ.
ರೈತರು ತಮ್ಮ ಜೀವನೋಪಾಯವಾಗಿರುವ ತೋಟಗಾರಿಕಾ ಬೆಳೆಗಳನ್ನು ಉಳಿಸಿಕೊಳ್ಳಲು ನೀರಿನ ನಿರೀಕ್ಷೆಯಲ್ಲಿದ್ದಾರೆ. ಇನ್ನೂ ವಿಳಂಬವಾದರೆ ಈಗಾಗಲೇ ಬೆಳೆಗಳಿಗೆ ಆಗಿರುವ ಹಾನಿ ಮತ್ತಷ್ಟು ಹೆಚ್ಚಾಗಿ, ರೈತರು ಭಾರೀ ಆರ್ಥಿಕ ನಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಇದು ಕೇವಲ ನೀರಾವರಿ ಸಮಸ್ಯೆಯಲ್ಲ, ರೈತರ ಜೀವನೋಪಾಯ, ಜಾನುವಾರುಗಳ ಬದುಕು ಹಾಗೂ ಗ್ರಾಮೀಣ ಜನರ ಕುಡಿಯುವ ನೀರಿನ ಅಗತ್ಯಕ್ಕೆ ಸಂಬಂಧಿಸಿದ ತುರ್ತು ಪರಿಸ್ಥಿತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಆದ್ದರಿಂದ, ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ಯಾವುದೇ ರೀತಿಯ ವಿಳಂಬ ಮಾಡದೆ, ಭದ್ರಾ ಆಣೆಕಟ್ಟಿನಲ್ಲಿ ಲಭ್ಯವಿರುವ ನೀರಿನ ಪ್ರಮಾಣ, ಅಚ್ಚುಕಟ್ಟು ಪ್ರದೇಶದ ಅಗತ್ಯತೆ ಹಾಗೂ ಜಲಾಶಯದ ನಿಯಮಾನುಸಾರ ಲಭ್ಯವಿರುವ ನೀರಿನ ಆಧಾರದ ಮೇಲೆ ಭದ್ರಾ ಬಲದಂಡೆ ಕಾಲುವೆಗೆ ತಕ್ಷಣ ನೀರು ಹರಿಸುವ ಕುರಿತು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಅಲ್ಲದೆ, ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಟಿಯಿಂದ ಸಂಬಂಧಪಟ್ಟ ನೀರಾವರಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ನೀರು ಬಿಡುಗಡೆಗೆ ಸಂಬಂಧಿಸಿದ ಸ್ಪಷ್ಟ ಕ್ರಮ ಹಾಗೂ ವೇಳಾಪಟ್ಟಿಯನ್ನು ಪ್ರಕಟಿಸಬೇಕೆಂದು ಬಿ. ಪಿ. ಹರೀಶ್ ಅವರು ಮಧು ಬಂಗಾರಪ್ಪರನ್ನು ಒತ್ತಾಯಿಸಿದ್ದಾರೆ.
ರೈತರು ಮತ್ತು ಗ್ರಾಮೀಣ ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಾಗಲು ಬಿಡದೆ, ಮಾನವೀಯ ಹಾಗೂ ತುರ್ತು ದೃಷ್ಟಿಕೋನದಿಂದ ಈ ಮನವಿಯನ್ನು ಪರಿಗಣಿಸಿ ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿದ್ದಾರೆ.





Leave a comment