SUDDIKSHANA KANNADA NEWS/ DAVANAGERE/ DATE:17-11-2024
ದಾವಣಗೆರೆ: ನೀಡಿದೆ. ಪಿ. ಜೆ. ಬಡಾವಣೆಯ 4.13 ಎಕರೆ ವಕ್ಫ್ ಮಂಡಳಿ ಆಸ್ತಿ ಎಂದು ಪಹಣಿಯಲ್ಲಿ ತಿದ್ದುಪಡಿ ಮಾಡಿರುವ ಕುರಿತಂತೆ ಸ್ಪಷ್ಟ ಮಾಹಿತಿ ಸಿಕ್ಕ ಬಳಿಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ವಕ್ಫ್ ಮಂಡಳಿ ಅಧಿಕಾರಿಗಳಿಂದ ವಿವರಣೆ ಕೇಳಲಾಗಿದೆ. ಪಿ. ಜೆ. ಬಡಾವಣೆಯ ಮೇಲೆ ಯಾವುದೇ ಹಕ್ಕು ಇಲ್ಲ ಎಂದು ವಕ್ಫ್ ಮಂಡಳಿ ಪ್ರತಿಕ್ರಿಯೆ ಯಾವುದೇ ಕಾರಣಕ್ಕೂ ಭಯಪಡಬೇಡಿ. ಇನ್ನೆರಡು ಮೂರು ದಿನಗಳಲ್ಲಿ ಸರಿಯಾದ ಮಾಹಿತಿ ಸಿಗಲಿದೆ.ಎಂದು ತಹಶೀಲ್ದಾರ್ ಎಂ. ಬಿ. ಅಶ್ವತ್ಥ್ ಸ್ಪಷ್ಟನೆ ನೀಡಿದ್ದಾರೆ.
ನಗರದ ಪಿಜೆ ಬಡಾವಣೆಯ ಶ್ರೀರಾಮ ದೇವಸ್ಥಾನದ ಮುಂಭಾಗ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಿ. ಜೆ. ಬಡಾವಣೆಯನ್ನು 48ನೇ ಸರ್ವೆ ನಂಬರ್ ಗೆ ಸೇರಿಸಲಾಗುವುದು. ಇದೀಗ ಸರ್ವೇ ಇಲಾಖೆಯ ಆಯುಕ್ತರಿಗೆ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದು ಇನ್ನೆರಡು ದಿನಗಳಲ್ಲಿ ಪಹಣಿ ಪರಿಶೀಲಿಸಿದಾಗ ಸ್ಪಷ್ಟವಾದ ಉತ್ತರ ದೊರಕಲಿದೆ ಎಂದು ಹೇಳಿದರು.
1951ರಿಂದ ಬಡಾವಣೆ ಉದ್ದೇಶಕ್ಕೆ ಸರ್ವೆ ನಂಬರ್ 53 ಅನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದರಲ್ಲಿ 18 ಎಕರೆ 2 ಗುಂಟೆಯ ಈ ಭೂಮಿಯನ್ನು ಖರಾಬು ಎಂಬುದಾಗಿ ಘೋಷಿಸಲಾಗಿತ್ತು. ಆಗ ಇದು ಸರ್ವೆ ನಂಬರ್ 53 ಅಸ್ತಿತ್ವ ಕಳೆದುಕೊಂಡಿತು. ಸರ್ವೆ ನಂಬರ್ 48ಕ್ಕೆ 53 ಅನ್ನು ವಿಲೀನಗೊಳಿಸಲಾಯಿತು. ಆದರೂ ದಿಶಾಂಕ್ ಆ್ಯಪ್ ನಲ್ಲಿ ಇದು ಸರ್ವೆ ನಂಬರ್ 53 ಬರುತ್ತಿದೆ. ಸರ್ಕಾರಿ ದಾಖಲೆಗಳಲ್ಲಿ ಇದು ಸರಿಯಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಯಾವುದೇ ಕಾರಣಕ್ಕೂ ಯಾರೂ ಸಹ ಪಿ ಜೆ ಬಡಾವಣೆಯು ವಕ್ಫ್ ಮಂಡಳಿಗೆ ಸೇರಿದೆ ಎಂಬ ವಿಚಾರ ಸಂಬಂಧ ಸುಳ್ಳು ಸುದ್ದಿ ಹರಡಬೇಡಿ. ಗೊಂದಲ ಸೃಷ್ಟಿಸಲು ಹೋಗಬೇಡಿ. ಯಾರನ್ನು ಕೆರಳಿಸುವ ಕೆಲಸ
ಮಾಡಬೇಡಿ. ಇನ್ನೊಂದು ವಾರದಲ್ಲಿ ಈ ಸಮಸ್ಯೆಗೆ ಪರಿಹಾರ ದೊರಕಲಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಇನ್ನು ಸಭೆಯಲ್ಲಿ ಮಾತನಾಡಿದ ಸ್ಥಳೀಯರು, ಪಿ. ಜೆ. ಬಡಾವಣೆಯ 4.13 ಎಕರೆಯನ್ನು ವಕ್ಫ್ ಮಂಡಳಿ ಆಸ್ತಿ ಎಂದು ತಿದ್ದುಪಡಿ ಮಾಡಿರುವಂಥ ಉಪವಿಭಾಗಾಧಿಕಾರಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪ್ರಕರಣ ದಾಖಲಿಸಿ ಕಾನೂನು
ಕ್ರಮ ತೆಗೆದುಕೊಳ್ಳಬೇಕು. ಆಸ್ತಿ ಮಾಲೀಕರ ಗಮನಕ್ಕೆ ತರದಂತೆ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿರುವವರ ವಿರುದ್ಧ ಕ್ರಮ ಜರುಗಿಸಲೇಬೇಕು ಎಂದು ಪಟ್ಟುಹಿಡಿದರು.
ಏಕಾಏಕಿ ಸರ್ಕಾರಿ ದಾಖಲೆಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಿದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿಕೊಂಡಿದ್ದೇವೆ. ಈಗ ಎಲ್ಲಿಗೆ ಹೋಗಬೇಕು? 2014ರಲ್ಲಿ ಆಗಿರುವ ಬದಲಾವಣೆಯ ಕುರಿತಂತೆ ಯಾವುದೇ ಮಾಹಿತಿ ಇಲ್ಲ.
ಇಷ್ಟು ದಿನ ಇದನ್ನು ಮುಚ್ಚಿಟ್ಟಿದ್ದು ಯಾಕೆ ಎಂದು ಖಾರವಾಗಿಯೇ ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಸ್ಥಳೀಯ ನಿವಾಸಿ ರಾಮದಾಸ್ ಅವರು ಸಾರ್ವಜನಿಕರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆ ಭಂಗ ತರುವಂಥ ಕೆಲಸ. ಈ ಪ್ರಕ್ರಿಯೆಯಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲೇಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ಉಪಮೇಯರ್ ಸೋಗಿ ಶಾಂತಕುಮಾರ್, ಪಾಲಿಕೆ ಸದಸ್ಯರಾದ ಬಿ. ಜಿ. ಅಜಯ್ ಕುಮಾರ್, ಸವಿತಾ ಹುಲ್ಮನಿ, ಸುಧಾ ಇಟ್ಟಿಗುಡಿ, ಮಧು ಪವಾರ್ ಮತ್ತಿತರರು ಹಾಜರಿದ್ದರು.