SUDDIKSHANA KANNADA NEWS/ DAVANAGERE/ DATE:28-02-2024
ದಾವಣಗೆರೆ: ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾದಲ್ಲಿ ಖಾಸಗಿ ಕೊಳವೆಬಾವಿ ಸಿಗದಿದ್ದಲ್ಲಿ ತಕ್ಷಣವೇ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಬೇಕು. ದೂರದ ಆಧಾರದ ಮೇಲೆ ಈಗಾಗಲೇ ಪ್ರತಿ ಟ್ಯಾಂಕರ್ ಗೆ ರೂ.500, 600, ಹಾಗೂ ರೂ.900 ರವರೆಗೆ ದರ ನಿಗದಿ ಮಾಡಲಾಗಿದೆ. ಟೆಂಡರ್ ಕರೆಯಲಾಗಿಲ್ಲ ಎಂದು ತಾಂತ್ರಿಕ ನೆಪವೊಡ್ಡಿ ಜನರಿಗೆ ನೀರು ಕೊಡದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಪತ್ತು ನಿರ್ವಹಣೆ ಕುರಿತಂತೆ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಂಜಿನಿಯರ್, ಪಶುಸಂಗೋಪನಾ ಇಲಾಖೆ, ಬೆಸ್ಕಾಂ ಅಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರಸ್ಥಾನ ಬಿಡುವಂತಿಲ್ಲ:
ಬೇಸಿಗೆ ಆರಂಭವಾಗಿದ್ದು ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆ, ಸಾಂಕ್ರಾಮಿಕ ಕಾಯಿಲೆಗಳು ಸೇರಿದಂತೆ ವಿಕೋಪದಿಂದಾಗುವ ಸಮಸ್ಯೆಗಳನ್ನು ಎದುರಿಸಲು ಅಧಿಕಾರಿಗಳು ಸದಾ ಸನ್ನದ್ದರಾಗಿರಬೇಕು. ಯಾವುದೇ ಅಧಿಕಾರಿಗಳು ಕೇಂದ್ರಸ್ಥಾನ ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ಕುಡಿಯುವ ನೀರಿನ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿವೆ ಎಂದು ಪರಿಶೀಲನೆ ನಡೆಸಿ ಆಳಕ್ಕೆ ಕೊರೆಯಬೇಕಾಗಿದ್ದಲ್ಲಿ ಅಂತಹ ಕೊಳವೆಬಾವಿಗಳ ವಿವರದೊಂದಿಗೆ ಪ್ರಸ್ತಾವನೆಯನ್ನು ಆಯಾ ತಾಲ್ಲೂಕು ತಹಶೀಲ್ದಾರರಿಗೆ ಸಲ್ಲಿಸಬೇಕು ಎಂದರು.
ಸಹಾಯವಾಣಿ ಸ್ಥಾಪನೆ:
ಬರಗಾಲ ಇರುವುದರಿಂದ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ತಕ್ಷಣವೇ ಸಹಾಯವಾಣಿ ಆರಂಭಿಸಬೇಕು. ಜನರು ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆಯಾದಲ್ಲಿ ಮತ್ತು ಇತರೆ ಸಮಸ್ಯೆಗಳಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳುವರು.
ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆ:
ಜಿಲ್ಲೆಯಲ್ಲಿ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 22 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಅದರಲ್ಲಿ ಚನ್ನಗಿರಿ 2 ಪಂಚಾಯಿತಿ 7 ಕೊಳವೆಬಾವಿ 3 ಗ್ರಾಮಗಳು, ದಾವಣಗೆರೆ 2 ಗ್ರಾ.ಪಂ.ಗಳಲ್ಲಿ 3 ಕೊಳವೆಬಾವಿ 3 ಗ್ರಾಮ, ಹರಿಹರ 3 ಗ್ರಾ.ಪಂ.ಗಳಲ್ಲಿ 4 ಕೊಳವೆಬಾವಿ 4 ಗಾಮಗಳು, ಹೊನ್ನಾಳಿ 4 ಗ್ರಾ.ಪಂ. 4 ಕೊಳವೆಬಾವಿ 3 ಗ್ರಾಮಗಳು, ಜಗಳೂರು 3 ಗ್ರಾ.ಪಂ. ವ್ಯಾಪ್ತಿಯಲ್ಲಿ 4 ಖಾಸಗಿ ಕೊಳವೆಬಾವಿಗಳ ಮೂಲಕ 4 ಗ್ರಾಮಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವೀಡಿಯೋ ಕಾನ್ಫರೆನ್ಸ್‍ನಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಎಸ್.ಬಳ್ಳಾರಿ, ಉಪವಿಭಾಗಾಧಿಕಾರಿ ಅಭಿಷೇಕ್, ದುರ್ಗಶ್ರೀ, ಡಿಡಿಎಲ್‍ಆರ್ ಭಾವನಾ ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.