SUDDIKSHANA KANNADA NEWS/ DAVANAGERE/ DATE:28-02-2024
ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಜೀವಸೆಲೆಯಾದ ಕುಂದುವಾಡ ಕೆರೆ ಹಾಗೂ ಟಿ. ಬಿ. ಸ್ಟೇಷನ್ ನಲ್ಲಿ ನೀರಿನ ಸಂಗ್ರಹ ಇದೆ. ಮುಂಬರುವ ಏಪ್ರಿಲ್ ತಿಂಗಳವರೆಗೆ ಯಾವುದೇ ಸಮಸ್ಯೆ ಎದುರಾಗದು. ತಾಂತ್ರಿಕ ಕಾರಣಗಳಿಂದ ತೊಂದರೆಯಾಗಿದ್ದು, ಸರಿಪಡಿಸಲಾಗುವುದು. ನೀರು ಪೂರೈಸುವ ಟ್ಯಾಂಕರ್ ಗಳನ್ನು ಹೆಚ್ಚುವರಿಯಾಗಿ ಖರೀದಿಸಲು ಕ್ರಮ ವಹಿಸಲಾಗುವುದು. ಬರ ಪರಿಹಾರ ನಿಧಿಯಡಿ ಹಣ ಇದ್ದು ಈ ಬಗ್ಗೆ ತುರ್ತಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತೆ ರೇಣುಕಾ ಸ್ಪಷ್ಟಪಡಿಸಿದರು.
ಪಾಲಿಕೆ ಸಭಾಂಗಣದಲ್ಲಿ ಮೇಯರ್ ವಿನಾಯಕ್ ಪೈಲ್ವಾನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಎಸ್. ಟಿ. ವೀರೇಶ್ ಅವರು, ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಕುಡಿಯುವ ನೀರಿಗೂ ಹಾಹಾಕಾರ ತಲೆದೋರಿದೆ. ಬೇಸಿಗೆ ಆರಂಭದ ದಿನಗಳಲ್ಲಿಯೇ ಸಮಸ್ಯೆ ತಲೆದೋರಿದೆ. ಪಾಲಿಕೆ ಎಂಜಿನಿಯರ್ ಗಳು ಪಾಲಿಕೆ ಸದಸ್ಯರ ಮಾತು ಕೇಳುತ್ತಿಲ್ಲ. ಅವರ ಮೇಲೆ ಇವರು, ಇವರ ಮೇಲೆ ಅವರು ಹೇಳುತ್ತಾರೆ. ಕಾರ್ಪೊರೇಟರ್ ಆಗಿ 50 ಫೋನ್ ಕರೆ ಮಾಡಿದ್ದೇನೆ. ಬೆಳಿಗ್ಗೆ ಹೇಳಿದರೆ ಸಂಜೆಗೆ ನೀರಿನ ಟ್ಯಾಂಕರ್ ಬಂದಿದೆ. ಜನರಿಂದಲೂ ಒತ್ತಡ ಹೆಚ್ಚಾಗುತ್ತಿದೆ. ಈ ರೀತಿಯ ಉಡಾಫೆ, ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಕ್ರಮ ಜರುಗಿಸಲೇಬೇಕು ಎಂದು ಪಟ್ಟುಹಿಡಿದರು.
ವೀರೇಶ್ ಅವರ ಈ ಒತ್ತಾಯಕ್ಕೆ ಎಲ್ಲಾ ಸದಸ್ಯರು ಒಕ್ಕೊರಲನಿಂದ ಪಕ್ಷೇಬೇಧ ಮರೆತು ಸಹಮತ ವ್ಯಕ್ತಪಡಿಸಿದರು. 12ರಿಂದ 13 ದಿನ ಬಿಟ್ಟು ಕೆ. ಬಿ. ಬಡಾವಣೆ ವಾರ್ಡ್ ಗೆ ನೀರು ಬಿಡಲಾಗಿದೆ. ಜನರ ಒತ್ತಾಯ, ಬೈಗುಳ ನಾವು ಕೇಳುವಂತಾಗಿದೆ. ಇದು ಕೇವಲ ನನ್ನ ವಾರ್ಡ್ ನ ಸಮಸ್ಯೆ ಮಾತ್ರವಲ್ಲ, 45 ವಾರ್ಡ್ ಗಳ ಸಮಸ್ಯೆಯೂ ಹೌದು. ಇದಕ್ಕೆ ವಿಶೇಷ ಆದ್ಯತೆ ನೀಡಬೇಕು. ಪರಿಹಾರ ಏನು ಎಂಬ ಕುರಿತಂತೆ ಮಾಹಿತಿ ನೀಡಬೇಕು. ಈಗ ಎಷ್ಟು ನೀರು ಸಂಗ್ರಹವಿದೆ, ಎಷ್ಟು ದಿನ ಬರುತ್ತೆ? ಎಷ್ಟು ದಿನಗಳಿಗೆ ಒಮ್ಮೆ ನೀರು ಹರಿಸಲಾಗುತ್ತೆ? ನಾವು ಯಾರನ್ನು ಸಂಪರ್ಕಿಸಬೇಕು? ಟ್ಯಾಂಕರ್ ಗಳ ಅವಶ್ಯಕತೆ ಬಿದ್ದರೆ ಬಾಡಿಗೆ ಪಡೆಯಿರಿ, ಇಲ್ಲವೇ ಹೊಸದಾಗಿ ಖರೀದಿಸಿ ಎಂದು ಸಲಹೆ ನೀಡಿದರು.
ಈ ವೇಳೆ ಮಾತನಾಡಿದ ಪಾಲಿಕೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಸಚಿನ್ ಅವರು, 2400 ಮಿಲಿಯನ್ ಲೀಟರ್ ನೀರಿನ ಸಂಗ್ರಹವಿದೆ. 6.5 ಮೀಟರ್ ನೀರು ಕುಂದುವಾಡ ಕೆರೆಯಲ್ಲಿ ಸಂಗ್ರಹವಿದೆ. ರಾಜನಹಳ್ಳಿಯಿಂದ ತುಂಗಾಭದ್ರಾ ನದಿ ನೀರು ಬರುತ್ತಿದೆ. ಇನ್ನು 90 ದಿನಗಳ ಕಾಲದವರೆಗೆ ಸಾಕಾಗುವಷ್ಟಿದೆ. ಇನ್ನು ಟಿ. ಬಿ. ಸ್ಟೇಷನ್ ಕೆರೆಯಲ್ಲಿ 1800 ಮಿಲಿಯನ್ ಲೀಟರ್ ನೀರಿದ್ದು, 60 ದಿನಗಳ ಕಾಲ ನೀರು ಹರಿಸಬಹುದು. ರಾಜನಹಳ್ಳಿಯಿಂದ ಈಗ ನೀರು ಬರುವುದು ನಿಂತಿದೆ. ಏಪ್ರಿಲ್ ಕೊನೆಯವರೆಗೆ ಆಗುವಷ್ಟು ನೀರಿದೆ ಎಂದು ತಿಳಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ವೀರೇಶ್, ಕೆ. ಚಮನ್ ಸಾಬ್, ಕೆ. ಎಂ. ವೀರೇಶ್, ಮೀನಾಕ್ಷಿ ಜಗದೀಶ್, ಸುಧಾ ಇಟ್ಟಿಗುಡಿ, ಶಿವಾನಂದ್ ಸೇರಿದಂತೆ ಅನೇಕ ಪಾಲಿಕೆ ಸದಸ್ಯರು, ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಬೇಡ. ವಾರ್ಡ್ ನ ಜನರು ಕೇಳುವ ಪ್ರಶ್ನೆಗೆ ನಾವು ಉತ್ತರಿಸಲು ಆಗುತ್ತಿಲ್ಲ. ಪಾಲಿಕೆಯ ಅಧಿಕಾರಿಗಳು ನಿರ್ಲಕ್ಷ್ಯ, ಅಸಡ್ಡೆ, ಉಡಾಫೆಯಿಂದ ಮಾತನಾಡುತ್ತಾರೆ. ನೀರುಗಂಟಿಗಳನ್ನು ದೂಷಿದರೆ ಆಗದು, ಎಂಜಿನಿಯರ್ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಇಲ್ಲವೇ ಕ್ರಮ ಜರುಗಿಸಬೇಕು ಎಂದು
ಪಟ್ಟು ಹಿಡಿದರು.
ಆಗ ಮಧ್ಯಪ್ರವೇಶಿಸಿದ ಆಯುಕ್ತೆ ರೇಣುಕಾ ಅವರು ತಾಂತ್ರಿಕ ಕಾರಣಗಳಿಂದ ತೊಂದರೆಯಾಗಿದೆ. ನನ್ನ ಗಮನಕ್ಕೆ ಬಂದಿದೆ. ಟಿ. ಬಿ. ಸ್ಟೇಷನ್ ಕೆರೆಯಲ್ಲಿ ತ್ಯಾಜ್ಯ ಇದ್ದದ್ದು ಕಂಡು ಬಂದಿತ್ತು. ನಾನೇ ಅಧಿಕಾರಿಗಳಿಗೆ ಜೋರು ಮಾಡಿ ಬಂದಿದ್ದೇನೆ. ಈ ರೀತಿಯ ನಿರ್ಲಕ್ಷ್ಯ ವಹಿಸಿದರೆ ಸಹಿಸಲು ಆಗದು ಎಂದು ಎಚ್ಚರಿಕೆ ನೀಡಿದ್ದೇನೆ. ಸಚಿನ್ ಅವರು ಕಾರವಾರದಿಂದ ಬಂದಿದ್ದಾರೆ. ನೇರವಾಗಿ ಮಾತನಾಡಿ ಬಿಡುತ್ತಾರೆ. ಎಲ್ಲಾ ಸದಸ್ಯರು ಒಮ್ಮೆಲೆ ಅವರ ಮೇಲೆ ಮುಗಿಬಿದ್ದರೆ ಹೇಗೆ? ನಡವಳಿಕೆ, ಮಾತು ಸರಿಪಡಿಸಿಕೊಳ್ಳುವಂತೆ
ಸೂಚನೆ ನೀಡುತ್ತೇನೆ. ವಾರ್ಡ್ ನ ಎಂಜಿನಿಯರ್ ಗೆ ಜವಾಬ್ದಾರಿ ವಹಿಸಲಾಗುತ್ತದೆ. ಅವರನ್ನು ವಿಚಾರಿಸಿ ಎಂದರು.
1023 ಬೋರ್ ವೆಲ್ ಗಳಿದ್ದು, 11 ಬೋರ್ ವೆಲ್ ಗಳಲ್ಲಿ ನೀರು ಕಡಿಮೆಯಾಗಿದೆ. 13 ಬೋರ್ ವೆಲ್ ಗಳು ರಿಪೇರಿಗೆ ಬಂದಿವೆ. ಬೋರ್ ವೆಲ್ ಕೊರೆಸಲು, ಪರಿಕರ ಖರೀದಿ ಸೇರಿದಂತೆ ನೀರಿನ ಸಮಸ್ಯೆ ಪರಿಹರಿಸಲು ಎನ್ ಡಿ ಆರ್ ಎಫ್ ನಿಧಿಯಡಿ 85 ಲಕ್ಷ ರೂಪಾಯಿಗೂ ಅಧಿಕ ಹಣ ಕಾಯ್ದಿರಿಸಲಾಗಿದೆ. ಈ ಹಣ ಬಳಕೆ ಮಾಡಿಕೊಳ್ಳಲಾಗುವುದು. ಹೆಚ್ಚುವರಿಯಾಗಿ ಟ್ಯಾಂಕರ್ ಗಳನ್ನು ಖರೀದಿ ಮಾಡಲಾಗುವುದು. ಆದ್ರೆ, ಖಾಸಗಿಯಾಗಿ ಪಡೆದರೆ ಹಣ ಹೆಚ್ಚಾಗುತ್ತದೆ ಎಂದು ಹೇಳಿದರು.
ನಗರ ಶಕ್ತಿ ದೇವತೆ ದುರ್ಗಾಂಬಿಕಾ ತಾಯಿಯ ಜಾತ್ರಾ ಮಹೋತ್ಸವಕ್ಕೆ ಇನ್ನು ಉಳಿದಿರುವುದು ಕೆಲವೇ ದಿನಗಳು ಮಾತ್ರ. ಕೆಲಸಗಳು ಪೂರ್ಣಗೊಂಡಿಲ್ಲ. 50 ಕ್ಕೂ ಹೆಚ್ಚು ವಿದ್ಯುತ್ ದೀಪಗಳು ಹಾಳಾಗಿವೆ. ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ನೀರುಗಂಟಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಕೂಡಲೇ ಬದಲಾಯಿಸಬೇಕು ಎಂದು ಒತ್ತಾಯಿಸಿದರು. ಆಗ ಮಧ್ಯಪ್ರವೇಶಿಸಿದ ಎಸ್. ಟಿ. ವೀರೇಶ್ ಅವರು, ವಾಲ್ ಮ್ಯಾನ್ ಗಳನ್ನು ಮಾತ್ರ ದೂಷಿಸಬೇಡಿ, ಎಂಜಿನಿಯರ್ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಎಂದು ಮನವಿ ಮಾಡಿದರು.
ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್ ಮಾತನಾಡಿ ಇನ್ನು ಇ-ಆಸ್ತಿ ಮಾಡಿಕೊಡಲು ಪಾಲಿಕೆ ಅಧಿಕಾರಿಗಳು 30 ಸಾವಿರ ರೂಪಾಯಿಯವರೆಗೆ ಬೇಡಿಕೆ ಇಡುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ದಾಖಲಾತಿಗಳನ್ನು ಕೇಳುತ್ತಾ ಜನರಿಗೆ ಸತಾಯಿಸುತ್ತಿದ್ದಾರೆ. ಯಾರದ್ದೋ ಆಸ್ತಿಗೆ ಇನ್ಯಾರದ್ದೋ ಇ- ಆಸ್ತಿ ಮಾಡಿಕೊಡಲಾಗಿದೆ. ಇದು ಹೇಗೆ ಸಾಧ್ಯ? ಇದೇ ರೀತಿಯಲ್ಲಿ ಹಲವು ರೀತಿಯ ಅಕ್ರಮಗಳು ನಡೆಯುತ್ತಲೇ ಇದ್ದರೂ ಅಧಿಕಾರಿಗಳ ಮೇಲೆ ಕ್ರಮ ಯಾಕೆ ಆಗಿಲ್ಲ. ಇ-ಆಸ್ತಿ, ಖಾತೆ ಬದಲಾವಣೆ ಸರಳೀಕರಣಗೊಳಿಸಬೇಕು ಎಂದು ಒತ್ತಾಯಿಸಿದರು. ಎ. ನಾಗರಾಜ್ ಸಹ ಕೆಲವು ವಿಚಾರಗಳನ್ನು ಸಭೆಯ ಗಮನಕ್ಕೆ ತಂದರು.
ಆಯುಕ್ತೆ ರೇಣುಕಾ ಮಾತನಾಡಿ, ಈಗಾಗಲೇ 100 ಎಕರೆ ಒತ್ತುವರಿಯಾಗಿರುವುದು ಗೊತ್ತಾಗಿದೆ. ದೂರು ಬಂದ ಬಳಿಕ ಗೊತ್ತಾಗುತ್ತಿದೆ. ಈ ರೀತಿಯ ಪ್ರಕರಣಗಳು ಇದ್ದರೆ ಗಮನಕ್ಕೆ ತನ್ನಿ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.