Home ಕ್ರೈಂ ನ್ಯೂಸ್ ಸುಳ್ಳು ಸುದ್ದಿ ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲು: ರಾಜ್ಯ ಚುನಾವಣೆ ಆಯುಕ್ತ ಜಿ. ಎಸ್. ಸಂಗ್ರೇಶಿ ಆತಂಕ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಸುಳ್ಳು ಸುದ್ದಿ ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲು: ರಾಜ್ಯ ಚುನಾವಣೆ ಆಯುಕ್ತ ಜಿ. ಎಸ್. ಸಂಗ್ರೇಶಿ ಆತಂಕ!

Share
ಪ್ರಜಾಪ್ರಭುತ್ವ
Share

ದಾವಣಗೆರೆ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳು ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲಾಗಿವೆ. ಮತದಾರರನ್ನು ದಿಕ್ಕುತಪ್ಪಿಸುವ ಇಂತಹ ಪ್ರಯತ್ನಗಳನ್ನು ತಡೆಯಲು ಮತ್ತು ನಿಖರವಾದ ಮಾಹಿತಿಯನ್ನು ಒದಗಿಸಲು ಚುನಾವಣಾ ಆಯೋಗವು ಸದಾ ಸನ್ನದ್ಧವಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದರು.

ಪ್ರಜಾಪ್ರಭುತ್ವ ಬಲಗೊಳಿಸುವಲ್ಲಿ ಚುನಾವಣಾ ಆಯೋಗದ ಪಾತ್ರ ಕುರಿತು ದಾವಣಗೆರೆ ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಏರ್ಪಡಿಸಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ,
ದಿಕ್ಸೂಚಿ ಭಾಷಣ ಮಾಡಿದರು.

‘ಪ್ರಜಾಪ್ರಭುತ್ವ ಕೇವಲ ಒಂದು ಆಡಳಿತ ವ್ಯವಸ್ಥೆಯಲ್ಲ; ಅದು ನಮ್ಮ ಸಂವಿಧಾನದ ಆತ್ಮ. ಈ ಆತ್ಮವನ್ನು ಜೀವಂತವಾಗಿ ಮತ್ತು ಆರೋಗ್ಯಕರವಾಗಿ ಇಡುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ’ ಎಂದು ಹೇಳಿದರು

.ಪ್ರಜಾಪ್ರಭುತ್ವದ ಯಶಸ್ಸು ಮುಖ್ಯವಾಗಿ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳ ಮೇಲೆ ಅವಲಂಬಿತವಾಗಿದೆ. ಭಾರತದಂತಹ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ, ಈ ಮಹತ್ತರವಾದ ಜವಾಬ್ದಾರಿಯನ್ನು ಚುನಾವಣಾ ಆಯೋಗ ಯಶಸ್ವಿಯಾಗಿ ನಿಭಾಯಿಸುತ್ತಿದೆ ಎಂದರು.

ಒಂದು ಬಲಿಷ್ಠ ಪ್ರಜಾಪ್ರಭುತ್ವದ ಅಡಿಪಾಯವೇ ‘ಸ್ವತಂತ್ರ ಮತ್ತು ನಿಷ್ಪಕ್ಷಪಾತ ಚುನಾವಣೆ’. ಜನಸಾಮಾನ್ಯರ ಧ್ವನಿ ಶಾಸನಸಭೆಗಳಲ್ಲಿ ಮೊಳಗಬೇಕಾದರೆ, ಅವರ ಮತಾಧಿಕಾರದ ಹಕ್ಕು ಯಾವುದೇ ಅಡೆತಡೆಯಿಲ್ಲದೆ ಚಲಾವಣೆಯಾಗಬೇಕು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗವು ಕೇವಲ ಚುನಾವಣೆಗಳನ್ನು ನಡೆಸುವ ಸಂಸ್ಥೆಯಾಗಿರದೆ, ಪ್ರಜಾಪ್ರಭುತ್ವದ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನುಡಿದರು.

ಯಾವುದೇ ಭಯ, ಆಸೆ ಅಥವಾ ಆಮಿಷಗಳಿಲ್ಲದೆ ಮತದಾನ ನಡೆಯುವುದನ್ನು ಖಚಿತಪಡಿಸುವುದು ಪ್ರತಿಯೊಬ್ಬರ ಆದ್ಯತೆ ಆಗಬೇಕು. ಚುನಾವಣಾ ಮಾದರಿ ನೀತಿಸಂಹಿತೆಯ ಕಟ್ಟುನಿಟ್ಟಾದ ಜಾರಿ ನಮ್ಮ ಪ್ರಜಾಪ್ರಭುತ್ವದ ಪಾವಿತ್ರ‍್ಯತೆಯನ್ನು ಕಾಪಾಡುತ್ತದೆ ಎಂದು ಹೇಳಿದರು.

‘ಯಾವೊಬ್ಬ ಮತದಾರನೂ ಬಿಟ್ಟುಹೋಗದಿರಲಿ’ ಎಂಬುದು ಚುನಾವಣಾ ಆಯೋಗದ ಮೂಲಮಂತ್ರವಾಗಿದೆ. ಪ್ರತಿಯೊಬ್ಬರಿಗೂ ಮತದಾನದ ಪ್ರಕ್ರಿಯೆ ಸುಲಭವಾಗಿ ಮತ್ತು ನಿರಾಳವಾಗಿ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಮನೆ ಬಾಗಿಲಿನಿಂದಲೇ ಮತದಾನ ಮಾಡುವ ಸೌಲಭ್ಯಗಳು ಈ ನಿಟ್ಟಿನಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ನುಡಿದರು.

ವಿಶೇಷ ಉಪನ್ಯಾಸ ನೀಡಿದ ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಸಿ.ಸುರೇಶ, ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು, ಚಿಹ್ನೆಗಳನ್ನು ಹಂಚುವುದು ಮತ್ತು ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಹದ್ದಿನ ಕಣ್ಣಿಡುವುದು ಹಾಗೂ ‘ಮಾದರಿ ನೀತಿ ಸಂಹಿತೆ’ಯನ್ನು ಜಾರಿಗೊಳಿಸುವ ಮೂಲಕ ಚುನಾವಣಾ ಭ್ರಷ್ಟಾಚಾರವನ್ನು ಆಯೋಗ ನಿಯಂತ್ರಿಸುತ್ತದೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಸಮಾನ ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು.

ಇಂದಿನ ಡಿಜಿಟಲ್ ಯುಗದಲ್ಲಿ, ಪಾರದರ್ಶಕತೆಯನ್ನು ಹೆಚ್ಚಿಸಲು ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ. ಇವಿಎಂ ಮತ್ತು ಇವಿಪ್ಯಾಟ್‌ಗಳ ಬಳಕೆ ಮತದಾನದ ಪ್ರಕ್ರಿಯೆಯಲ್ಲಿ ನಿಖರತೆಯನ್ನು ತಂದಿದೆ. ‘ಸಿ-ವಿಜಿಲ್’ ಆಪ್ ಮೂಲಕ ಚುನಾವಣಾ ಅಕ್ರಮಗಳ ವಿರುದ್ಧ ಧ್ವನಿಯೆತ್ತಬಹುದು ಮತ್ತು ಆಯೋಗದ ಕಣ್ಣಾಗಿ ಕೆಲಸ ಮಾಡಬಹುದು. ಇದು ಪ್ರಜಾಪ್ರಭುತ್ವದಲ್ಲಿ ಜನರ ನೇರ ಭಾಗವಹಿಸುವಿಕೆಗೆ ಉತ್ತಮ ಉದಾಹರಣೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಎಸ್.ಬಿ.ಗಂಟಿ ಮಾತನಾಡಿ, ಮತದಾನ ಕೇವಲ ಒಂದು ಹಕ್ಕಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ಅರಿವನ್ನು ಮೂಡಿಸಲು ಆಯೋಗವು ‘ಸ್ವೀಪ್’ ಕಾರ್ಯಕ್ರಮದ ಮೂಲಕ ನಿರಂತರವಾಗಿ ಶ್ರಮಿಸುತ್ತಿದೆ. ಪ್ರಜಾಪ್ರಭುತ್ವದ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸಲು ಪ್ರತಿಯೊಂದು ಚುನಾವಣೆಯನ್ನೂ ಪ್ರಜಾಪ್ರಭುತ್ವದ ಹಬ್ಬವನ್ನಾಗಿ ಆಚರಿಸಬೇಕಾಗಿದೆ ಎಂದು ಹೇಳಿದರು.

ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಅಶೋಕಕುಮಾರ ಪಾಳೇದ ಪ್ರಾಸ್ತಾವಿಕವಾಗಿ ಮಾತನಾಡಿ, ಚುನಾವಣಾ ಆಯೋಗವು ತನ್ನ ಕರ್ತವ್ಯವನ್ನು ಎಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದರೂ, ನಾಗರಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಇಲ್ಲದೆ ಪ್ರಜಾಪ್ರಭುತ್ವವು ಪೂರ್ಣಗೊಳ್ಳುವುದಿಲ್ಲ. ಪ್ರತಿಯೊಂದು ಮತಕ್ಕೂ ಬೆಲೆಯಿರುತ್ತದೆ ಮತ್ತು ಪ್ರತಿಯೊಂದು ಮತವೂ ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತದೆ ಎಂದು ಎಂದರು.

ಪ್ರಾಧ್ಯಾಪಕರಾದ ಪ್ರೊ.ಜೆ.ಕೆ.ರಾಜು, ಡಾ.ಟಿ.ಎಲ್.ಪ್ರವೀಣ, ಡಾ.ನಾಗರಾಜ, ಡಾ.ಬಸವರಾಜ ಬೆನಕನಹಳ್ಳಿ, ಡಾ.ಜ್ಯೋತಿ, ಡಾ.ನಾಗಭೂಷಣಗೌಡ, ಮದಕರಿನಾಯಕ, ಡಾ.ಯಜ್ಞಶ್ರೀ ಉಪಸ್ಥಿತರಿದ್ದರು. ಡಾ.ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕ ಡಾ.ಶ್ರೀಧರ ಬಾರ್ಕಿ ವಂದಿಸಿದರು.

Share

Leave a comment

Leave a Reply

Your email address will not be published. Required fields are marked *