SUDDIKSHANA KANNADA NEWS/ DAVANAGERE/ DATE:13-08-2024
ದಾವಣಗೆರೆ: ದಾವಣಗೆರೆ ನಗರ ಮತ್ತು ಜಿಲ್ಲೆಯಲ್ಲಿ ಬಿಜೆಪಿಗರು ದುರಾಡಳಿತ ಕಳೆದ ವರ್ಷದಿಂದ ಅಂತ್ಯಗೊಳ್ಳುತ್ತಾ ಬಂದಿದ್ದು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಿದ್ದು ಅವರ ದುರಾಡಳಿತಕ್ಕೆ ಬ್ರೇಕ್ ಬಿದ್ದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್ .ಮಲ್ಲಿಕಾರ್ಜುನ್ ಅವರು ತಿಳಿಸಿದರು.
ದಾವಣಗೆರೆ ನಗರದ 16, 38,30, 41 ಮತ್ತು 31 ನೇ ವಾರ್ಡ್ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದಾವಣಗೆರೆ ಜಿಲ್ಲೆಯ ಜನತೆ, ಬಿಜೆಪಿಗರ ದುರಾಡಳಿತವನ್ನು ಸಹಿಸಲು ಸಾಕಾಗದೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದು ಕಾಂಗ್ರೆಸ್ ಪಕ್ಷ ಈ ಹಿಂದೆ ನೀಡಿದ ಭರವಸೆಯಂತೆ ನಡೆದುಕೊಂಡು ಬರುತ್ತಿದೆ. ಇಂದು ಸಹ ಕಾಂಗ್ರೆಸ್ ಪಕ್ಷ ಅಭಿವೃದ್ಧಿಪರ ಚಿಂತನೆ ನಡೆಸಿದ್ದು ಬಿಜೆಪಿಗರು ಮಾಡಿರುವ ಎಲ್ಲಾ ಅಕ್ರಮಗಳನ್ನು ಬಯಲು ಮಾಡುವುದಾಗಿ ತಿಳಿಸಿದರು.
ಕಳೆದ ಐದು ವರ್ಷದಲ್ಲಿ ಬಿಜೆಪಿಗರು ದಾವಣಗೆರೆ ಉತ್ತಮ ರಸ್ತೆಗಳನ್ನು ಹಾಳು ಮಾಡಿದ್ದು ಇಂದು ಮತ್ತೆ ನಾವು ಅಧಿಕಾರಕ್ಕೆ ಬಂದ ನಂತರ ಹದಗೆಟ್ಟ ರಸ್ತೆಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ ಈಗಾಗಲೇ ಪ್ರಮುಖ ರಸ್ತೆಗಳನ್ನು ಆಧುನಿಕರಣಕ್ಕೆ ಚಾಲನೆ ನೀಡಲಾಗಿದ್ದು ಇನ್ನಷ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಬಿಜೆಪಿಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಪಕ್ಷದಲ್ಲಿ ಬಿದ್ದಿರುವ ಹೆಗ್ಗಣಗಳನ್ನು ನೋಡದೆ ಬೇರೆ ಪಕ್ಷಗಳ ಬಗ್ಗೆ ಮಾತನಾಡುತ್ತಿದ್ದಾರೆ ನಮ್ಮ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಅವರು ಪಟ್ಟ ಭದ್ರ ಹಿತಾಸಕ್ತಿಗಳ ಯೋಗ್ಯತೆ ನನಗೆ ಗೊತ್ತಿದ್ದು ಅವರಿಗೆ ಸಮಯ ಬಂದಾಗ ಪಾಠ ಕಲಿಸುತ್ತೇನೆ ಎಂದು ಎಚ್ಚರಿಸಿದರು.
ಇದೇ ವೇಳೆ ಆಯಾ ಭಾಗದ ನಾಗರಿಕರು ಮತ್ತು ಸಾರ್ವಜನಿಕರು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದಾಗ ಸಚಿವರು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಸದಸ್ಯರಾದ ಜಿ.ಎಸ್. ಮಂಜುನಾಥ್ ಗಡಿಗುಡಾಳ್ ಮಾತನಾಡಿ ಈ ಹಿಂದಿನ ಬಿಜೆಪಿ ಅವಧಿಯಲ್ಲಿ ಈ ಭಾಗಕ್ಕೆ ಯಾವುದೇ ಅನುದಾನ ನೀಡದೆ ವಂಚಿಸಲಾಗಿತ್ತು ಎಸ್ ಎಸ್ ಮಲ್ಲಿಕಾರ್ಜುನ್ ಅವರು ಶಾಸಕರಾಗಿ ಮಂತ್ರಿಗಳಾದ ನಂತರ ರೂ.5 ಕೋಟಿ ವೆಚ್ಚದ ಕಾಮಗಾರಿಗಳನ್ನು ನೀಡಿದ್ದು ಈ ಭಾಗದ ನಾಗರಿಕರು ಇದನ್ನು ತಿಳಿದು ಮತ ಚಲಾಯಿಸುವಾಗ ಅಭಿವೃದ್ಧಿಪರ ಬೆಂಬಲ ವ್ಯಕ್ತಪಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ , ಮಹಾನಗರ ಪಾಲಿಕೆಯ ಮಹಾಪೌರರಾದ ವಿನಾಯಕ ಪೈಲ್ವಾನ್, ಆಯುಕ್ತರಾದ ರೇಣುಕಾ , ಸ್ಥಾಯಿ ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಜಗದೀಶ್, ಜಯಮ್ಮ ಗೋಪಿ ನಾಯಕ್, ಪಾಮೇನಹಳ್ಳಿ ನಾಗರಾಜ್, ಕೆ.ಬಿ. ರುದ್ರೇಶ್, ನಾಗರಾಜ್, ಮಹಾನಗರ ಪಾಲಿಕೆಯ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.