SUDDIKSHANA KANNADA NEWS/ DAVANAGERE/ DATE:27-09-2024
ದಾವಣಗೆರೆ: ಕಾಂಗ್ರೆಸ್ ಮೇಯರ್ ಹಾಗೂ ಉಪಮೇಯರ್ ತಲಾ 30 ಮತಗಳು ಬಂದಿವೆ. ನಾವು ಬಿಜೆಪಿಯವರ ರೀತಿಯಲ್ಲಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿದಿಲ್ಲ. ಬಿಬಿಎಂಪಿ ಕಾರ್ಪೊರೇಷನ್ ನಲ್ಲಿ ಅಧಿಕಾರ ಹಿಡಿದಂತೆ ವಾಮಮಾರ್ಗದಲ್ಲಿ ಮೂರು ವರ್ಷ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ನಾವು ಕಾನೂನಿನ ಪ್ರಕಾರ ಚುನಾವಣೆ ನಡೆಸಿ ಅಧಿಕಾರಕ್ಕೆ ಬಂದಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು.
ಮಹಾನಗರ ಪಾಲಿಕೆಯಲ್ಲಿ ಮೇಯರ್ ಹಾಗೂ ಉಪಮೇಯರ್ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಮಾಧ್ಯಮದವರ ಜೊತೆ ಅವರು ಮಾತನಾಡಿದರು.
ನಾವು ಕಾನೂನಿನ ಪ್ರಕಾರ ಇಲ್ಲಿನವರೇ ಮತ ಹಾಕಿ ಗೆಲ್ಲಿಸಿದ್ದೇವೆ. ಉತ್ತಮ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಸಂಸದರು,ಶಾಸಕರು, ಪಾಲಿಕೆ ಸದಸ್ಯರು ಸೇರಿದಂತೆ 30 ಮತಗಳು ಬಂದಿವೆ. ಬಿಜೆಪಿಯವರ ರೀತಿಯಲ್ಲಿ ಎಲ್ಲೆಲ್ಲಿಂದಲೂ ಕರೆತಂದು ಅಧಿಕಾರ ಹಿಡಿದಿಲ್ಲ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು.
ಪಾಲಿಕೆಯಲ್ಲಿ ಬೇರೆ ಎಲ್ಲೆಲ್ಲಿಂದಲೂ ಕರೆ ತಂದು ಮತ ಹಾಕುವುದಾದರೆ ನಾವ್ಯಾಕೆ ಇರಬೇಕು. ಪಾಲಿಕೆ ಚುನಾವಣೆಯಲ್ಲಿ ಸದಸ್ಯರು ಯಾಕೆ ಗೆದ್ದು ಬರಬೇಕು. ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆಗಳಿಂದ ವಿಧಾನ ಪರಿಷತ್ ಸದಸ್ಯರು ಮತ ಹಾಕಿದ್ದರು. ದಾವಣಗೆರೆ ಪಾಲಿಕೆಯೂ ಬೇರೆ ಕಡೆಯ ಎಂಎಲ್ ಸಿ ಗಳಿಗೆ ಏನು ಸಂಬಂಧ. ಈ ಬಾರಿ ಯಾರೂ ಬಂದಿಲ್ಲ. ಬಿಜೆಪಿಯವರು ಕೇವಲ 17 ಮತ ಪಡೆದಿದ್ದಾರೆ. ನಾವೇ 22 ಸದಸ್ಯರನ್ನು ಹೊಂದಿದ್ದರೂ ಬಿಜೆಪಿ ವಾಮಮಾರ್ಗ ಅನುಸರಿಸಿ ಅಧಿಕಾರಕ್ಕೆ ಈ ಹಿಂದೆ ಬಂದಿತ್ತು. ಈ ಬಾರಿ ನಾವೇ ಅಧಿಕಾರ ಹಿಡಿದಿದ್ದೇವೆ. ಅದೂ ಕಾನೂನಿನ ಪ್ರಕಾರವೇ ಎಂದು ಹೇಳಿದರು.
ಅಭಿವೃದ್ಧಿ ವಿಚಾರದಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯು ಐದು ವರ್ಷಗಳ ಹಿಂದೆ ಹೋಗಿದೆ. ಅಧಿಕಾರ ನಡೆಸಿದವರು ಉತ್ತಮ ಆಡಳಿತ ನೀಡಿಲ್ಲ. ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ನಾನು ಸಚಿವನಾಗಿದ್ದಾಗ ಮಾಡಿದ್ದ ಕೆಲಸಗಳಿಂದಾಗಿ ಎಲ್ಲಿಯೂ ಗುಂಡಿಗಳು ಬಿದ್ದಿಲ್ಲ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆಯಲ್ಲಿ ಗುಂಡಿಗಳು ಬಿದ್ದಿಲ್ಲ. ಗುಣಮಟ್ಟದ ಕಾಮಗಾರಿ ನಡೆಸಿದ್ದರಿಂದ ಯಾವುದೇ ಸಮಸ್ಯೆ ಆಗಿಲ್ಲ. ಕಳಪೆ ಕಾಮಗಾರಿ ನಡೆಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮಲ್ಲಿಕಾರ್ಜುನ್ ಹೇಳಿದರು.
ಈ ವೇಳೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮೇಯರ್ ಕೆ. ಚಮನ್ ಸಾಬ್, ಉಪಮೇಯರ್ ಸೋಗಿ ಶಾಂತಕುಮಾರ್, ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಎ. ನಾಗರಾಜ್, ಹುಲ್ಲುಮನಿ ಗಣೇಶ, ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ಜಿಕ್ರಿಯಾ, ಆಶ್ರಯ ಸಮಿತಿ ಸದಸ್ಯರಾದ ಕಣ್ಣಾಳ ಅಂಜಿನಪ್ಪ, ರಾಘವೇಂದ್ರ ಗೌಡ ಮತ್ತಿತರರು ಹಾಜರಿದ್ದರು.