SUDDIKSHANA KANNADA NEWS/ DAVANAGERE/ DATE:31-03-2024
ದಾವಣಗೆರೆ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಡೂರು ಗ್ರಾಮದಲ್ಲಿ ಏಪ್ರಿಲ್ 2ರಂದು ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವವು ಅದ್ಧೂರಿಯಾಗಿ ನೆರವೇರಲಿದೆ. ಲಕ್ಷಾಂತರ ಭಕ್ತರು ಈ ರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ರಾಜ್ಯದ ನಾನಾ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಮೂಹವೇ ಹರಿದು ಬರಲಿದೆ.
ಸುಮಾರು 500 ವರ್ಷ ಗಳ ಇತಿಹಾಸ ಇರುವ ಪುಣ್ಯ ಕ್ಷೇತ್ರ ಇದಾಗಿದ್ದು, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಿಂದ 15 ಕಿಲೋಮೀಟರ್, ದಾವಣಗೆರೆ ಜಿಲ್ಲೆಯಿಂದ 45 ಕಿಲೋಮೀಟರ್ ಹಾಗೂ ಚಿತ್ರದುರ್ಗದಿಂದ 40 ಕಿಲೋ ಮೀಟರ್ ದೂರದಲ್ಲಿರುವ ಈ ಶ್ರದ್ಧಾ ಭಕ್ತಿ ತಾಣ ರಥೋತ್ಸವಕ್ಕೆ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ.
ಚಿತ್ರದುರ್ಗದ ಶ್ರೀ ಮರುಘರಾಜೇಂದ್ರ ಬೃಹನ್ಮಠದ ಅಧಿಕಾರಕ್ಕೊಳಪಟ್ಟ ಹಾಗೂ ಇವರ ಕೃಪಾಶೀರ್ವಾದದೊಂದಿಗೆ ಶ್ರೀ ವೀರಭದ್ರೇಶ್ವರಸ್ವಾಮಿ ರಥೋತ್ಸವವು ಜರುಗಲಿದೆ. ಈಗಾಗಲೇ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದ್ದು, ಮಾರ್ಚ್ 31, ಏಪ್ರಿಲ್ 1ರಂದು ವಿವಿಧ ಕಾರ್ಯಕಮಗಳು ನಡೆಯಲಿವೆ.
ಬೆಳಗ್ಗೆ ಗಜೋತ್ಸವ , ಗುಗ್ಗಳ ಕೆಂಡದಾರ್ಚನೆ, ಜವಲಪ್ರಸ್ತ ಹಾಗೂ ರಾತ್ರಿ ಹೂವಿನ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದ್ದು, ಏಪ್ರಿಲ್ 2 ಕ್ಕೆ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಏರ್ಪಡಿಸಲಾಗಿದೆ.
ಕಡೂರು ಗ್ರಾಮಸ್ಥರಿಂದ ಸಂಜೆ 5 ಗಂಟೆಗೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವವು ಜರುಗಲಿದೆ ಶ್ರೀ ವೀರಭದ್ರೇಶ್ವರ ವೀರಗಾಸೆ ಕಲಾತಂಡವು ರಥೋತ್ಸವಕ್ಕೆ ಮೆರಗು ನೀಡಲಿದೆ. ಏಪ್ರಿಲ್ 1 ಹಾಗೂ 2ರಂದು ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಏಪ್ರಿಲ್ 3ರಂದು ಶ್ರೀ ವೀರಭದ್ರೇಶ್ವರಸ್ವಾಮಿಯ ಓಕಳಿಯೊಂದಿಗೆ ಗ್ರಾಮಕ್ಕೆ ಬಿಜಯಂಗೈಯಲಾಗುತ್ತದೆ. ಶ್ರಾವಣ ಮಾಸದಲ್ಲಿ ನಡೆಯುವ ನಿರಂತರ ರುದ್ರಾಭಿಷೇಕ ಪೂಜೆಗೆ ರೂ.1001 ಕಟ್ಟಿ ಹೆಸರು ನೊಂದಾಯಿಸಬಹುದು.
ಸ್ವಾಮಿಗೆ ಕಾಣಿಕೆ ಹಾಗೂ ಇತರೆ ವಸ್ತು ರೂಪದ ಕಾಣಿಕೆ ಸಲ್ಲಿಸುವವರು ಯಾರ ಕೈಗೂ ಕೊಡದೇ ಕಾರ್ಯದರ್ಶಿಗಳವರಲ್ಲಿ ಕೊಟ್ಟು ಅಧಿಕೃತ ರಶೀದಿ ಪಡೆಯಬೇಕು ಮತ್ತು ಟ್ರೇಜರಿಗೆ ಹಾಕಬಹುದು. ಜಾತ್ರೆ ವೇಳೆಯಲ್ಲಿ ಭಕ್ತಾದಿಗಳಿಂದ ಕೆಂಡದಾರ್ಚನೆ ಸೇವಾ ಇರುವುದಿಲ್ಲ. ಜಾತ್ರೆಗೆ ಬರುವ ಅಂಗಡಿ ಹಾಗೂ ಇತರೆ ವ್ಯವಹಾರಸ್ಥರು ಕಮಿಟಿ ಆದೇಶದಂತೆ ನಡೆಯಬೇಕು. ಏಪ್ರಿಲ್ 2ರಂದು ರಾತ್ರಿ 10 ಗಂಟೆಗೆ ನಾಟಕ ಇರುತ್ತದೆ. ರಥೋತ್ಸವದಲ್ಲಿ ಅಂಗಡಿ ವಗೈರೆ ಹಾಕುವವರು ಸಂಘದ ಅನುಮತಿ ಪಡೆದಿರಲೇಬೇಕು ಎಂದು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಉಪಾಧ್ಯಕ್ಷರಾದ ದಯಾನಂದ್ ಸ್ವಾಮಿ, ವ್ಯವಸ್ಥಾಪಕರು, ಕಾರ್ಯದರ್ಶಿಗಳು, ಖಜಾಂಚಿಯವರು, ಕಮಿಟಿ ಸದಸ್ಯರು, ಕಡೂರು ಗ್ರಾಮಸ್ಥರು ಮನವಿ ಮಾಡಿದ್ದಾರೆ.