ನವದೆಹಲಿ: ಕಳೆದ ವರ್ಷ ಮೇಘಾಲಯಕ್ಕೆ ಹನಿಮೂನ್ ತೆರಳಿದ್ದಾಗ ಉದ್ಯಮಿ ಪತಿಯನ್ನು ಭೀಕರವಾಗಿ ಕೊಲೆ ಮಾಡಿದ ಆರೋಪ ಹೊತ್ತಿರುವ ಇಂದೋರ್ ಮೂಲದ ಮಹಿಳೆ ಸೋನಂ ರಘುವಂಶಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ದೊಡ್ಡ ರಿಲೀಫ್ ನೀಡಿದೆ. ಮೇಘಾಲಯ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದೇನು?
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಶೀಲ್ ನಾಗು ಅವರಿದ್ದ ಪೀಠದಲ್ಲಿ ಆರಂಭದಲ್ಲಿ ತೀವ್ರ ಗೊಂದಲ ಉಂಟಾಯಿತು. ಮೊದಲು ಆರೋಪಿಯ ಜಾಮೀನು ರದ್ದುಗೊಳಿಸುವುದಾಗಿ ಪೀಠ ಹೇಳಿತಾದರೂ, ಬಳಿಕ ತನ್ನ ನಿಲುವು ಬದಲಿಸಿತು. ಆರೋಪಿ ಸೋನಂ ರಘುವಂಶಿ ಈಗಾಗಲೇ ಜೈಲಿನಿಂದ ಬಿಡುಗಡೆಯಾಗಿರುವುದನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ, ಸದ್ಯಕ್ಕೆ ಜಾಮೀನು ರದ್ದುಪಡಿಸಲು ಒಪ್ಪಲಿಲ್ಲ. ಬದಲಾಗಿ, ಕೆಳ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸುವುದಾಗಿ ತಿಳಿಸಿ, ಸೋನಂಗೆ ನೋಟಿಸ್ ಜಾರಿ ಮಾಡಿದೆ.
ಏನಿದು ಘಟನೆ?
ಮಧ್ಯಪ್ರದೇಶದ ಇಂದೋರ್ ನಿವಾಸಿಯಾಗಿದ್ದ ಉದ್ಯಮಿ ರಾಜಾ ರಘುವಂಶಿ ಮತ್ತು ಸೋನಂ ರಘುವಂಶಿ ಕಳೆದ ವರ್ಷ ಮೇ ತಿಂಗಳಲ್ಲಿ ಮೇಘಾಲಯಕ್ಕೆ ಪ್ರವಾಸ ತೆರಳಿದ್ದರು. ಮೇ 23 ರಂದು ಮೇಘಾಲಯದ ಪ್ರಸಿದ್ಧ ಪ್ರವಾಸಿ ತಾಣವಾದ ಸೋಹ್ರಾ (ಚಿರಾಪುಂಜಿ) ಪ್ರದೇಶದಲ್ಲಿ ಈ ದಂಪತಿ ನಾಪತ್ತೆಯಾಗಿದ್ದರು. ನಾಪತ್ತೆಯಾದ ಒಂಬತ್ತು ದಿನಗಳ ಬಳಿಕ ರಾಜಾ ರಘುವಂಶಿ ಅವರ ಮೃತದೇಹವು ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು. ಪತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಮೇಘಾಲಯ ಪೊಲೀಸರು ಕಳೆದ ವರ್ಷ ಜೂನ್‌ನಲ್ಲಿ ಸೋನಂಳನ್ನು ಬಂಧಿಸಿದ್ದರು.
ಇದಾದ ಬಳಿಕ ಶಿಲ್ಲಾಂಗ್ ನ್ಯಾಯಾಲಯವು ಕಳೆದ ಏಪ್ರಿಲ್‌ನಲ್ಲಿ ಸೋನಂಗೆ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಮೇಘಾಲಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಜೂನ್ 29 ರಂದು ಮೇಘಾಲಯ ಹೈಕೋರ್ಟ್ ವಜಾಗೊಳಿಸಿ, ಜಾಮೀನನ್ನು ಎತ್ತಿ ಹಿಡಿದಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತಾದರೂ, ಅಲ್ಲಿಯೂ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಸೋನಂ ಅವರ ಜಾಮೀನು ಸದ್ಯಕ್ಕೆ ಮುಂದುವರಿಯಲಿದೆ.
- India news
- Indore businessman murder
- Justice MM Sundresh
- Justice Sheel Nagu
- Meghalaya High Court
- Meghalaya honeymoon murder
- Raja Raghuvanshi.
- Sonam Raghuvanshi
- Supreme Court bail ruling
- ಇಂದೋರ್ ಉದ್ಯಮಿ ಕೊಲೆ
- ದೇಶದ ಪ್ರಮುಖ ಸುದ್ಧಿ
- ಮೇಘಾಲಯ ಹನಿಮೂನ್ ಕೊಲೆ ಪ್ರಕರಣ
- ರಾಜಾ ರಘುವಂಶಿ
- ಶಿಲ್ಲಾಂಗ್ ನ್ಯಾಯಾಲಯ ಜಾಮೀನು
- ಸುಪ್ರೀಂ ಕೋರ್ಟ್ ಜಡ್ಜ್ಮೆಂಟ್
- ಸೋನಂ ರಘುವಂಶಿ





Leave a comment