Home ಕ್ರೈಂ ನ್ಯೂಸ್ ರಾಮಮಂದಿರ ದೇಣಿಗೆ ಕಳ್ಳತನದ ಆರೋಪಿಗಳಿಗೆ ಬುಲ್ಡೋಜರ್ ಶಾಕ್: ಬಯಲಾಯ್ತು ಐಷಾರಾಮಿ ಬಂಗಲೆ ರಹಸ್ಯ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರಾಮಮಂದಿರ ದೇಣಿಗೆ ಕಳ್ಳತನದ ಆರೋಪಿಗಳಿಗೆ ಬುಲ್ಡೋಜರ್ ಶಾಕ್: ಬಯಲಾಯ್ತು ಐಷಾರಾಮಿ ಬಂಗಲೆ ರಹಸ್ಯ!

Share
ರಾಮಮಂದಿರ
Share

ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕೋಟ್ಯಂತರ ರೂಪಾಯಿ ದೇಣಿಗೆ ಕಳ್ಳತನ ಪ್ರಕರಣದ ತನಿಖೆ ತೀವ್ರಗೊಂಡ ಬೆನ್ನಲ್ಲೇ, ಆರೋಪಿಗಳ ವಿರುದ್ಧ ಯೋಗಿ ಆದಿತ್ಯನಾಥ್ ಸರ್ಕಾರ ಕಠಿಣ ‘ಬುಲ್ಡೋಜರ್ ಆಕ್ಷನ್’ಗೆ ಮುಂದಾಗಿದೆ. ಪ್ರಕರಣದ ಪ್ರಮುಖ ಆರೋಪಿ ಲವಕುಶ್ ಮಿಶ್ರಾ ಮನೆಗೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ADA) ಈಗಾಗಲೇ ಅಧಿಕೃತ ನೋಟಿಸ್ ಜಾರಿ ಮಾಡಿದೆ.

ಬುಲ್ಡೋಜರ್ ಭೀತಿಯಲ್ಲಿ ಆರೋಪಿಗಳ ಮನೆ:

ಆರೋಪಿ ಲವಕುಶ್ ಮಿಶ್ರಾ ಅವರ ಪತ್ನಿ ಸುಪ್ರಿಯಾ ಮಿಶ್ರಾ ಹೆಸರಿನಲ್ಲಿರುವ ನಿರ್ಮಾಣ ಹಂತದ ಎರಡು ಅಂತಸ್ತಿನ ಐಷಾರಾಮಿ ಕಟ್ಟಡವನ್ನು ಪ್ರಾಧಿಕಾರವು ಸರ್ವೇ ಮಾಡಿದೆ. ನಿಯಮಬಾಹಿರವಾಗಿ ಈ ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದು, ಒಂದು ವಾರದೊಳಗೆ ಅಧಿಕೃತ ಕಟ್ಟಡ ನಕ್ಷೆ (Building Map) ಹಾಜರುಪಡಿಸದಿದ್ದರೆ ಇಡೀ ಕಟ್ಟಡವನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಲಾಗುವುದು ಎಂದು ಪ್ರಾಧಿಕಾರ ಅಂತಿಮ ಎಚ್ಚರಿಕೆ ನೀಡಿದೆ.

ತಿಂಗಳಿಗೆ 15 ಸಾವಿರ ಸಂಬಳ.. ಆದ್ರೆ ಲಕ್ಷ ಲಕ್ಷದ ಆಸ್ತಿ!

ವಿಶೇಷ ತನಿಖಾ ದಳ (SIT) ನಡೆಸಿರುವ ತನಿಖೆಯಲ್ಲಿ ಆರೋಪಿಗಳ ಅಕ್ರಮ ಆಸ್ತಿಯ ಆಘಾತಕಾರಿ ವಿವರಗಳು ಹೊರಬಂದಿವೆ. ಬ್ಯಾಂಕ್‌ನಿಂದ ಹೊರಗುತ್ತಿಗೆ ಆಧಾರದ ಮೇಲೆ ದೇಣಿಗೆ ಹಣ ಎಣಿಕೆ ಮಾಡಲು ನೇಮಕಗೊಂಡಿದ್ದ ಲವಕುಶ್ ಮಿಶ್ರಾ ಮತ್ತು ಆತನ ಸಂಬಂಧಿ ಅನುಕಲ್ಪ್ ಮಿಶ್ರಾ ಅವರ ಮಾಸಿಕ ಸಂಬಳ ಕೇವಲ ₹12,000 ದಿಂದ ₹20,000 ಆಗಿತ್ತು. ಆದರೆ, ಇಷ್ಟು ಕಡಿಮೆ ಸಂಬಳದ ನಡುವೆಯೂ ಲವಕುಶ್ ₹25 ಲಕ್ಷ ಮೌಲ್ಯದ ನಿವೇಶನ ಖರೀದಿಸಿದ್ದರೆ, ಅನುಕಲ್ಪ್ ಬರೋಬ್ಬರಿ ₹65 ಲಕ್ಷ ವೆಚ್ಚದಲ್ಲಿ ಫಾರ್ಮ್‌ಹೌಸ್ ನಿರ್ಮಿಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

₹80 ಲಕ್ಷ ನಗದು ವಶ:

ರಾಮಮಂದಿರದ ಹುಂಡಿಯಿಂದ ಸುಮಾರು 7 ಕೋಟಿ ರೂಪಾಯಿಗಳನ್ನು ವ್ಯವಸ್ಥಿತವಾಗಿ ಲೂಟಿ ಮಾಡಲಾಗಿದೆ ಎಂದು ಅಂದಾಜಿಸಲಾಗಿದ್ದು, ಈವರೆಗೆ ಪೊಲೀಸರು ₹80 ಲಕ್ಷ ನಗದನ್ನು ಜಪ್ತಿ ಮಾಡಿದ್ದಾರೆ. ಇದರಲ್ಲಿ ಲವಕುಶ್ ಮಿಶ್ರಾ ಅವರ ಮನೆಯಲ್ಲಿ ಕೊಟ್ಟಿಗೆಯ ಸಗಣಿಯಡಿ ಬಚ್ಚಿಟ್ಟಿದ್ದ ₹14.25 ಲಕ್ಷ ನಗದು ಕೂಡ ಸೇರಿದೆ. ಪ್ರಕರಣದ ವ್ಯಾಪ್ತಿ ದೊಡ್ಡದಿರುವುದರಿಂದ ಎಸ್‌ಐಟಿ ತಂಡವು ಕಳೆದ 5 ವರ್ಷಗಳ ರಾಮಮಂದಿರ ಟ್ರಸ್ಟ್‌ನ ಹಣಕಾಸು ದಾಖಲೆಗಳನ್ನು ಮರುಪರಿಶೀಲಿಸುತ್ತಿದ್ದು, ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಿದೆ.

Share

Leave a comment

Leave a Reply

Your email address will not be published. Required fields are marked *

Related Articles