SUDDIKSHANA KANNADA NEWS/ DAVANAGERE/ DATE:15-09-2024
ದಾವಣಗೆರೆ: ಚಿತ್ರದುರ್ಗದ ಸಿರಿಗೆರೆ ತರಳಬಾಳು ಬೃಹನ್ಮಠದ ಬಗ್ಗೆ ಕೆಲವರು ಪಿತೂರಿ, ಅಪಸ್ವರ, ಸುಳ್ಳು ವದಂತಿ ಹರಡುತ್ತಿದ್ದು, ಈ ಬಗ್ಗೆ ಭಕ್ತರು ಜಾಗೃತರಾಗಿರಬೇಕು. ಯಾರೂ ಧೃತಿಗೆಡುವ ಅವಶ್ಯಕತೆ ಇಲ್ಲ ಎಂದು ಸಿರಿಗೆರೆ ಮಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭಕ್ತರಿಗೆ ಧೈರ್ಯ ತುಂಬಿದರು.
ಹರಿಹರ ತಾಲೂಕಿನ ಸಾಧು ವೀರಶೈವ ಸಮಾಜದಿಂದ ಮಲೇಬೆನ್ನೂರಿನ ಯಲವಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ಸಿರಿಗೆರೆಯಲ್ಲಿ ಸೆಪ್ಟಂಬರ್ 24ರಂದು ನಡೆಯುವ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ 32 ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಭಕ್ತಿ ಸಮರ್ಪಣಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸಿರಿಗೆರೆ ಮಠಕ್ಕೆ ಭವ್ಯ ಪರಂಪರೆ ಇದೆ. ಇತಿಹಾಸವೂ ಇದೆ. ಇತಿಹಾಸ ಕೇಳಿದರೆ ರೋಮಾಂಚನವಾಗುತ್ತದೆ. ಮಠದಲ್ಲಿ ಏನೇ ತೀರ್ಮಾನ ಮಾಡಿದರೂ ಭಕ್ತರು ಪಾಲಿಸುತ್ತಾರೆ. ಗುರುಗಳ ಆದೇಶ ಉಲ್ಲಂಘಿಸುವ ಪರಂಪರೆ ಮಠದಲ್ಲಿ ಇಲ್ಲ. ಚ್ಯುತಿ ಬಾರದಂತೆ ಪ್ರತಿಯೊಬ್ಬರೂ ಮಠಕ್ಕೆ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಭಕ್ತರು ಯಾವಾಗಲೂ ಶಿಷ್ಯರು ಗುರುಗೆ ಅಂಜುತ್ತಾರೆ, ಗುರುಗಳು ಶಿಷ್ಯರಿಗೆ ಅಂಜುತ್ತಾರೆ ಎಂಬ ಮಾತು ಅರ್ಥ ಮಾಡಿಕೊಳ್ಳಬೇಕಿದೆ. ಭಕ್ಚರ ವಿಷಯದಲ್ಲಿ ಮೊದಲಿನಿಂದಲೂ ಸತ್ಯನಿಷ್ಛೆಯಿಂದಲೇ ನಡೆದುಕೊಂಡು ಬಂದಿದ್ದೇವೆ. ಬರುತ್ತಲೇ ಇದ್ದೇವೆ. ಈ ಆತ್ಮತೃಪ್ತಿ ತಮಗಿದೆ. ಕೇವಲ ಉಪದೇಶ ಮಾಡುವುದು ಧರ್ಮ ಆಗುವುದಿಲ್ಲ. ಬದುಕು ಬಿಟ್ಟು ಧರ್ಮ ಇಲ್ಲ. ಹಾಗಾಗಿ, ಧರ್ಮಪ್ರಜ್ಞೆ, ಜಾಗೃತಿ ಎಲ್ಲರಲ್ಲಿಯೂ ಬಂದಾಗ ಮಾತ್ರ ಸವಾಲು ಎದುರಿಸುವ ಶಕ್ತಿ ಬಂದೇ ಬರುತ್ತದೆ. ಈ ನಿಟ್ಟಿನಲ್ಲಿ ಭಕ್ತರು ಗಂಭೀರವಾಗಿ ಆಲೋಚಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಬಿ. ಪಿ. ಹರೀಶ್, ಬಿಜೆಪಿ ಮುಖಂಡ ವೀರೇಶ್ ಹನಗವಾಡಿ, ಸಮಾಜದ ಕಾರ್ಯದರ್ಶಿ ಇಟಗಿ ಶಿವಣ್ಣ, ರಾಜಪ್ಪ, ಆಧ್ಮಾತ್ಯ ಚಿಂತಕ ಡಿ. ಸಿದ್ದೇಶ್, ಉಪಾಧ್ಯಕ್ಷ ಹೆಚ್. ಎಂ. ಶಿವಾನಂದಪ್ಪ, ಸದಸ್ಯರಾದ ಡಿ. ಹೆಚ್. ರತ್ನಮ್ಮ, ವನಜಾಕ್ಷಮ್ಮ ಮತ್ತಿತರರು ಹಾಜರಿದ್ದರು. ಹರಿಹರ ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಗೌಡ್ರ ಮಹಾದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.