SUDDIKSHANA KANNADA NEWS/ DAVANAGERE/ DATE:13-11-2024
ದಾವಣಗೆರೆ: ಮಧ್ಯ ಕರ್ನಾಟಕದ ಕೇಂದ್ರ ಬಿಂದು ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಗಟ್ಟಿಯಾಗಿ ನೆಲೆಯೂರಿಸಿದ ಶ್ರಮ ಮಾಜಿ ಸಂಸದ ಡಾ. ಜಿ.ಎಂ ಸಿದ್ದೇಶ್ವರ ಅವರಿಗೆ ಸೇರಬೇಕು. ಸಂಸದರಾಗಿ, ಕೇಂದ್ರದ ರಾಜ್ಯ ಸಚಿವರಾಗಿ ವಿಶ್ವಮಟ್ಟದಲ್ಲಿ ದಾವಣಗೆರೆಯನ್ನು ನೋಡುವಂತೆ ಮಾಡಿದ ಕೀರ್ತೀ ಅವರಿಗೆ ಸಲ್ಲುತ್ತದೆ ಎಂದು ಶೋಷಿತ ವರ್ಗಗಳ ಒಕ್ಕೂಟದ ಅದ್ಯಕ್ಷ ಬಾಡದ ಆನಂದರಾಜು ತಿಳಿಸಿದರು.
ಜಿಎಂಐಟಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರನ್ನು ಭೇಟಿ ಮಾಡಿ ಸನ್ಮಾನಿಸಿ ಈ ವಿಷಯ ತಿಳಿಸಿದರು. ಸೋಲಿಲ್ಲದ ಸಂಸತ್ ಸದಸ್ಯರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವ ಸಿದ್ದೇಶ್ವರ ಅವರು ಇಂದಿಗೂ ಜಿಲ್ಲೆಯಲ್ಲಿ ಸಂಘಟನೆ ಮೂಲಕ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ ಎಂದರು.
ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಅನೋನ್ಯ ಬಾಂಧವ್ಯ ಹೊಂದಿರುವ ಸಿದ್ಧಣ್ಣ ಪಕ್ಷದ ಸಂಘಟನೆ ವಿಚಾರದಲ್ಲಿ ಮಾತ್ರ ಒಂದು ಹೆಜ್ಜೆ ಮುಂದೆ ಇರುತ್ತಾರೆ ಎಂದರು.
ವಯಸ್ಸು 70 ದಾಟಿದರೂ ಸಹ ಯುವಕರು ನಾಚುವಂತೆ ಕೆಲಸ ಮಾಡುತ್ತಿದ್ದಾರೆ, ಸಾಮಾನ್ಯ ಕಾರ್ಯಕರ್ತರಿಗೂ ಮಾರ್ಗದರ್ಶಕರಾಗಿ ಪಕ್ಷವನ್ನು ಸಂಘಟನೆ ಮಾಡುವ ಮೂಲಕ ಬಿಜೆಪಿಗೆ ಒಂದು ದೊಡ್ಡ ಶಕ್ತಿಯಾಗಿದ್ದಾರೆ ಎಂದು ಬಾಡಾದ ಆನಂದರಾಜು ತಿಳಿಸಿದರು.
ರಾಷ್ಟ್ರ ಮತ್ತು ರಾಜ್ಯ ನಾಯಕರು ದಾವಣಗೆರೆಗೆ ಭೇಟಿ ನೀಡಿದರೆ ಸಿದೇಶ್ವರ ಅವರನ್ನು ಭೇಟಿಯಾಗದೇ ಹೋಗುವುದಿಲ್ಲ. ಏಕೆಂದರೆ ರಾಜಕೀಯ ಹೊರತುಪಡಿಸಿ ನೋಡಿದರೂ ಅವರಲ್ಲಿನ ವಿಶ್ವಾಸತೆ, ಸರಳತೆ, ವ್ಯಕ್ತಿತ್ವ ಎಲ್ಲರಿಗೂ ಇಷ್ಟವಾಗುತ್ತದೆ. ಒಂದು ಸಣ್ಣ ಸಮಾಜದ ಮುಖಂಡರು ಭೇಟಿ ನೀಡಿದರೂ ಸೌಜನ್ಯದಿಂದ ಮಾತನಾಡಿಸಿ ಅವರ ಕಷ್ಟವನ್ನು ಆಲಿಸುತ್ತಾರೆ. ಹೀಗಾಗಿಯೇ ಸಿದ್ಧಣ್ಣ ಎಂದೆಂದಿಗೂ ಸರ್ವ ಸಮಾಜದವರು ಸಹ ಪಕ್ಷಾತೀತವಾಗಿ ಇಷ್ಟಪಡುತ್ತಾರೆ ಎಂದರು.
ಒಂದು ಮನೆಯಾಗಲಿ, ಸಮಾಜವಾಗಲಿ, ಸಂಘಟನೆಯಾಗಲಿ ಮೊದಲು ಮನೆ ಯಜಮಾನ ಮಾದರಿಯಾಗಿರಬೇಕು, ಅದೇ ರೀತಿ ಸಿದ್ಧಣ್ಣ ಕೂಡ ಬಿಜೆಪಿ ಪಕ್ಷ ಒಂದು ಕುಟುಂಬವೆಂಬಂತೆ ಯಜಮಾನರಾಗಿ ಕಾಪಾಡಿಕೊಂಡು ಹೋಗುತ್ತಿದ್ದಾರೆ. ಬಿಜೆಪಿ ಪಕ್ಷಕ್ಕೆ ಚುನಾವಣೆಯಲ್ಲಿ ಸೋಲಾಗಿರಬಹುದು, ಆದರೆ ಸಂಘಟನೆಯಲ್ಲಿ ಅಲ್ಲ ಎಂದು ಜಿ.ಎಂ ಸಿದ್ಧೇಶ್ವರ ಅವರು ತೋರಿಸಿಕೊಟ್ಟಿದ್ದಾರೆ. ಉಪ ಚುನಾವಣೆಯಲ್ಲೂ ಸಹ ಪಕ್ಷದ ಅಭ್ಯರ್ಥಿಗಳ ಪರವಾಗಿ ಸಿದ್ದೇಶ್ವರ ಕೆಲಸ ಮಾಡಿದ್ದಾರೆ. ಒಂದು ರಾಜ್ಯ ನಾಯಕರ ಸಾಲಿನಲ್ಲಿದ್ದು ಕೆಲಸ ಮಾಡುವ ಮೂಲಕ ಪಕ್ಷಕ್ಕೆ ದುಡಿಯುತ್ತಿರುವುದು ಎಲ್ಲಾ ಕಾರ್ಯಕರ್ತರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಸಂಘಟನೆ ನೇತೃತ್ವವನ್ನು ಸಿದ್ಧೇಶ್ವರ ಅವರಿಗೆ ವಹಿಸಬೇಕು, ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಬಾಡದ ಆನಂದರಾಜು ಪಕ್ಷದ ವರಿಷ್ಠರಿಗೆ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್,ಸಂಘ ಪರಿವಾರದ ಕರಾಟೆ ತಿಮ್ಮೇಶ್, ವೀರಶೈವ ಸಮಾಜದ ಮುಖಂಡ ನಿಲೋಗಲ್ ಪ್ರಸನ್ನಕುಮಾರ್, ದಾಗಿನಕಟ್ಟೆ ನಾಗರಾಜ್, ಮಾರುತಿ, ಪಾಲಿಕೆ ಮಾಜಿ ಸದಸ್ಯ
ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.