ಮುಂಬೈ: ಖ್ಯಾತ ಕಿರುತೆರೆ ಹಾಗೂ ಬಾಲಿವುಡ್ ಅಭಿನೇತ್ರಿ ಶ್ವೇತಾ ತಿವಾರಿ ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ನಿಂದನೆ ಮತ್ತು ಅಶ್ಲೀಲ ಕಮೆಂಟ್ಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಸಾಲುಗಳನ್ನು ಬರೆದುಕೊಂಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರನ್ನು ಹಗುರವಾಗಿ ಕಾಣುವ ಹಾಗೂ ಕೆಟ್ಟ ಪದಗಳಿಂದ ನಿಂದಿಸುವ ಸಂಸ್ಕೃತಿಯನ್ನು ಕಠಿಣವಾಗಿ ಖಂಡಿಸಿದ್ದಾರೆ.
ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಲೈವ್ ಮತ್ತು ಪೋಸ್ಟ್ಗಳ ಕೆಳಗೆ ಸತತವಾಗಿ ಬಂದ ಅಶ್ಲೀಲ ಹಾಗೂ ನಿಂದನಾತ್ಮಕ ಕಮೆಂಟ್ಗಳ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡ ಶ್ವೇತಾ, ಇಂತಹ ವಿಕೃತ ಕಮೆಂಟ್ಗಳನ್ನು ಮಾಡುವವರ ಹಿನ್ನೆಲೆ ಕಂಡು ತಮಗೆ ಆಘಾತವಾಗಿದೆ ಎಂದಿದ್ದಾರೆ. “ಈ ರೀತಿ ಕೆಟ್ಟ ಪದಗಳಿಂದ ನಿಂದಿಸುವ ಪುರುಷರು ಕೇವಲ ಅನಕ್ಷರಸ್ಥರು ಅಥವಾ ಹಾದಿಬೀದಿಯವರಲ್ಲ. ಅವರಲ್ಲಿ ಹಲವರು ಉತ್ತಮ ಶಿಕ್ಷಣ ಪಡೆದವರು, ಸಮಾಜದಲ್ಲಿ ಗೌರವಾನ್ವಿತ ಕುಟುಂಬಗಳಿಂದ ಬಂದವರು ಹಾಗೂ ಅವರ ಮನೆಯಲ್ಲಿ ತಾಯಿ, ಹೆಂಡತಿ, ತಂಗಿ ಮತ್ತು ಹೆಣ್ಣುಮಕ್ಕಳು ಇದ್ದಾರೆ. ಆದರೂ, ಮತ್ತೊಬ್ಬ ಮಹಿಳೆಯ ವಿರುದ್ಧ ಇಷ್ಟೊಂದು ಕೀಳ ಮಟ್ಟದ ಪದಗಳನ್ನು ಬಳಸಲು ಅವರಿಗೆ ಹೇಗೆ ಮನಸ್ಸು ಬರುತ್ತದೆ?” ಎಂದು ಶ್ವೇತಾ ಪ್ರಶ್ನಿಸಿದ್ದಾರೆ.
“ಒಬ್ಬ ಮಹಿಳೆ ನಿಮಗೆ ಪರಿಚಯವಿಲ್ಲ ಎಂದಮಾತ್ರಕ್ಕೆ ಅಥವಾ ಆಕೆಯ ಅಭಿಪ್ರಾಯಗಳಿಗೆ ನೀವು ಅಸಮ್ಮತಿ ಸೂಚಿಸಿದ ತಕ್ಷಣ ಆಕೆಯ ಗೌರವ ಕಡಿಮೆಯಾಗುವುದಿಲ್ಲ. ನಿಮಗೆ ಒಬ್ಬ ಮಹಿಳೆಯನ್ನು ಇಷ್ಟವಿಲ್ಲದಿದ್ದರೆ ಅಥವಾ ಆಕೆಯ ನಿರ್ಧಾರಗಳು ಇಷ್ಟವಾಗದಿದ್ದರೆ ಆಕೆಯನ್ನು ನಿಂದಿಸುವ ಹಕ್ಕು ನಿಮಗಿಲ್ಲ. ಪ್ರತಿಯೊಬ್ಬ ಮಹಿಳೆಗೂ ಗೌರವ ಸಿಗಬೇಕು. ಕೇವಲ ನಿಮ್ಮ ಮನೆಯಲ್ಲಿರುವ ಅಥವಾ ನೀವು ಪ್ರೀತಿಸುವ ಮಹಿಳೆಯರನ್ನಷ್ಟೇ ಅಲ್ಲ, ಜಗತ್ತಿನ ಪ್ರತಿಯೊಬ್ಬ ಮಹಿಳೆಯನ್ನೂ ಗೌರವಿಸಿ. Period!” ಎಂದು ಶ್ವೇತಾ ತಿವಾರಿ ಖಡಕ್ ಸಂದೇಶ ನೀಡಿದ್ದಾರೆ.
ಪ್ರಸ್ತುತ ಕರಣ್ ಜೋಹರ್ ನಡೆಸಿಕೊಡುತ್ತಿರುವ ‘ದಿ ಟ್ರೇಟರ್ಸ್ ಸೀಸನ್ 2’ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿರುವ ಶ್ವೇತಾ ತಿವಾರಿ, ಇತ್ತೀಚೆಗಷ್ಟೇ ಇನ್ಸ್ಟಾಮಾರ್ಟ್ ಮೂಲಕ ಆರ್ಡರ್ ಮಾಡಿದಾಗ ಬಂದ ತಂಪಾದ ಪಾನೀಯದಲ್ಲಿ ಜಿರಳೆ ಪತ್ತೆಯಾದ ಬಗ್ಗೆಯೂ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಕಮಿಷನರ್ ಗಮನಕ್ಕೆ ತಂದು ಸುದ್ದಿ ಮಾಡಿದ್ದರು. ಇದೀಗ ಅವರು ಮಹಿಳೆಯರ ಪರವಾಗಿ ಎತ್ತಿರುವ ಈ ಧ್ವನಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.





Leave a comment