ಹೊಸದೆಹಲಿ: ಭಾರತೀಯ ಸಂವಿಧಾನವು ಮುಸ್ಲಿಮರ ಹಾಗೂ ಇತರ ಧಮೀಯ ಅಲ್ಪಸಂಖ್ಯಾತರ ಘನತೆಯ ಬದುಕಿಗೆ ದೊಡ್ಡ ತಡೆಯಾಗಿದೆ ಎಂದು ಜೇಎನ್‌ಯು ಮಾಜಿ ಸಂಶೋಧಕ ಶರ್ಜೀಲ್ ಇಮಾಮ್ ನೀಡಿರುವ ಹೇಳಿಕೆ ವ್ಯಾಪಕ ಚರ್ಚೆಗೆ ಹಾಗೂ ವಿವಾದಕ್ಕೆ ಗ್ರಾಸವಾಗಿದೆ.
ಮುಸ್ಲಿಮರ ರಾಜಕೀಯ ರಾಜೀ ಹಾಗೂ ಕಡಿಮೆ ಪ್ರಾತಿನಿಧ್ಯದ ವಿಷಯದಲ್ಲಿ ವಿಭಜಕ ರಾಜಕಾರಣವನ್ನು ಮುನ್ನೆಲೆಗೆ ತರುತ್ತಿರುವ ಶರ್ಜೀಲ್ ಇಮಾಮ್ ಅವರ ವಾದ ಸಂಪೂರ್ಣ ತಪ್ಪಾಗಿದ್ದು, ಸಂವಿಧಾನವೇ ಎಲ್ಲಾ ಸಮುದಾಯಗಳ ಹಕ್ಕುಗಳು, ಸಮಾನತೆ ಮತ್ತು ಪ್ರಜಾಪ್ರಭುತ್ವ ಸುಧಾರಣೆಗಳನ್ನು ಭದ್ರಪಡಿಸುವ ಬಲವಾದ ಅಡಿಪಾಯವಾಗಿದೆ ಎಂದು ಲೇಖನವೊಂದು ಪ್ರತಿಪಾದಿಸಿದೆ.
ದೇಶದ ಸ್ವಾತಂತ್ರ್ಯದ ನಂತರ ಅಳವಡಿಸಿಕೊಳ್ಳಲಾದ ಭಾರತೀಯ ಸಂವಿಧಾನವು ಯಾವುದೇ ಧರ್ಮ, ಜಾತಿ ಅಥವಾ ಭಾಷೆಯ ವ್ಯತ್ಯಾಸಗಳಿಲ್ಲದೆ ಎಲ್ಲರಿಗೂ ಸಮಾನ ಹಕ್ಕುಗಳನ್ನು ಒದಗಿಸಿದೆ. ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನಾಕಾರರು ಅಂದಿನ ಕಾಲದ ಧಾರ್ಮಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಲು ಬಲವಾದ ಚೌಕಟ್ಟನ್ನು ನಿರ್ಮಿಸಿದ್ದಾರೆ. ಮೂಲಭೂತ ಹಕ್ಕುಗಳಾದ ವಿಧಿ 14 (ಸಮಾನತೆ), ವಿಧಿ 21 (ವೈಯಕ್ತಿಕ ಸ್ವಾತಂತ್ರ್ಯ) ಹಾಗೂ ವಿಧಿ 25 ರಿಂದ 30 ರವರೆಗಿನ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು ಪ್ರತಿಯೊಬ್ಬ ನಾಗರಿಕನಿಗೂ ರಕ್ಷಣೆ ನೀಡಿವೆ. ಆದರೆ, ಇಮಾಮ್ ಅವರು ಇಕ್ಬಾಲ್ ಮತ್ತು ಮುಹಮ್ಮದ್ ಅಲಿ ಜಿನ್ನಾ ಅವರ ವಿಭಜಕ ವಾದಗಳನ್ನು ಹಾಗೂ ಪ್ರತ್ಯೇಕ ಮತದಾರರ ವ್ಯವಸ್ಥೆಯನ್ನು ಮರುಪರಿಚಯಿಸಲು ಯತ್ನಿಸುತ್ತಿರುವುದು ಇಂದಿನ ಆಧುನಿಕ ಭಾರತಕ್ಕೆ ಅಪ್ರಸ್ತುತ ಎಂದು ವಿಶ್ಲೇಷಿಸಲಾಗಿದೆ.
ಸಂವಿಧಾನದ ಆಶಯ: ಸಂವಿಧಾನವು ಯಾವುದೇ ಧರ್ಮವನ್ನು ಹತ್ತಿಕ್ಕುವುದಿಲ್ಲ, ಬದಲಿಗೆ ಭಿನ್ನತೆಗಳನ್ನು ನಿವಾರಿಸಲು ಹಾಗೂ ಎಲ್ಲರಿಗೂ ಸಮಾನ ಅವಕಾಶ ನೀಡಲು ಅನುವು ಮಾಡಿಕೊಡುತ್ತದೆ.
ಐತಿಹಾಸಿಕ ಹಿನ್ನೆಲೆ: ಬ್ರಿಟಿಷರ ಕಾಲದ ಜಿನ್ನಾ ಅವರ ಪ್ರತ್ಯೇಕ ಮತದಾರರ ವಾದ ಅಥವಾ ಇಕ್ಬಾಲ್ ಅವರ ಸಿದ್ಧಾಂತಗಳು ಇಂದಿನ ಕಾಲಘಟ್ಟದಲ್ಲಿ ಅನ್ವಯವಾಗುವುದಿಲ್ಲ. ಭಾರತವು ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕನ್ನು ಅಳವಡಿಸಿಕೊಂಡಿದೆ.
ರಾಜಕೀಯ ಪ್ರಾತಿನಿಧ್ಯ ಮತ್ತು ಸುಧಾರಣೆ: ಮುಸ್ಲಿಮರಲ್ಲಿ ರಾಜಕೀಯ ಹಾಗೂ ಸಾಮಾಜಿಕ ಹಿಂದುಳಿದಿರುವಿಕೆ ಅಥವಾ ಪ್ರಾತಿನಿಧ್ಯದ ಕೊರತೆ ಇದ್ದರೆ, ಅದನ್ನು ಸಂವಿಧಾನದ ಚೌಕಟ್ಟಿನಲ್ಲೇ ಪ್ರಜಾಪ್ರಭುತ್ವ ಸುಧಾರಣೆಗಳು, ಚುನಾವಣಾ ಸುಧಾರಣೆಗಳು ಮತ್ತು ಸಾಂಸ್ಥಿಕ ಬದಲಾವಣೆಗಳ ಮೂಲಕ ಪರಿಹರಿಸಿಕೊಳ್ಳಬೇಕೆ ಹೊರತು ಸಂವಿಧಾನವನ್ನೇ ತಿರಸ್ಕರಿಸಬಾರದು.
ಮುಸ್ಲಿಮರು ಯಾವುದೇ ಏಕರೂಪದ ರಾಜಕೀಯ ಗುಂಪಲ್ಲ; ಅವರ ಆಲೋಚನೆಗಳು ಪ್ರದೇಶ, ಭಾಷೆ ಹಾಗೂ ಪರಿಸ್ಥಿತಿಗೆ ತಕ್ಕಂತೆ ಭಿನ್ನವಾಗಿರುತ್ತವೆ. ಆದ್ದರಿಂದ ಸಂವಿಧಾನ ವಿರೋಧಿ ನಿಲುವುಗಳನ್ನು ಬಿಟ್ಟು, ಸಾಂವಿಧಾನಿಕ ಚೌಕಟ್ಟಿನಲ್ಲೇ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಒತ್ತು ನೀಡಬೇಕು ಎಂದು ಅಭಿಪ್ರಾಯಪಡಲಾಗಿದೆ.





Leave a comment