SUDDIKSHANA KANNADA NEWS/ DAVANAGERE/ DATE:01-03-2024
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಸಲ್ಲಿಸಿದ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು, ಕೇವಲ 65 ಲಕ್ಷ ಜನಸಂಖ್ಯೆ ತೋರಿಸಲಾಗಿದೆ. ವೀರಶೈವ ಲಿಂಗಾಯತ ಸಮುದಾಯವು ಉಪಪಂಗಡಗಳೆಲ್ಲವೂ ಸೇರಿದರೆ 2 ಕೋಟಿಗೂ ಹೆಚ್ಚು ಜನಸಂಖ್ಯೆ ಆಗಲಿದೆ. ಉದ್ದೇಶಪೂರ್ವಕವಾಗಿ ಕಡಿಮೆ ಜನಸಂಖ್ಯೆ ತೋರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೊದಲಿನಿಂದಲೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ದಾವಣಗೆರೆಯಲ್ಲಿ ನಡೆದ ಅಧಿವೇಶನದಲ್ಲಿಯೂ ವಿರೋಧಿಸಿ ನಿರ್ಣಯ ಮಂಡಿಸಿದ್ದೇವೆ. ಸಿಎಂ ಸಿದ್ದರಾಮಯ್ಯರ ಗಮನಕ್ಕೂ ತಂದಿದ್ದವೆ. ಆದ್ರೆ, ವರದಿ ಸ್ವೀಕಾರ ಮಾಡಲಾಗಿದೆ. ಸಚಿವ ಸಂಪುಟ, ಸದನಕ್ಕೆ ಬರಲಿ. ಆಮೇಲೆ ಏನಾಗುತ್ತೆ ಎಂಬುದನ್ನು ನೋಡೋಣ ಎಂದು ಹೇಳಿದರು.
ಕಾಂತರಾಜ್ ವರದಿಯನ್ನು ತಂದುಕೊಡುವವರು ಜಯಪ್ರಕಾಶ್ ಹೆಗ್ಡೆ ಅವರು. ಕಳೆದ 9 ವರ್ಷಗಳ ಹಿಂದೆ ನಡೆಸಿದ ಜಾತಿಗಣತಿ ಅವೈಜ್ಞಾನಿಕವಾಗಿದೆ. ನಾವು ಯಾವ ಸಮುದಾಯದ ವಿರೋಧಿಗಳಲ್ಲ. ವೈಜ್ಞಾನಿಕ, ಸಮರ್ಪಕ ಸರ್ವೆ ಆಗಬೇಕೆಂಬ ಬಸವರಾಜ್ ಬೊಮ್ಮಾಯಿ ಅವರ ಒತ್ತಾಯ ಸರಿಯಾಗಿಯೇ ಇದೆ ಎಂದು ಸಮರ್ಥಿಸಿಕೊಂಡರು.
ಜನಸಂಖ್ಯೆ ಆಧಾರದ ಮೇಲೆ ನಾವು ಹೇಳ್ತೀವಿ. ವೀರಶೈವ ಲಿಂಗಾಯತ ಸಮುದಾಯದ ಉಪಪಂಗಡಗಳೆಲ್ಲವೂ ಸೇರಿದರೆ 2 ಕೋಟಿ ಜನಸಂಖ್ಯೆ ಇದೆ. ವರದಿ ಸ್ವೀಕಾರ ಮಾಡಲಾಗಿದೆ. ಮುಂದೇನು ಮಾಡ್ತಾರೆ ನೋಡೋಣ. ಆಮೇಲೆ ವಿಚಾರ ಮಾಡ್ತೀವಿ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.
ಉದ್ದೇಶಪೂರ್ವಕವಾಗಿಯೇ ಜನಸಂಖ್ಯೆ ಕಡಿಮೆ ತೋರಿಸಲಾಗಿದೆ ಎಂಬುದು ವರದಿಯಿಂದ ಗೊತ್ತಾಗುತ್ತದೆ. 9 ವರ್ಷದ ಕೆಳಗೆ ಮಾಡಿದ ಸರ್ವೇ. ಈಗ ಸ್ವೀಕಾರ ಮಾಡಲಾಗಿದೆ. ನಾವು ಖಾಸಗಿಯಾಗಿ ಸರ್ವೇ ನಡೆಸಿಲ್ಲ. ಖಾಸಗಿಯಾಗಿ ನಾವೇ ಸರ್ವೆ ನಡೆಸುವ ಆಲೋಚನೆ ಇದೆ. ಮಾರ್ಚ್ ತಿಂಗಳ ಬಳಿಕ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಪರಿಶಿಷ್ಟರು 1.8 ಕೋಟಿ ಜನಸಂಖ್ಯೆಯಿರುವುದಕ್ಕೆ ನಮ್ಮ ಅಭ್ಯಂತರ, ವಿರೋಧ ಇಲ್ಲ. ವೀರಶೈವ ಲಿಂಗಾಯತ ಸಮುದಾಯದ ಜನಸಂಖ್ಯೆ ಕಡಿಮೆ ತೋರಿಸಲಾಗಿರುವುದಕ್ಕೆ ನಮ್ಮ ಆಕ್ಷೇಪ ಇದೆ. 65 ಲಕ್ಷ ಜನಸಂಖ್ಯೆ ಇದ್ದಾರೆಂದು ತೋರಿಸಿದ್ದಾರೆ. ಡಬಲ್ ಇದೆ. 2 ಕೋಟಿ ಜನಸಂಖ್ಯೆ ಇದೆ. ಜಾತಿ ಗಣತಿ ಬಹಿರಂಗದ ಬಳಿಕ ಜಾತಿ ಜಾತಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಕೆಲವರು ಛೂ ಬಿಡ್ತಾರೆ. ಹೊರ ಬಂದಾಗ ಹಾಗೆ ಆಗುತ್ತದೆ ಎಂದು ವಿಶ್ಲೇಷಿಸಿದರು.
ಜಾತಿ ಗಣತಿ ವರದಿಯಲ್ಲಿನ ಬಹುತೇಕ ಅಂಶಗಳನ್ನು ಎಲ್ಲರೂ ನೋಡಿದ್ದಾರೆ. ಹೆಗ್ಡೆಯವರ ಬಳಿ ಮಾಹಿತಿ ಪಡೆದಿದ್ದಾರೆ. ಹೆಚ್ಚು ಕಡಿಮೆ ಹೇಳುತ್ತಿದ್ದಾರೆ. ಸಚಿವ ಸಂಪುಟ, ವಿಧಾನಸಭೆ, ವಿಧಾನಪರಿಷತ್ ವರದಿ ಮಂಡನೆ ಬರಬೇಕಲ್ವಾ. ಆಗ ನೋಡೋಣ. ಪುನರ್ ಪರಿಶೀಲನೆ ನಡೆಸುವಂತೆ ಒತ್ತಾಯಿಸಲಾಗುವುದು ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು