SUDDIKSHANA KANNADA NEWS/ DAVANAGERE/ DATE:12-02-2024
ದಾವಣಗೆರೆ: ಬಂಜಾರ ಸಮುದಾಯದವರ ದಾರ್ಶನಿಕ ಜಗದ್ಗುರು ಸಂತ ಸೇವಾಲಾಲ್ ರವರ 285ನೇ ಜಯಂತಿ ಸಮಾರಂಭವನ್ನು ಫೆ.13 ರಿಂದ 15 ರವರೆಗೆ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಮುಖಂಡ ಕೆ. ರಾಘವೇಂದ್ರನಾಯ್ಕ ಹೇಳಿದರು.
ಫೆ13 ರಂದು ಕಾಟಿ ಆರೋಹಣ, ತಾಂಡಾ ಸಾಂಪ್ರದಾಯಿಕ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಗಳು ಸತ್ಸಂಗ, ವಾಜಾ ಭಜನೆ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಫೆ. 14 ರಂದು ಪೂರ್ಣಕುಂಭ ಮೆರವಣಿಗೆ, ಮಾತಾ ಮರಿಯಮ್ಮ ದೇವಿಗೆ ಅಭಿಷೇಕ ಮತ್ತು ಅಲಂಕಾರ, ಸಂತ ಸೇವಾಲಾಲ್ ಮೂರ್ತಿಯ ಅಭಿಷೇಕ ಮತ್ತು ಅಲಂಕಾರ, ಉಭಯ ದೇವಳಗಳಲ್ಲಿ ವಾಜಾ ಭಜನ್ ಮತ್ತು ಸಮುದಾಯದ ಸಾಮೂಹಿಕ ಪ್ರಾರ್ಥನೆ, ಆಗಮಿತ ಮಾಲಾಧಾರಿಗಳಿಗೆ ದರ್ಶನ ಮತ್ತು ಸೇವಾ ಸಂದೇಶ, ಮಹಾಮಂಗಳಾರತಿ, ಉತ್ಸವ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಪಲ್ಲಕ್ಕಿ ಉತ್ಸವ, ನಿರಂತರವಾಗಿ ಮಾಲಾಧಾರಿಗಳಿಂದ ಮಾಲೆ ಇರುಮುಡಿಗಳ ಸಮರ್ಪಣಾ ಕಾರ್ಯಕ್ರಮ ಜರುಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ.14 ರಂದು ಮಧ್ಯಾಹ್ನ 2.30 ಕ್ಕೆ ಸಂತ ಸೇವಾಲಾಲರ 285ನೇ ಜಯಂತಿ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಸಿಎಂ ಡಿ.ಕೆ. ಶಿವಕುಮಾರ್,ಮಾಜಿ ಮುಖ್ಯಮಂತ್ರಿಗಳಾದ ಬಿ .ಎಸ್. ಯಡಿಯೂರಪ್ಪ, ಹೆಚ್. ಡಿ. ಕುಮಾರಸ್ವಾಮಿ, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ, ಮಹಾರಾಷ್ಟ್ರ ಸರ್ಕಾರದ ಸಚಿವರಾದ ಸಂಜಯ್ ಡಿ. ರಾಥೋಡ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಚಿವ ಮಧು ಬಂಗಾರಪ್ಪ, ವಿರೋಧಪಕ್ಷದ ನಾಯಕ ಆರ್. ಅಶೋಕ್, ಸಂಸದರುಗಳಾದ ಡಾ. ಜಿ.ಎಂ. ಸಿದ್ದೇಶ್ವರ, ಬಿ.ವೈ. ರಾಘವೇಂದ್ರ, ಡಾ. ಉಮೇಶ್ ಜಿ. ಜಾಧವ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡರು ವಹಿಸಲಿದ್ದಾರೆಂದರು.
ಕಾರ್ಯಕ್ರಮದಲ್ಲಿ ಐದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಜಿಲ್ಲಾಡಳಿತದೊಂದಿಗೆ ಹಲವಾರು ಸಭೆ, ಯಾವುದೇ ರೀತಿಯ ಅನಾನುಕೂಲ ಆಗದಂತೆ ಊಟ, ವಸತಿ, ಸಾರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಅಖಿಲ ಭಾರತದ ವಿವಿಧ ಭಾಗದ ಕವಿಗಳು ಗೋಷ್ಠಿಯಲ್ಲಿ ಭಾಗವಹಿಸುವರು. ಬಂಜಾರ ಸಮಾಜದ ಕಲೆ, ಸಂಸ್ಕೃತಿಯ ಅನಾವರಣ ನಡೆಯಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಎನ್. ಜಯದೇವನಾಯ್ಕ, ಜಿ. ಚಂದ್ರಾನಾಯ್ಕ, ಜಿ. ಮಂಜಾನಾಯ್ಕ, ಹನುಮಂತನಾಯ್ಕ, ನಂಜಾನಾಯ್ಕ ಇತರರು ಇದ್ದರು.