SUDDIKSHANA KANNADA NEWS/ DAVANAGERE/ DATE:16-03-2024
ದಾವಣಗೆರೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ನಗರದ ಜೆ ಇಮಾಮ್ ನಗರ ಸರ್ಕಲ್ ನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಂವಿಧಾನ ವಿರೋಧಿ ಸಿಎಎ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಫಯಾಜ್ ಅಹಮದ್, ಇದು ಕೇವಲ ಚುನಾವಣೆ ಗಿಮಿಕ್ ಆಗಿದೆ. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ನಂತರ ಎಸ್ ಬಿ ಐ ಬಿಡುಗಡೆ ಮಾಡಿದ ಚುನಾವಣಾ ಬಾಂಡ್ ನ ವರದಿಯ ಭ್ರಷ್ಟಾಚಾರ ಮರೆಮಾಚಲು ಸಿಎಎ ಎಂಬ ಅಸಂವಿಧಾನಿಕ ಕಾನೂನನ್ನು ಜಾರಿ ಮಾಡಿ ದೇಶವನ್ನು ವಿಭಜನೆ ಮಾಡುವ ಕುತಂತ್ರಕ್ಕೆ ಕೈಹಾಕಿದೆ ಎಂದು ಆರೋಪಿಸಿದರು.
ಬಿಜೆಪಿಯು ಇಡಿ, ಸಿಬಿಐ, ಎನ್ ಐಎನಂತಹ ಕೇಂದ್ರೀಯ ಏಜೆನ್ಸಿಗಳನ್ನು ಛೂ ಬಿಟ್ಟು ಭ್ರಷ್ಟಾಚಾರ ಮಾಡಿದ ಕಂಪನಿಗಳು ಮತ್ತು ವಿರೋಧ ಪಕ್ಷದ ನಾಯಕರನ್ನು ಗುರಿ ಮಾಡಿ ಭ್ರಷ್ಟಾಚಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳದೆ ಬಿಜೆಪಿ ಸೇರಲು ಆಹ್ವಾನಿಸುತ್ತಾರೆ. ಇಲ್ಲವೇ ಜೈಲಿಗೆ ಕಳುಹಿಸುತ್ತಾರೆ. ಒಂದು ವೇಳೆ ಬಿಜೆಪಿ ಸೇರಿದರೆ ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ಶುಭ್ರವಾಗಿ ಹೊರಬಂದಂತೆ ಭ್ರಷ್ಟಾಚಾರಿಗಳೆಲ್ಲ ಶುಭ್ರವಾಗುತ್ತಾರೆ. ಅದೇ ರೀತಿ ನೀವು ಸಿಎಎ ಕಾನೂನಿನ ಮೂಲಕ ಪೌರತ್ವ ನೀಡುವ ಬದಲು ಡಿಎನ್ಎ ಆಧಾರಿತವಾಗಿ ನೀಡಿ ಎಂದು
ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಯಾಹಿಯ ಮಾತನಾಡಿ ಸಿಎಎ ಕಾನೂನಿನ ವಿರುದ್ಧ ಹೋರಾಟ ಮುಸ್ಲಿಮರ ಹೋರಾಟ ಆಗದೇ, ಜನಸಾಮಾನ್ಯರ ಹೋರಾಟವಾಗಬೇಕಿದೆ. ಏಕೆಂದರೆ ಬಿಜೆಪಿಯ ಧರ್ಮಧಾರಿತವಾಗಿ ಕಾನೂನುಗಳನ್ನು ರೂಪಿಸಿ ಸಂವಿಧಾನದ ಮೂಲ ಆಶಯಗಳನ್ನು ಬುಡಮೇಲು ಮಾಡುತ್ತಿದೆ. ದೇಶ ವಿಭಜನೆ ಮಾಡುವ ಹುನ್ನಾರ ಮಾಡುತ್ತಿದ್ದೆ, ಆದ್ದರಿಂದ ದೇಶದ 140 ಕೋಟಿ ಜನರು ಕೂಡ ಇದರ ವಿರುದ್ಧ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ಧರ್ಮಧಾರಿತವಾಗಿ ಮುಸ್ಲಿಮರನ್ನು ಹೊರತುಪಡಿಸಿ ಪೌರತ್ವ ನೀಡುವುದು ಅಸಂವಿಧಾನಿಕವಾಗಿದೆ. ಇಲ್ಲಿನ ಸ್ವಾತಂತ್ರ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಎಲ್ಲರೂ ರಕ್ತ ಹರಿಸಿದ್ದಾರೆ. ಮುಸ್ಲಿಮರ ಈ ದೇಶಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದಕ್ಕೆ ಇಲ್ಲಿನ ಕೆಂಪುಕೋಟೆ ತಾಜ್ ಮಹಲ್, ಕುತುಬ್ ಮಿನಾರ್ ಮಂತಾದವು ಸಾಕ್ಷಿಯಾಗಿವೆ. ಇಲ್ಲಿ ನಾವು ಸಿಎಎ ಜಾರಿ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೋಹಸಿನ್ ಮಾತನಾಡಿ ಬಿಜೆಪಿಯ ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಗಳಿಂದ ಬಂದ ನಿರಾಶ್ರಿತರಿಗೆ ನೀವು ಪೌರತ್ವ ನೀಡುತ್ತೀರಿ ಎಂದು ಹೇಳಿದ್ದೀರಿ. ಆದರೆ ಅವರು ಬಂದರೆ ಅವರಿಗೆ ಉದ್ಯೋಗ ವಸತಿ ಶಿಕ್ಷಣ ಮೂಲ ಸೌಕರ್ಯ ಗಳನ್ನು ಹೇಗೆ ನೀಡುತ್ತೀರಾ ಏಕಾಏಕಿ ನೀವು ಯಾವುದೇ ನೀತಿ ರೂಪಿಸದೆ ಇಂತಹ ಕಾನೂನು ತಂದರೆ ಅದು ಹೇಗೆ ಸಾಧ್ಯ? ಅವರನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡು ಸೌಕರ್ಯಗಳನ್ನು ಒದಗಿಸುತ್ತೀರಾ? ಇಲ್ಲಿರುವಂತ ಜನರಿಗೆ ನೀವು ಕನಿಷ್ಠ ಮೂಲ ಸೌಕರ್ಯಗಳನ್ನು ಕೂಡ ಒದಗಿಸಲೂ ಸಾಧ್ಯವಾಗುತ್ತಿಲ್ಲ. ಇದು ಚುನಾವಣಾ ಬಾಂಡ್ ಅಕ್ರಮಗಳನ್ನು
ಮರೆಮಾಚಲು ತರಾತುರಿಯಲ್ಲಿ ಸಿಎಎ ಜಾರಿ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್, ಜಿಲ್ಲಾ ಕೋಶಾಧಿಕಾರಿ ಎ ಆರ್ ತಾಹೀರ್ ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್, ನವೀದ್ ಹಾಗೂ ಹರಿಹರ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು, ಬೆಂಬಲಿಗರು ಉಪಸ್ಥಿತರಿದ್ದರು.