SUDDIKSHANA KANNADA NEWS/ DAVANAGERE/ DATE:16-03-2024
ದಾವಣಗೆರೆ: ದಾವಣಗೆರೆಯ ಪ್ರಸಿದ್ಧ ಮನೆತನದ ಸೊಸೆ ಸಿ. ಕೇಶವಮೂರ್ತಿ ಅವರ ಪತ್ನಿ ನಾಗಮ್ಮ ಕೇಶವಮೂರ್ತಿ ಅವರು ಇಂದು ಸಂಜೆ ವಿಧಿವಶರಾಗಿದ್ದಾರೆ.
ಸಿ. ಕೇಶವಮೂರ್ತಿ ಅವರನ್ನು ಕೈಹಿಡಿದ ಬಳಿಕ ಈ ಮನೆತನಕ್ಕೆ ಸೊಸೆಯಾಗಿ ಬಂದವರು. ನಾಗಮ್ಮ ಕೇಶವಮೂರ್ತಿ ಅವರು ಹುಟ್ಟಿದ ಮನೆಗಷ್ಟೇ ಅಲ್ಲ, ಕೊಟ್ಟ ಮನೆಗೆ ಕೀರ್ತಿ ತಂದವರು. ಈ ಕೀರ್ತಿ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ.
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ, 1993ರ ಜನವರಿ 22ರಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಯ ಸಚಿವೆಯಾಗಿ, ನಗರಸಭೆ ಸದಸ್ಯೆಯಾಗಿ ಆರಂಭಗೊಂಡು ಮುಂದೆ ಕೆಪಿಸಿಸಿ ಉಪಾಧ್ಯಕ್ಷರಾಗಿ, ಜನರಲ್ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ ನಾಗಮ್ಮ ಕೇಶವಮೂರ್ತಿ ಅವರದ್ದು ರಾಜಕೀಯದಲ್ಲಿ ಅಚ್ಚಳಿಯದ ಹೆಸರು.
ಉಪಸಭಾಪತಿ ಆಗಿದ್ದ ನಾಗಮ್ಮ ಕೇಶವಮೂರ್ತಿ
ದಾವಣಗೆರೆ, ಮಾಯಕೊಂಡ ಕ್ಷೇತ್ರದಿಂದ 2 ಬಾರಿ ಶಾಸಕರಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವೆಯಾಗಿ, ವಿಧಾನಸಭೆಯ ಉಪಸಭಾಪತಿಯಾಗಿ, ಬೃಹತ್ ಮತ್ತು ಕೈಗಾರಿಕಾ ಸಚಿವೆಯಾಗಿದ್ದವರು.
ಕನ್ನಡ ಕಡ್ಡಾಯಗೊಳಿಸಿದ್ದ ಶಿಕ್ಷಣ ಸಚಿವೆ ನಾಗಮ್ಮ ಕೇಶವಮೂರ್ತಿ
1993ರ ಮೇ 15ರಂದು ಧಾರವಾಡದ ಜಿಲ್ಲಾ ಉಸ್ತುವಾರಿಯಾಗಿ ಆಯ್ಕೆಯಾಗಿದ್ದ ಅವರು, 1993ರ ಜೂನ್ 6ರಂದು ರಾಜ್ಯ ಶಿಕ್ಷಣ ಸಚಿವೆಯಾಗಿ ಇಡೀ ಕರ್ನಾಕಟದ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದವರು. ಶಿಕ್ಷಣ ಸಚಿವರಾಗಿದ್ದಾಗ ಇವರು 1 ರಿಂದ 4 ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಿದವರು.
ಪ್ರಾಥಮಿಕ ಶಾಲಾ ಹಂತದಲ್ಲಿ ಮಹಿಳೆಯರಿಗೆ ಶೇಕಡಾ 50ರಷ್ಟು ಮೀಸಲಾತಿ ಸೇರಿದಂತೆ ಕೈಗೊಂಡ ಹಲವಾರು ಯೋಜನೆಗಳು ಇಂದಿಗೂ ಮಾದರಿ. ರಾಜ್ಯಮಟ್ಟದ, ವಲಯ ಮಟ್ಟದ ಹತ್ತಾರು ಭೋದಕ ಮಂಡಳಿ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ದಾವಣಗೆರೆವವನಿತಾ ಸಮಾಜದ ರೂವಾರಿ
ದಾವಣಗೆರೆಯ ಹೆಮ್ಮೆಯ ವನಿತಾ ಸಮಾಜದ ರೂವಾರಿಗಳೂ ಆದ ನಾಗಮ್ಮ ಕೇಶವಮೂರ್ತಿ ಅವರು ವಿನಿತಾ ವೃಂದಕ್ಕೆ ಅತ್ಯಂತ ಪ್ರೀತಿ ಗೌರವಕ್ಕೆ ಪಾತ್ರರಾದ ಧೀಮಂತ ಮಹಿಳೆ. ಸಂಘಟನಾ ಚತುರೆ, ಉತ್ಸಾಹದ ಚಿಲುಮೆ. ಗ್ರಾಮೀಣ ಮಹಿಳಾ ಸಂಘದ ಕರ್ನಾಟಕ ಶಾಖೆ, ಚಿತ್ರದುರ್ಗ ಜಿಲ್ಲಾ ಶಿಶು ಕಲ್ಯಾಣ ಮಂಡಳಿಯಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ.
ಮಹಿಳಾ ಸಂಘ, ಗಾಯನ ಸಭಾ, ವಾಸವಿ ಸಂಘ, ಸ್ನೇಹಾಲಯ, ಪ್ರೇಮಾಲಯ, ಹ್ಯೂಮರ್ ಕ್ಲಬ್, ಪ್ರಜ್ಞಾ ಆಶ್ರಮ ಎಂಬ ವೃದ್ಧಾಶ್ರಮಗಳ ಅಧ್ಯಕ್ಷತೆಯಲ್ಲಿ ನಡೆಸುತ್ತಿದ್ದವರು.
ದಾವಣಗೆರೆ ವನಿತಾ ಸಮಾಜ, ಬಾಲಭವನ ಸಮಿತಿ, ಕರ್ನಾಟಕ ಆರ್ಯವೈಶ್ಯ ಮಹಿಳಾ ಮಹಾಸಭಾ, ಅಖಿ ಸೇವಾ ಸಂಸ್ಥೆಗಳ ಒಕ್ಕೂಟ, ಪ್ರೇರಣೆ, ವನಿತಾ ಸಾಹಿತ್ಯ ಕಲಾವೇದಿಕೆ, ಈಶ್ವರಮ್ಮ ಟ್ರಸ್ಟ್, ಬೆಂಗಳೂರಿನ ಸಂಗೀತ ಅಕಾಡೆಮಿ, ಚಿತ್ರಕಲಾ ಅಕಾಡೆಮಿ, ಕಸ್ತೂರಬಾ ಟ್ರಸ್ಟ್ ರಾಜ್ಯ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಸೇರಿದಂತೆ ಹಲವು ಸಂಘಸಂಸ್ಥೆಗಳಲ್ಲಿ ನಾಗಮ್ಮ ಕೇಶವಮೂರ್ತಿ ಅವರ ಸೇವೆ ಅನನ್ಯ.
ನಾಗಮ್ಮ ಕೇಶವಮೂರ್ತಿ ಅವರಿಗೆ ಸಂದ ಗೌರವ
ನಾಗಮ್ಮ ಕೇಶವಮೂರ್ತಿ ಅವರ ರಾಜಕೀಯ ಮತ್ತು ಸಮಾಜ ಸೇವೆ ಗುರುತಿಸಿ ಭಾರತ ಸರ್ಕಾರ ಮಹಿಳಾ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಇದರೊಂದಿಗೆ ಯಶೋಧಮ್ಮ ದಾಸಪ್ಪ ಪ್ರಶಸ್ತಿ ಹಾಗೂ ಅನೇಕ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾದ ಧೀಮಂತ ಮಹಿಳೆ. ಅರಸಿ ಬಂದ ಪ್ರಶಸ್ತಿಗಳು ಹಾಗೂ ಸನ್ಮಾನಗಳು ಲೆಕ್ಕಕ್ಕೇ ಇಲ್ಲ.
ದಾವಣಗೆರೆ ಜಿಲ್ಲೆಯ ನೂರಾರು ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ಶಾಲೆಗಳನ್ನು ಆರಂಭಿಸಿದವರು. ಇಂಟರ್ ನ್ಯಾಷನಲ್ ಫ್ರೆಂಡ್ ಶಿಪ್ ಸೊಸೈಟಿ ಇಂಡಿಯಾದಿಂದ ಮಹಿಳಾ ರತ್ನ ಪ್ರಶಸ್ತಿ, ಆಂಧ್ರ ಆರ್ಯ ವೈಶ್ಯ ಮಹಿಳಾ ಸಭಾದವರ ಸೇವಾವೀರ ಪ್ರಶಸ್ತಿ, ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದಿಂದ ಶ್ರೀಮತಿ ಯಶೋದಮ್ಮ ದಾಸಪ್ಪ ಪ್ರಶಸ್ತಿ, ದಾವಣಗೆರೆ ವನಿತಾ ಸಮಾಜದ ಸೇವಾ ಪ್ರಶಸ್ತಿ, ದಾವಣಗೆರೆ ಜಿಲ್ಲಾ ಶಿಶು ಕಲ್ಯಾಣ ಮಂಡಳಿಯಿಂದ ಶಿಶುಸೇವಾ ಪ್ರಶಸ್ತಿ, ಇನ್ಸ್ ಟ್ಯೂಟ್ ಆಫ್ ಎಕಾನಮಿಕ್ ಸ್ಟಡೀಸ್ ಸಂಸ್ಥೆಯಿಂದ ಮಹಿಳಾ ಗೌರವ ಪುರಸ್ಕಾರ, ಯಂಗ್ ಇಂಡಿಯಾ ಅವಾರ್ಡ್ ಫಾರ್ ಎಕ್ಸಲೆನ್ಸ್, ಬಿಜಾಪುರ ವಿವಿಯ ಡಾಕ್ಟರೇಟ್ ಪ್ರಶಸ್ತಿಯು ನಾಗಮ್ಮ ಕೇಶವಮೂರ್ತಿ ಅವರಿಗೆ ಸಂದಿತ್ತು.