SUDDIKSHANA KANNADA NEWS/ DAVANAGERE/ DATE:06-01-2025
ದಾವಣಗೆರೆ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ನವದೆಹಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಬೇಕು. ಬಿಜೆಪಿ ನಾಯಕರು ಮಹಿಳೆಯರ ಬಗ್ಗೆ ಹೊಂದಿರುವ ಗೌರವದ ಪ್ರತೀಕವಾಗಿದೆ. ಬಿಜೆಪಿ ಮಹಿಳಾ ವಿರೋಧಿ ಪಕ್ಷ ಎಂಬುದು ಪದೇ ಪದೇ ಸಾಬೀತಾಗುತ್ತಿದೆ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು ಆರೋಪಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನವದೆಹಲಿಯ ಕಲ್ಯಾಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಅವರು ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಾ ಗೆದ್ದ ಬಳಿಕ ಪ್ರಿಯಾಂಕಾ ಗಾಂಧಿ ಕೆನ್ನೆಯಂತೆ ನುಣುಪಾಗಿ ರಸ್ತೆಯನ್ನು ನಿರ್ಮಿಸುತ್ತೇನೆ ಎಂಬ ಪ್ರಚೋದನಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ. ಇದೇ ಮಾತನ್ನು ಅಭ್ಯರ್ಥಿಯ ಕುಟುಂಬದವರ ಬಗ್ಗೆ ಹೇಳಿದರೆ ಹೇಗಾಗಬೇಡ. ಮಾತನಾಡುವಾಗ ಮಹಿಳೆಯರ ಬಗ್ಗೆ ಎಚ್ಚರದಿಂದಿರಬೇಕು
ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದು ಇನ್ನೂ ಜನರ ಮನಸಿನಲ್ಲಿ ಹಾಗೆಯೇ ಉಳಿದಿದೆ. ಬಿಜೆಪಿ ಶಾಸಕ ಮುನಿರತ್ನ ಮಹಿಳೆಯರನ್ನು ಹನಿಟ್ರ್ಯಾಪ್ ಗೆ ಬಳಸಿಕೊಂಡಿದ್ದು,
ಏಡ್ಸ್ ಸೋಂಕಿತ ಮಹಿಳೆಯರು ಹಾಗೂ ಯುವತಿಯರ ಉಪಯೋಗಿಸಿಕೊಂಡು ಅವರದ್ದೇ ಪಕ್ಷದ ನಾಯಕರನ್ನು ಮಟ್ಟಹಾಕಲು ಮಾಡಿದ್ದ ಪಿತೂರಿ ಜಗಜ್ಜಾಹೀರಾಗಿದೆ. ಬಿಜೆಪಿ ಮಹಿಳಾ ವಿರೋಧಿ ಪಕ್ಷ ಎನ್ನುವುದಕ್ಕೆ ಇದಕ್ಕಿಂತಾ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯರ ಬಗ್ಗೆ ಮಾತನಾಡುವಾಗ ಇನ್ನು ಮುಂದಾದರೂ ಎಚ್ಚರ ವಹಿಸಬೇಕು. ಪ್ರಿಯಾಂಕಾ ಗಾಂಧಿ ಅವರ ಬಗ್ಗೆ ಮಾತನಾಡಿರುವ ಬಿಜೆಪಿ ಅಭ್ಯರ್ಥಿ, ಬಿಜೆಪಿಯ ವರಿಷ್ಠರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಜನರೇ ಮುಂಬರುವ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ಮಹಿಳೆಯರು ಮತದಾನದ ವೇಳೆ ಉತ್ತರ ಕೊಡುವುದು ಗ್ಯಾರಂಟಿ. ಬಿಜೆಪಿ ನಾಯಕರು ಈ ವಿಚಾರದಲ್ಲಿ ಮೌನ ವಹಿಸಿರುವುದೇಕೆ ಎಂಬುದೇ ಅರ್ಥವಾಗುತ್ತಿಲ್ಲ. ತಮ್ಮ ಪಕ್ಷದ ನಾಯಕರು, ಅಭ್ಯರ್ಥಿಗಳು ಹಾಗೂ ಶಾಸಕರಿಗೆ ನಾಲಗೆ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಲು ಬಿಜೆಪಿ ಕೇಂದ್ರದ ವರಿಷ್ಠರು ಸೂಚನೆ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸೈಯದ್ ಖಾಲಿದ್ ಅಹ್ಮದ್ ಎಚ್ಚರಿಕೆ ನೀಡಿದ್ದಾರೆ.