SUDDIKSHANA KANNADA NEWS/ DAVANAGERE/ DATE:07-01-2025
ದಾವಣಗೆರೆ: ಬೆಂಗಳೂರು ನಗರವನ್ನು ಮೀರಿಸುವಂತಹ ಕಾಮಗಾರಿಗಳು ದಾವಣಗೆರೆ ಜಿಲ್ಲೆಯಲ್ಲಾಗಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಮಹಾನಗರ ಪಾಲಿಕೆ ಆವರಣದಲ್ಲಿ ವಿವಿಧ ವಾರ್ಡ್ ಗಳಲ್ಲಿ ಕೈಗೊಳ್ಳಲಾದ ರೂ.8.05 ಕೋಟಿ ಮೊತ್ತದ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ 500 ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳ ವಿತರಣೆ, ಘನತ್ಯಾಜ್ಯ ನಿರ್ವಹಣೆಗಾಗಿ 10 ಟ್ರ್ಯಾಕ್ಟರ್ ಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಾಗಿನಿಂದ ನುಡಿದಂತೆ ನಡೆದಿದ್ದೇವೆ. ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಬಡವರ ಅಭಿವೃದ್ಧಿಗಾಗಿ ಕಾಂಗ್ರೆಸ್ ಸದಾ ಮುಂದಿದ್ದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿನ ನಮ್ಮ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳು ಜನತಗೆ ಉಪಯುಕ್ತವಾಗಿವೆ ಎಂದರು.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಹೆಚ್ಚು ಹೆಚ್ಚು ಅನುದಾನ ತರುವಂತಹ ಕಾರ್ಯಗಳನ್ನು ಪಾಲಿಕೆ ಸದಸ್ಯರು ಮಾಡಬೇಕು. ಬೆಂಗಳೂರ ನಗರದ ಮಾದರಿಯಲ್ಲಿ ದಾವಣಗೆರೆ ಪಾಲಿಕೆ ವ್ಯಾಪ್ತಿ ಕೆಲಸ ಕಾರ್ಯಗಳಾಗಬೇಕು. ನಮ್ಮ ಅಧಿಕಾರದಲ್ಲಿಯೇ ಪಾಲಿಕೆಯ ವ್ಯಾಪ್ತಿ ಉತ್ತಮ ರಸ್ತೆಗಳನ್ನು ನಿರ್ಮಿಸಿದ್ದೇವೆ. ಅವುಗಳನ್ನು ನಿರ್ವಹಣೆ ಮಾಡಿಕೊಂಡು ಹೊದರೆ ರಸ್ತೆ ಸಮಸ್ಯೆಗಳು ತಪ್ಪುತ್ತವೆ. ಸಿಮೆಂಟ್ ರಸ್ತೆಗಳ ಪಕ್ಕದ ಸರ್ವಿಸ್, ಒಳ ರಸ್ತೆಗಳ ನಿರ್ಮಾಣ, ಯೂಜಿಡಿ ಲೈನ್ ಹಾಗೂ ಮೂಲ ಸೌಕರ್ಯವನ್ನು ಬಡ ಜನತೆಗೆ ನೀಡುವಲ್ಲಿ ಪಾಲಿಕೆ ಸದಸ್ಯರು ಮುಂದಾಗಬೇಕು ಎಂದರು.
ಪಾಲಿಕೆಯಿಂದ 1500 ಹೊಲಿಗೆ ಯಂತ್ರಗಳನ್ನು ನೀಡಲಾಗಿದೆ. ಮುಂದೆ ನೂತನ ತಂತ್ರಜ್ಞಾನವನ್ನು ಅಳವಡಿಸಿ ಮಹಿಳೆಯರಿಗೆ ಎಂಬ್ರಾಡರಿ ಮಿಷನ್, ವಾಷಿಂಗ್ ಮಿಷನ್, ಗುಡಿ ಕೈಗಾರಿಕೆಯಂತಹ ಸೇವೆಗಳಾಗಬೇಕು ಎಂದರು.
ಕುಂದುವಾಡ ಕೆರೆ, ಟಿವಿ ಸ್ಟೇಷನ್ ಕೆರೆಗಳ ನಿರ್ಮಾಣದಿಂದ ಕುಡಿಯುವ ನೀರಿನ ಬವಣೆ ನೀಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 250 ಪೌರ ಕಾರ್ಮಿಕರ ಸೇವೆ ಖಾಯಂ ಮಾಡಲಾಗಿದೆ. ಉಳಿದ 24 ಪೌರ ಕಾರ್ಮಿಕರ ಸೇವೆ ಖಾಯಂ ಮಾಡುವ ಪ್ರಸ್ತಾವನೆ ಬಾಕಿ ಇದೆ. ಪಾಲಿಕೆ ವ್ಯಾಪ್ತಿಯಲ್ಲಿನ ಇನ್ನಷ್ಟು ಅಭಿವೃದ್ಧಿಗೆ ಮಹಾತ್ಮ ಗಾಂಧಿ ಯೋಜನೆಯಡಿ 25 ಕೋಟಿ ಅನುದಾನದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಆವರಗೊಳ್ಳದ ತ್ಯಾಜ್ಯ ನಿರ್ವಹಣಾ ಘಟಕದಿಂದ ತಕ್ಷಣ ಗೊಬ್ಬರ ಸಿಗುವಂತಾಗಬೇಕು. 40 ಸಾವಿರ ರೆವಿನ್ಯೂ ಮನೆಗಳನ್ನು ಅವರ ಸ್ವಂತ ಆಸ್ತಿಗಳನ್ನಾಗಿ ಮಾಡಿದ್ದರಿಂದ ಜನತೆಗೆ ಉಪಯುಕ್ತವಾಗಿದೆ ಎಂದು ತಿಳಿಸಿದ ಸಚಿವರು ಜನತೆಗೆ ಉತ್ತಮ ಆಹಾರ, ಆರೋಗ್ಯ, ಶಿಕ್ಷಣ ಮೂಲಭೂತ ಸೌಲಭ್ಯಗಳನ್ನು ನೀಡಲು ಕಾಂಗ್ರೆಸ್ ಬದ್ದವಾಗಿದೆ ಎಂದರು.