SUDDIKSHANA KANNADA NEWS/ DAVANAGERE/ DATE:20-08-2024
ದಾವಣಗೆರೆ: ರೈತರು ಒಂದೇ ರೀತಿಯ ಬೆಳೆ ಬೆಳೆದು, ಬೆಂಬಲ ಬೆಲೆ ಸಿಗದೆ ಹತಾಶರಾಗುವುದಕ್ಕಿಂತ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟ ಮಾಡಿ ಆದಾಯ ಗಳಿಸಬಹುದಾಗಿದೆ ಎಂದು ಯುಪಿಎಸ್ಇಯಲ್ಲಿ ಟಾಪರ್ ಸೌಭಾಗ್ಯ ಬಿಳಗಿಮಠ ರೈತರಿಗೆ ಕಿವಿಮಾತು ಹೇಳಿದರು.
ನಗರಕ್ಕೆ ಸಮೀಪದ ಕಾರಿಗನೂರು- ಕುಕ್ಕವಾಡ ಕ್ರಾಸ್ ನಲ್ಲಿ ಆಂಜನೇಯ ಪುರುಷ ರೈತ ಸ್ವ ಸಹಾಯ ಸಂಘದ ವಾರ್ಷಿಕೋತ್ಸವದಲ್ಲಿ ರೈತರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ರೈತರು ತಮ್ಮ ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಲು ಬಯಸುತ್ತಾರೆ, ಆದರೆ ಕೃಷಿ ಪದವಿ ಕೃಷಿ ಡಿಪ್ಲೋಮೋ ಕಲಿಸುವುದರಿಂದ ಈ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ, ತಮ್ಮ ಜಮೀನಿನಲ್ಲಿ ಆಧುನಿಕ ಮತ್ತು ಬಹುಬೆಳೆ
ಪದ್ಧತಿ ಅಳವಡಿಸಿಕೊಂಡು ಯಾವ ಸರ್ಕಾರಿ ನೌಕರರಿಗಿಂತ ಕಡಿಮೆ ಇಲ್ಲದಂತೆ ಜೀವನ ಸಾಗಿಸಬಹುದು, ಕೃಷಿ ಕ್ಷೇತ್ರ ಇಡೀ ದೇಶಕ್ಕೆ ನಮಗೆಲ್ಲ ಅನ್ನ ನೀಡುವ ಪುಣ್ಯದ ಕ್ಷೇತ್ರವೆಂದು ಹೇಳಿದರು.
ಟೊಮೊಟೊ ಬೆಳೆಗೆ ಬೆಲೆ ಸಿಗಲಿಲ್ಲವೆಂದು ರಸ್ತೇ ಗೆ ಚೆಲ್ಲುವ ರೈತರು ಅದನ್ನೇ ಟೊಮೊಟೊ ಸಾಸ್ ಮೂಲಕ ಕೇವಲ ಐವತ್ತು, 100 ಗ್ರಾಂ ಟೊಮೇಟೊ ಸಾಸ್ ಮಾಡಿ ಮಾರುಕಟ್ಟೆಯಲ್ಲಿ 200ರಿಂದ 300 ರೂಪಾಯಿ ಗಳಿಸಬಹುದಾಗಿದ್ದು ಇದೇ ತರಹ ಎಲ್ಲಾ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ರೈತ ಆದಾಯ ಗಳಿಸಬಹುದು ಎಂದು ಸಲಹೆ ನೀಡಿದರು.
ರೈತ, ಸ್ವಸಹಾಯ ಸಂಘಗಳ ಮೂಲಕ ಕೃಷಿ ಇಲಾಖೆ, ಸರ್ಕಾರದಿಂದ ಹಲವಾರು ಅನುದಾನ ಕೃಷಿ ಉಪಕರಣಗಳನ್ನು ಪಡೆದುಕೊಳ್ಳಬಹುದು. ತಮ್ಮ ಯುಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆ ಟಾಪರ್ ಆಗಿರುವ ಬಗ್ಗೆ ಅನುಭವವನ್ನು ಹೇಳಿಕೊಂಡ ಸೌಭಾಗ್ಯ ಸತತ ಪರಿಶ್ರಮ, ನಿತ್ಯ ಪತ್ರಿಕೆಗಳ ಮನನ, ದೇಶದ ರಾಜ್ಯದಲ್ಲಿ ಆಗುಹೋಗುಗಳ ಬಗ್ಗೆ ಅವಲೋಕನ, ಯಾವುದೇ ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿದಲ್ಲಿ ರೈತರ ಮಕ್ಕಳು ನನ್ನ ಹಾಗೆ ಐಎಎಸ್ ಐಪಿಎಸ್ ಆಗಬಹುದು ತಿಳಿಸಿದರು.
ಕೃಷಿ ಸಂಶೋಧನಾ ಕೇಂದ್ರ ಕತ್ತಲಗೆರೆಯ ಕ್ಷೇತ್ರಾಧಿಕಾರಿ ಹಿರಿಯ ವಿಜ್ಞಾನಿ ಡಾಕ್ಟರ್ ಸರ್ವಜ್ಞ ಸಾಲಿಮಠ ರೈತರು ಹೆಚ್ಚು ಹೆಚ್ಚು ಸಾವಯವ ಕೃಷಿ ತಜ್ಞೆಗಳನ್ನು ತಮ್ಮ ಭೂಮಿಗೆ ಸೇರಿಸುವುದರಿಂದ ಮಣ್ಣಿನಲ್ಲಿ ಇಂಗಾಲವನ್ನು ಉತ್ಪಾದಿಸಿ ರಸಗೊಬ್ಬರ ಬಳಕೆ ಕಡಿಮೆ ಮಾಡಿಕೊಳ್ಳಬಹುದು. ಬೆಳೆ ಆಧರಿಸಿ ಮಣ್ಣಿನ ಪರೀಕ್ಷೆ ಮಾಡಿಸಿ ಗೊಬ್ಬರ ಬಳಕೆ ಮಾಡಿ ಮುಂದಿನ ಪೀಳಿಗೆಗೆ ಈ ಮಣ್ಣನ್ನ ಕೊಡುಗೆಯಾಗಿ ನೀಡಿ ಕರೆ ನೀಡಿದರು.
ಈ ಸಂದರ್ಭದಲ್ಲಿ ದಾವಣಗೆರೆ ಕೃಷಿ ಅಧಿಕಾರಿ ಶ್ರೀಧರ್ ಮೂರ್ತಿ ಮಾತನಾಡಿ ರೈತರು ತಮ್ಮ ಕೃಷಿ ಇಲಾಖೆಗೆ ಹಾಗಾಗಿ ಭೇಟಿ ನೀಡಿ ಹೊಸ ಹೊಸ ಬೆಳೆಗಳ ಪರಿಚಯ ತಳಿಗಳು, ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಯಾಂತ್ರಿಕರಣ, ಪದ್ಧತಿಗಳಿಂದ ವೆಚ್ಚವನ್ನು ಕಡಿಮೆ ಮಾಡಿ ಉಳಿಸಿಕೊಳ್ಳಬಹುದು, ತಾವು ಸದಾ ರೈತರ ಸಹಾಯಕ್ಕೆ ಸಿದ್ಧವೆಂದು ತಿಳಿಸಿದರು.
ಆಂಜನೇಯ ಪುರುಷ ಸ್ವಸಹಾಯ ಸಂಘದ ಪ್ರಧಾನ ಕಾರ್ಯದರ್ಶಿ ಕೇಟಿ ಚಂದ್ರಶೇಖರ್ ಸಂಘದ ಆಯವ್ಯಯ ಮಂಡಿಸಿದರು. ಸೌಭಾಗ್ಯ ಬಿಳಿಗಿ ಮಠ್ ಅವರ ತಂದೆ ಶರಣಯ್ಯ ಸ್ವಾಮಿ, ನಿವೃತ್ತ ಶಿಕ್ಷಕ ಪರಮೇಶ್ವರಯ್ಯ, ಆತ್ಮ ಕೃಷಿ ಯೋಜನೆ ಸಂಯೋಜಕ ಡಾ. ಲೋಕೇಶ್, ಕೃಷಿ ಸಂಶೋಧನಾ ಕೇಂದ್ರದ ವಿಸ್ತರಣಾಧಿಕಾರಿ ಬಿರಾದರ್ ಮಾತನಾಡಿದರು.
ದೇಶ, ಕರ್ನಾಟಕ ರಾಜ್ಯ, ದಾವಣಗೆರೆ ಜಿಲ್ಲೆಗೆ ಹೆಮ್ಮೆ ತಂದ ಯುಪಿಎಸ್ಸಿ ಟಾಪರ್ ಕುಮಾರಿ ಸೌಭಾಗ್ಯ ಬೀಳಗಿಮಠ ಮತ್ತು ಅವರ ಪೋಷಕರಾದ ಶರಣಯ್ಯ ಸ್ವಾಮಿ ಬಿಳಗಿಮಠ, ಶರಣಮ್ಮ ಅವರನ್ನು ಕಾರಿಗನೂರು ಕುಕ್ವಾಡ ಪ್ರಗತಿಪರ ರೈತರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಆರಂಭದಲ್ಲಿ ಶಾಗಲೇ ಶರಣಪ್ಪ ಸ್ವಾಗತ, ರೈತ ಗೀತೆ ಹಾಡಿದರು. ರುದ್ರೇಶಯ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುತ್ತಮುತ್ತಲ ಹಲವಾರು ಹಳ್ಳಿಗಳಿಂದ ಪ್ರಗತಿಪರ ರೈತರು ಭಾಗವಹಿಸಿದ್ದರು.