SUDDIKSHANA KANNADA NEWS/ DAVANAGERE/ DATE:22-09-2024
ದಾವಣಗೆರೆ: ಬೇತೂರು ರಸ್ತೆಯ ವೆಂಕಟೇಶ್ವರ ನಗರದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಪ್ರಚೋದನಕಾರಿ ಭಾಷಣ ಮಾಡಿದ್ದೇ ಕಾರಣ ಎಂಬ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಸಹ ಸಂಚಾಲಕ ಸತೀಶ್ ಪೂಜಾರಿಯನ್ನು ಬಂಧಿಸಲಾಗಿದೆ.
ಬಸವನಗರ ಪೊಲೀಸ್ ಠಾಣೆಯ ಪೊಲೀಸರು ಶನಿವಾರ ತಡರಾತ್ರಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಹಿಂದೂ ಜಾಗರಣ ವೇದಿಕೆಯ ಸತೀಶ್ ಪೂಜಾರಿಯವರನ್ನು ವಶಕ್ಕೆ ಪಡೆದು ಆ ಬಳಿಕ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನ್ಯಾಯಾಧೀಶರು ಸತೀಶ್ ಪೂಜಾರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಗಲಾಟೆ ವಿರೋಧಿಸಿ ನಗರದಲ್ಲಿ ಪ್ರತಿಭಟನೆ ನಡೆಸುವ ವೇಳೆ ಸತೀಶ್ ಪೂಜಾರಿ ಅವರು ಒಂದು ಕೋಮಿನ ವಿರುದ್ಧ ಮಾತನಾಡಿದ್ದರು. ಇದು ಪ್ರಚೋದನಕಾರಿ ಭಾಷಣ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಎಡಿಜಿಪಿ ಹಿತೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರಿಗೂ ದೂರು ನೀಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಲಾಗಿತ್ತು.
ನಗರದಲ್ಲಿ ಗಣೇಶ ವಿಸರ್ಜನೆ ವಿಜೃಂಭಣೆಯಿಂದ ನೆರವೇರುತ್ತಿದೆ. ಸಣ್ಣಪುಟ್ಟ ಘಟನೆ ಹೊರತುಪಡಿಸಿದರೆ ದೊಡ್ಡ ಗಲಾಟೆ ಆಗಿರಲಿಲ್ಲ. ಆದ್ರೆ, ಇಂದು ಅರಳಿಮರ ವೃತ್ತದ ಬಳಿ ಸಂಭವಿಸಿದ ಗಲಾಟೆ ಲಾಠಿಚಾರ್ಜ್ ಮಾಡುವವರೆಗೆ ಬಂದು ನಿಂತಿದೆ. ಕೆಲ ಕಿಡಿಗೇಡಿಗಳು ಎಸೆದ ಕಲ್ಲು ಶಾಂತಯುತವಾಗಿದ್ದ ಪರಿಸ್ಥಿತಿ ಪ್ರಕ್ಷ್ಯುಬ್ಧಗೊಳ್ಳುವಂತೆ ಮಾಡಿತ್ತು, ಈ ವೇಳೆ ಮಾತನಾಡಿದ್ದ ಎಸ್ಪಿ ಉಮಾ ಪ್ರಶಾಂತ್ ಅವರು, ಕೋಮ ಪ್ರಚೋದಕ ಭಾಷಣ ಮಾಡಿದ್ದೇ ಘಟನೆಗೆ ಕಾರಣ ಎಂದು ಹೇಳಿದ್ದರು.