SUDDIKSHANA KANNADA NEWS/ DAVANAGERE/ DATE:14-10-2024
ದಾವಣಗೆರೆ: ಲೋಕ ಕಲ್ಯಾಣವಾಗುವ ಮೊದಲು ಆತ್ಮಾವಲೋಕ ಕಲ್ಯಾಣವನ್ನು ಮಾಡಿಕೊಳಬೇಕಾಗಿದೆ ಎಂದು ಹೊಸದುರ್ಗ ತಾಲೂಕಿನ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಕಾಳಿಕಾಂಬ ಬೀದಿಯ ಶ್ರೀ ಕಾಳಿಕಾಂಬದೇವಿಯ ದೇಗುಲದಲ್ಲಿ ಶ್ರೀ ಕಾಳಿಕಾಂಬ ವಿಶ್ವಕರ್ಮ ಸೇವಾ ಸಮಿತಿ , ವಿವಿಧ ಸಮಾಜಗಳ ಸಮಿತಿಯೊಂದಿಗೆ ಶ್ರೀ ಕಾಳಿಕಾಂಬ ದೇವಿಯ ದಸರಾ ಮಹೋತ್ಸವ, ಸನಾತನ ಧಮೋತ್ಸವ , ಶ್ರೀ ಕಾಳಿಕಾಂಬ ದೇವಿಯ ಅಂಬಾರಿ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಮಹಾಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಲೋಕ ಕಲ್ಯಾಣಾರ್ಥವಾಗಿ ಎಂದು ಹೇಳುತ್ತೇವೆ. ನಮ್ಮ ಆತ್ಮಕಲ್ಯಾಣವಾಗಿದೆಯೇ? ಪ್ರತಿಯೊಬ್ಬರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಂಡು ವ್ಯಕ್ತಿ ಕಲ್ಯಾಣದ ಜೊತೆಗೆ ಲೋಕಕಲ್ಯಾಣವನ್ನು ಬಯಸುವುದು ಹೇಗೆ ಎಂದು ಚಿಂತನೆ ಮಾಡಬೇಕು ಅದಕ್ಕನುಗುಣವಾಗಿ ಕಾರ್ಯ ಯೋಜನೆಗಳನ್ನು ರೂಪಿಸಿಕೂಂಡಾಗ ಲೋಕ ಕಲ್ಯಾಣಾರ್ಥವಾಗಿ ಎಂಬ ಪದಕ್ಕೆ ಅರ್ಥ ಬರಬೇಕಾದರೆ ವೈಜ್ಞಾನಿಕ , ಆರ್ಥಿಕ , ಸಾಮಾಜಿಕ ಹಾಗೂ ಆಧುನಿಕ ಚಿಂತನೆ ಬರಬೇಕಾಗಿದೆ ಎಂದರು.
ಅದರೆ ಇವತ್ತು ಸತ್ಯ, ಪ್ರಾಮಾಣಿಕತೆ, ನೀತಿ ಇವೆಲ್ಲವೂ ಗಾಳಿಗೆ ತೂರುವ ವಾತಾವರಣ ನಿರ್ಮಾಣವಾಗುತ್ತಿರುವುದು ವಿಷಾಧನೀಯ ಎಂದು ಬೇಸರ ವ್ಯಕ್ತಪಡಿಸಿದ ಶ್ರೀಗಳು, ಜವಾಬ್ದಾರಿ ಸ್ಥಾನದಲ್ಲಿರುವವರು ಪ್ರತಿಯೊಬ್ಬರೂ
ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಎಂದಿಗಿಂತ ಇವತ್ತು ಅಗತ್ಯವಿದೆ ಹೇಳಿದರು.
ಅಸಮಾನತೆ ಎನ್ನುವುದು ಎಲ್ಲಾ ಕಾಲದಲ್ಲಿಯೂ ಇತ್ತು. ಆದರೆ, ಐದು ಬೆರಳು ಒಂದಕ್ಕೊಂದು ಸಮವಿಲ್ಲದಿದ್ದರೂ, ಹೇಗೆ ಒಂದಾಗಿ ಕೆಲಸ ಮಾಡುತ್ತೇವೆಯೋ ಹಾಗೆ ನಮ್ಮ ನಡುವೆ ಏನೇ ಅಸಮಾನತೆಗಳಿದ್ದರೂ ಸಮಾಜಕಟ್ಟುವ ಕಾರ್ಯದಲ್ಲಿ ಒಂದಾಗಬೇಕು ಸಮಾಜವನ್ನು ತಿದ್ದುವುದಕ್ಕಿಂತ, ನಮ್ಮನ್ನು ನಾವು ಮೊದಲು ತಿದ್ದಿಕೊಳ್ಳಬೇಕು. ವ್ಯಕ್ತಿ ಸರಿಯಾದರೆ ದೇಶ, ಜಗತ್ತು ಸರಿಹೋಗುವುದು ಎಂದು ಹೇಳಿದರು.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಅರೇಮಾದೇನಹಳ್ಳಿಯ ವಿಶ್ವಕರ್ಮ ಪೀಠದ ಅನಂತ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ ಮಾತನಾಡಿ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸನಾತನ ಸಂಸ್ಕೃತಿಯ ಸ್ವಾಭಿಮಾನ ಬೆಳೆಸುವಂತೆ ಮಾಡಬೇಕು, ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ, ಪರಂಪರೆ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು. ಸಂಸ್ಕಾರದ ಆಹಾರ ನೀಡಿ ಬೆಳೆಯುವಂತೆ ಮಾಡಬೇಕು, ಮನೆಯೇ ಮೊದಲ ಪಾಠಶಾಲೆ ಜನನಿ ಮೊದಲ ಗುರು ಆಗಬೇಕು. ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಸಾಮರಸ್ಯ ,ಸ್ನೇಹ ,ಹೊಂದಾಣಿಕೆ, ಪ್ರಾಮಾಣಿಕತೆಯನ್ನು ಚಿಕ್ಕಂದಿನಿಂದಲೇ ಕಲಿಸಬೇಕು. ಮೂರು ವರ್ಷದ ಬುದ್ದಿ ನೂರು ವರ್ಷವೆಂಬಂತೆ ಬಾಲ್ಯದಲ್ಲಿ ಪಡೆದ ಸಂಸ್ಕಾರ ಜೀವನ ಪರ್ಯಂತ ಉಳಿಯುತ್ತದೆ ಈ ಹಿಂದೆ ಮನೆಯ ಮಕ್ಕಳಿಗೆ ರಾಮ, ಕೃಷ್ಣ, ಶಿವ, ಷಣ್ಮುಖ, ಗಣೇಶ, ವಿಷ್ಣು, ಗಂಗೆ, ಪಾರ್ವತಿ ಎಂದು ಕರೆಯುತ್ತಿದ್ದರು. ಈಗಿನ ಎರಡು ಅಕ್ಷರಗಳ ಆಧುನಿಕ ಹೆಸರುಗಳಿಂದ ಮುಂದಿನ ಪೀಳಿಗೆಗೆ ಒಂದು ಅಕ್ಷರದ ಹೆಸರಗಳನ್ನು ಕರೆಯಬೇಕಾದ ಪರಿಸ್ಥಿತಿ ಬರುತ್ತದೆ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಶ್ರೀ ಕಾಳಿಕಾಂಬದೇವಿಯ ದೇಗುಲದ ಅಧ್ಯಕ್ಷ ನಾಗರಾಜ್ಆಚಾರ್, ಲಿಂಗಾಯಿತ ಮಹಾಸಭಾದ ತಾಲೂಕು ಅಧ್ಯಕ್ಷ ಯರಗನಾಳು ಮಹೇಶ್ವರಪ್ಪ, ಕಸಾಪ
ಹೊನ್ನಾಳಿ ತಾಲೂಕು ಘಟಕದ ಅಧ್ಯಕ್ಷ ಮುರಿಗೇಂದ್ರಪ್ಪಗೌಡ, ಶ್ರೀ ಕಾಳಿಕಾಂಬದೇವಿಯ ದೇಗುಲದ ಕಾರ್ಯದರ್ಶಿ ದಿವಾಕರ್ಆಚಾರ್ ಸೇರಿದಂತೆ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ಮುಖಂಡರಾದ ಜೋಗದ ಹಂಪಣ್ಣ,
ಜೋಗದ ಕಾಂತರಾಜ್, ಗಿರಿಯಕ್ಕಳರ ಹಾಲೇಶಪ್ಪ, ಜ್ಯೋತಿಮೌನೇಶ್ಚಾರ್, ಗದ್ದಿಗೆಶಾಚಾರ್, ಕಾಶಿನಾಥ ಆಚಾರ್, ಸುರೇಶಾಚಾರ್, ಚಂದ್ರಚಾರ್ ಸೇರಿದಂತೆ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ , ಪಿಯುಸಿ ಹಾಗೂ ಎಂಬಿಬಿಎಸ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.