SUDDIKSHANA KANNADA NEWS/ DAVANAGERE/ DATE:09-01-2025
ದಾವಣಗೆರೆ: ನಗರದ ಡಿ. ಎ. ಕೆ. ಬಡಾವಣೆಯ ನೀರಿನ ಟ್ಯಾಂಕ್ ಬಳಿಯ ದಾವಣಗೆರೆ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷರಾಗಿ ಎಸ್. ಟಿ. ವೀರೇಶ್ ಹಾಗೂ ಉಪಾಧ್ಯಕ್ಷರಾಗಿ ರುದ್ರೇಗೌಡರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಕ್ಕೂಟದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಲ್ಲರೂ ಚುನಾವಣೆ ಬೇಡ ಎಂಬ ನಿರ್ಧಾರಕ್ಕೆ ಬಂದರು. ಅಂತಿಮವಾಗಿ ಎಸ್. ಟಿ. ವೀರೇಶ್ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ರುದ್ರೇಗೌಡ ಅವರನ್ನು ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲು ಎಲ್ಲಾ ಸದಸ್ಯರು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿಲ್ಲ.
ಅಧ್ಯಕ್ಷರಾದ ಆಯ್ಕೆಯಾದ ಬಳಿಕ ಮಾತನಾಡಿದ ಎಸ್. ಟಿ. ವೀರೇಶ್ ಅವರು, ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟಕ್ಕೆ ತನ್ನದೇ ಆದ ಮಹತ್ವ ಮತ್ತು ಹಿನ್ನೆಲೆ ಇದೆ. ಸಹಕಾರಿಗಳ ಹಿತ ಕಾಪಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಯಾರಿಗೂ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. ಉಪಾಧ್ಯಕ್ಷರು, ಒಕ್ಕೂಟದ ಸದಸ್ಯರ ಸಹಕಾರ ಪಡೆದು ಉತ್ತಮ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಸಹಕಾರ ಕ್ಷೇತ್ರ ತುಂಬಾನೇ ದೊಡ್ಡದು. ಸಹಕಾರಿಗಳ ಹಿತ ಕಾಪಾಡಬೇಕಾದ ಅವಶ್ಯಕತೆ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರ ಕ್ಷೇತ್ರಕ್ಕೆ ನೆರವು ನೀಡುತ್ತಿದೆ. ಇದು ಸದ್ಭಳಕೆಯಾಗಬೇಕು. ಈ ನಿಟ್ಟಿನಲ್ಲಿ ಅಧ್ಯಕ್ಷನಾಗಿ ಉತ್ತಮ ಕೆಲಸ ಮಾಡಲು, ಸಹಕಾರಿಗಳ ಬದುಕು ಹಸನಾಗಿಸಲು ದುಡಿಯುತ್ತೇನೆ. ನನ್ನ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದು ವೀರೇಶ್ ಅವರು ಹೇಳಿದರು.
ನೂತನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ರುದ್ರೇಗೌಡರು ಮಾತನಾಡಿ, ಮಹಾನಗರ ಪಾಲಿಕೆಯ ಮೇಯರ್ ಆಗಿ, ಪಾಲಿಕೆ ಸದಸ್ಯರಾಗಿ ಉತ್ತಮವಾಗಿ ಕೆಲಸ ನಿರ್ವಹಿಸಿರುವ ವೀರೇಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಖುಷಿ ತಂದಿದೆ. ಒಕ್ಕೂಟದ ಸದಸ್ಯರು ಚುನಾವಣೆ ಬೇಡ ಎಂಬ ಕಾರಣಕ್ಕೆ ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸದ ವಿಚಾರ. ವೀರೇಶ್ ಅವರ ನೇತೃತ್ವದಲ್ಲಿ ಉತ್ತಮ ಕೆಲಸ ಮಾಡುತ್ತೇವೆ. ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಎಲ್ಲಾ ಸಹಕಾರಿಗಳು, ಒಕ್ಕೂಟದ ಸದಸ್ಯರು ಅಭಿನಂದಿಸಿದ್ದಾರೆ. ಈ ವೇಳೆ ಸಹಕಾರಿ ಭಾರತಿ ರಾಜ್ಯಾಧ್ಯಕ್ಷ ಮಾಗನೂರು ಪ್ರಭುದೇವ, ಕರಾವಳಿ ಸಹಕಾರಿ ಅಧ್ಯಕ್ಷ ಉಮೇಶ್ ಶೆಟ್ರು, ಮನಿ ಪ್ಲ್ಯಾಂಟ್ ಸೌಹಾರ್ದ ಸಹಕಾರಿಯ ನಾಗರಾಜ್, ಜಿಎಂ ಸೌಹಾರ್ದ ಸಹಕಾರಿಯ ಎ. ಸಿ. ಬಸವರಾಜ್, ಸನ್ಮತಿ ಸಹಕಾರಿಯ ಪಾಲಾಕ್ಷಪ್ಪ, ಆಂಜನೇಯ ಸೌಹಾರ್ದ ಸಹಕಾರಿಯ ಚಂದ್ರಶೇಖರ್, ದಾನಮ್ಮ ಸೌಹಾರ್ದ ಸಹಕಾರಿಯ ರಾಜು ಮತ್ತಿತರರು ಹಾಜರಿದ್ದರು.