Home ದಾವಣಗೆರೆ ಹಿಟ್ಲರ್‌ನಿಂದ ಪ್ರೇರಣೆ ಪಡೆದು ‘ಹೈಡ್ರಾ’ ನಾಮಕರಣ: ಸಿಎಂ ರೇವಂತ್ ರೆಡ್ಡಿ ಹೇಳಿಕೆಗೆ ಭಾರಿ ಆಕ್ರೋಶ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಹಿಟ್ಲರ್‌ನಿಂದ ಪ್ರೇರಣೆ ಪಡೆದು ‘ಹೈಡ್ರಾ’ ನಾಮಕರಣ: ಸಿಎಂ ರೇವಂತ್ ರೆಡ್ಡಿ ಹೇಳಿಕೆಗೆ ಭಾರಿ ಆಕ್ರೋಶ!

Share
ರೇವಂತ್ ರೆಡ್ಡಿ
Share

ಬೆಂಗಳೂರು/ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಅವರು ರಾಜ್ಯದ ಅತಿಕ್ರಮಣ ವಿರೋಧಿ ಕಾರ್ಯಪಡೆಗೆ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನಿಂದ ಪ್ರೇರಣೆ ಪಡೆದು ಹೆಸರಿಡಲಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಹೊಸ ರಾಜಕೀಯ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸಿಎಂ ಅವರ ಈ ವಿವಾದಾತ್ಮಕ ಹೇಳಿಕೆಗೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಬಿಆರ್‌ಎಸ್ (BRS) ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಬೆಂಗಳೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೇವಂತ್ ರೆಡ್ಡಿ, ಹೈದರಾಬಾದ್ ವಿಪತ್ತು ನಿರ್ವಹಣೆ ಮತ್ತು ಆಸ್ತಿ ರಕ್ಷಣೆ ಸಂಸ್ಥೆ (HYDRAA) ಯ ಪರಿಕಲ್ಪನೆ ಹಾಗೂ ಹೆಸರು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ನಿಂದ ಪ್ರೇರಿತವಾಗಿದೆ ಎಂದಿದ್ದಾರೆ. “ಹೈಡ್ರಾ ಎಂಬುದು ಹಿಟ್ಲರ್‌ನ ನೆಚ್ಚಿನ ಪದವಾಗಿತ್ತು. ಯಾರನ್ನಾದರೂ ಹತ್ಯೆ ಮಾಡಲು ಬಳಸುತ್ತಿದ್ದ ಆತನ ಪ್ರಮುಖ ತಂಡವನ್ನು ಹೈಡ್ರಾ ಎಂದು ಕರೆಯಲಾಗುತ್ತಿತ್ತು. ಆದ್ದರಿಂದ ನಾನು ಹಿಟ್ಲರ್‌ನಿಂದ ಸ್ಫೂರ್ತಿ ಪಡೆದು ಇದಕ್ಕೆ ‘ಹೈಡ್ರಾ’ ಎಂದು ಹೆಸರಿಟ್ಟಿದ್ದೇನೆ” ಎಂದು ಅವರು ಇಂಟರ್ವ್ಯೂನಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಆದರೆ, ಐತಿಹಾಸಿಕ ತಜ್ಞರ ಪ್ರಕಾರ ಹಿಟ್ಲರ್‌ನ ಆಪ್ತ ವಲಯಕ್ಕೂ ‘ಹೈಡ್ರಾ’ ಪದಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ಇದು ನಾಜಿ ಜರ್ಮನಿಯ ವಿರುದ್ಧ ಬ್ರಿಟಿಷ್ ರಾಯಲ್ ಏರ್‌ಫೋರ್ಸ್ ನಡೆಸಿದ ಬಾಂಬ್ ದಾಳಿಯ ಕಾರ್ಯಾಚರಣೆಯ ಹೆಸರಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ತೀವ್ರ ವಾಗ್ದಾಳಿ:

ರೇವಂತ್ ರೆಡ್ಡಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ಹಾಗೂ ತುರ್ತು ಪರಿಸ್ಥಿತಿಯ (Emergency) ಮನಸ್ಥಿತಿ ಮತ್ತೊಮ್ಮೆ ಬಹಿರಂಗವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ರೇವಂತ್ ರೆಡ್ಡಿ ಅವರು ಹಿಟ್ಲರ್‌ನಿಂದ ಪ್ರೇರಿತರಾಗಿ ಹೈಡ್ರಾ ರಚಿಸಿರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು ಕಾಂಗ್ರೆಸ್‌ನ ತಾನಾಶಾಹಿ (ಸರ್ವಾಧಿಕಾರಿ) ಧೋರಣೆಯನ್ನು ತೋರಿಸುತ್ತದೆ. ಪತ್ರಕರ್ತರು ಮತ್ತು ವಿದ್ಯಾರ್ಥಿಗಳ ಮೇಲಿನ ದಮನ ನೀತಿಯೇ ಇದಕ್ಕೆ ಸಾಕ್ಷಿ ಎಂದು ಆರೋಪಿಸಿದ್ದಾರೆ.

ಇದೇ ವೇಳೆ, ದಕ್ಷಿಣ ರಾಜ್ಯಗಳು ಹೆಚ್ಚು ತೆರಿಗೆ ಪಾವತಿಸುತ್ತಿದ್ದರೂ ದೆಹಲಿಗೆ ಸಲಾಂ ಹೊಡೆಯಬೇಕಾದ ಪರಿಸ್ಥಿತಿ ಇದೆ, ನಾವು ದ್ವಿತೀಯ ದರ್ಜೆ ಪ್ರಜೆಗಳಾಗಿ ಬದುಕಲು ಬಯಸುವುದಿಲ್ಲ ಎಂಬ ರೇವಂತ್ ರೆಡ್ಡಿ ಅವರ ಪ್ರಾದೇಶಿಕ ಅಸಮಾನತೆಯ ಹೇಳಿಕೆಯನ್ನು ಪೂನಾವಾಲಾ ಖಂಡಿಸಿದ್ದಾರೆ. ಇದು ದೇಶವನ್ನು ಒಡೆಯುವ ಹಾಗೂ ಉತ್ತರ-ದಕ್ಷಿಣ ವಿಭಜನೆ ಸೃಷ್ಟಿಸುವ ಜಿನ್ನಾ ಮಾನಸಿಕತೆಯಾಗಿದೆ ಎಂದು ಅವರು ಟೀಕಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles