Home ದಾವಣಗೆರೆ ನಿಸ್ವಾರ್ಥ ಸೇವೆಯ ಸಾಕಾರ ಮೂರ್ತಿ ಮಹಾಂತೇಶ್ ವಿ. ಒಣರೊಟ್ಟಿ ಯಶೋಗಾಥೆಯೇ ಸ್ಫೂರ್ತಿ: ಜೀರೋ ಟು ಲಯನ್ಸ್ ಕ್ಲಬ್ ಪ್ರೆಸಿಡೆಂಟ್ ವರೆಗಿನ ರೋಚಕ ಜರ್ನಿ!
ದಾವಣಗೆರೆಬೆಂಗಳೂರು

ನಿಸ್ವಾರ್ಥ ಸೇವೆಯ ಸಾಕಾರ ಮೂರ್ತಿ ಮಹಾಂತೇಶ್ ವಿ. ಒಣರೊಟ್ಟಿ ಯಶೋಗಾಥೆಯೇ ಸ್ಫೂರ್ತಿ: ಜೀರೋ ಟು ಲಯನ್ಸ್ ಕ್ಲಬ್ ಪ್ರೆಸಿಡೆಂಟ್ ವರೆಗಿನ ರೋಚಕ ಜರ್ನಿ!

Share
ಯಶೋಗಾಥೆ
Share

ದಾವಣಗೆರೆ: ಜಗತ್ತಿನಲ್ಲಿ ಎಷ್ಟೋ ಜನ ಬದುಕುತ್ತಾರೆ, ಆದರೆ ಕೆಲವರು ಮಾತ್ರ ತಮ್ಮ ಬದುಕನ್ನು ಇತರರ ಕಣ್ಣೀರು ಒರೆಸಲು ಮುಡಿಪಾಗಿಡುತ್ತಾರೆ. ಕಷ್ಟಪಟ್ಟು ಶೂನ್ಯದಿಂದ ಸಾಧನೆಯ ಶಿಖರ ಏರಿದರೂ, ತನ್ನ ಯಶಸ್ಸಿನ ಬೇರುಗಳನ್ನು ಮರೆಯದೆ, ಸಮಾಜದ ಸಂಕಷ್ಟಗಳಿಗೆ ಮಿಡಿಯುವ ಗುಣ ಎಲ್ಲರಿಗೂ ಬರುವುದಿಲ್ಲ. ಅಂತಹ ಅಪರೂಪದ ಮಾನವೀಯ ಗುಣವುಳ್ಳ, ಸಜ್ಜನಿಕೆಯ ಸಾಕಾರ ಮೂರ್ತಿಯಾಗಿ ನಿಲ್ಲುವ ವ್ಯಕ್ತಿತ್ವದ ಮಹಾಂತೇಶ್ ವಿ. ಒಣರೊಟ್ಟಿ ಅವರ ಬದುಕಿನ ಯಶೋಗಾಥೆ ಎಲ್ಲರಿಗೂ ಸ್ಫೂರ್ತಿ. ಈ ಕುರಿತ ವಿಶೇಷ ಲೇಖನ ಇಲ್ಲಿದೆ.

ಬಾಲ್ಯ ಜೀವನ:

ಮಹಾಂತೇಶ್ ವಿ. ಒಣರೊಟ್ಟಿ ಅವರು 1971ರ ಜೂನ್ 6ರಂದು ಬಿಜಾಪುರ (ಈಗಿನ ವಿಜಯಪುರ) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಜನಿಸಿದರು. ತಂದೆ ದಿವಗಂತ ವೀರಪ್ಪ ಮತ್ತು ಸಂಗಮ್ಮ ದಂಪತಿಯ ಹಿರಿಯ ಪುತ್ರ ಇವರು. ನಾಲ್ವರು ಮಕ್ಕಳ ಪೈಕಿ ಇಬ್ಬರು ಗಂಡು ಮಕ್ಕಳು, ತಂಗಿಯರು ನೀಲಮ್ಮ ಗೋನಾಳ್ ಮತ್ತು ಕವಿತಾ. ಸಹೋದರ ವಿರೂಪಾಕ್ಷಪ್ಪ ಒಣರೊಟ್ಟಿ. ತಂದೆ ವೀರಪ್ಪ ಅವರು ಕಿರಾಣಿ ಅಂಗಡಿ ವ್ಯಾಪಾರ ಮಾಡುತ್ತಾ ಉದ್ಯಮಿ ಆಗಿ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದರು.

1977-78ರಲ್ಲಿ ವ್ಯಾಪಾರ ಅರಸಿ ದಾವಣಗೆರೆಗೆ ಬಂದು ಬ್ರಾಹ್ಮಣರ ಮನೆಯಲ್ಲೇ ಮೂರು ತಿಂಗಳು ವಾಸವಿದ್ದರು. ವಾಸುದೇವ್ ಮತ್ತು ಜಗದೀಶ್ ಅವರೇ ವೀರಪ್ಪ ಮತ್ತು ಮಕ್ಕಳಿಗೆ ಬಾಡಿಗೆ ಮನೆಯನ್ನೂ ಮಾಡಿಕೊಟ್ಟರು. ಮಾತ್ರವಲ್ಲ, ಆಶ್ರಯ ಕೊಡುವ ಜೊತೆಗೆ ಅನ್ನದಾತರೂ ಆವರು. ಎಪಿಎಂಸಿ ಯಾರ್ಡ್ ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಕೊಬ್ಬರಿ ಚಿನ್ನಿ, ಕರದಂಟು ವ್ಯಾಪಾರ ಶುರು ಮಾಡಿದ್ದರು. ಬೆಳಿಗ್ಗೆ 9 ಗಂಟೆಗೆ ಹೋದರೆ ರಾತ್ರಿ 7 ರಿಂದ 8 ಗಂಟೆಯವರೆಗೆ ವ್ಯಾಪಾರ ಮಾಡುತ್ತಿದ್ದ ಶ್ರಮಿಕರಾಗಿದ್ದರು.

ವಿದ್ಯಾಭ್ಯಾಸ:

ದಾವಣಗೆರೆಯ ವೆಂಕಭೋವಿ ಕಾಲೋನಿಯ ಕೊಯಿನೂರು ಹೊಟೇಲ್ ಸಮೀಪದಲ್ಲಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೂರರಿಂದ ಏಳನೇ ತರಗತಿಯವರೆಗೆ ಓದಿದ ಮಹಾಂತೇಶ್ ವಿ. ಒಣರೊಟ್ಟಿ ಅವರು, 8 ಮತ್ತು 9 ನೇ ತರಗತಿಯನ್ನು ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಪೂರೈಸಿದರು. ಕೆ. ಆರ್. ರಸ್ತೆಯ ಮುನ್ಸಿಪಲ್ ಹೈಸ್ಕೂಲ್ ಸಮೀಪದ ಜೂನಿಯರ್ ಕಾಲೇಜಿನಲ್ಲಿ ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡಿದರು.

ಹೂವಿನ ಹಾಸಿಗೆಯಾಗಿರಲಿಲ್ಲ:

ಮಹಾಂತೇಶ್ ಒಣರೊಟ್ಟಿ ಅವರಿಗೆ ಬಾಲ್ಯ ಜೀವನ ಹೂವಿನ ಹಾಸಿಗೆಯಾಗಿರಲಿಲ್ಲ. ಬೆಳಿಗ್ಗೆ 5 ಗಂಟೆಯಿಂದ ಏಳು ಗಂಟೆಯವರೆಗೆ ಬ್ರೆಡ್ ಮಾರಾಟ ಮಾಡಲು ಹೋಗುತ್ತಿದ್ದರೆ. ಬೆಳಿಗ್ಗೆ ಏಳು ಗಂಟೆಯಿಂದ ಹತ್ತು ಗಂಟೆಯವರೆಗೆ ಬೋಂಡಾ ಮೆಣಸಿನಕಾಯಿಯನ್ನು ದಾವಣಗೆರೆಯ ಹಳೆಪೇಟೆಯಲ್ಲಿ ವ್ಯಾಪಾರ ಮಾಡಿ ಆಮೇಲೆ ಶಾಲೆಗೆ ಹೋಗುತ್ತಿದ್ದರು. ಆಗ ಮಧ್ಯಾಹ್ನ 12 ಗಂಟೆಗೆ ಶಾಲೆ ಶುರುವಾಗುತ್ತಿದ್ದ ಕಾರಣ ಕೆಲಸ ಮಾಡಲು ಸಮಯ ಸಿಗುತಿತ್ತು. ಶಾಲೆ ಬಿಟ್ಟ ತಕ್ಷಣ ಬೇರೆ ಮಕ್ಕಳಂತೆ ಆಟ, ಪಾಠ ಇಲ್ಲದೇ ಸಂಜೆ ಹೋಗಿ ರಾತ್ರಿಯವರೆಗೆ ವ್ಯಾಪಾರ ಮಾಡುತ್ತಿದ್ದ ಶ್ರಮಜೀವಿ.

ಕರೆಂಟ್ ಇಲ್ಲ, ಬೀದಿ ದೀಪದ ಕೆಳಗೆ ಓದು:

ಇನ್ನು ಮನೆಯಲ್ಲಿ ವಿದ್ಯುತ್ ಇಲ್ಲದ ಕಾರಣಕ್ಕೆ ರಾತ್ರಿ 9 ರ ನಂತರ ಮುದ್ದೇಗೌಡ ಮಲ್ಲಮ್ಮರ ಶಾಲೆಗೆ ಹೋಗಿ ಕಲಿಯುತ್ತಿದ್ದರು. ಯಾಕೆಂದರೆ ಅಲ್ಲಿ ಒಂದು ಬಲ್ಬ್ ಕರೆಂಟ್ ಇರುತಿತ್ತು. ಈ ಬೆಳಕಿನಲ್ಲೇ ಓದುತ್ತಿದ್ದರು. ಸುಮಾರು ಮೂರು ಗಂಟೆಗಳ ಕಾಲ ಸತತ ಅಧ್ಯಯನ ಮಾಡುತ್ತಿದ್ದರು.

ಆಸರೆಯಾದ ಮಾವ:

ಹತ್ತನೇ ತರಗತಿ ಮುಗಿದ ಬಳಿಕ ಮನೆಯ ನಿರ್ವಹಣೆಗಾಗಿ ಉದ್ಯೋಗಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಮಹಾಂತೇಶ್ ವಿ. ಒಣರೊಟ್ಟಿ ಅವರದ್ದಾಯಿತು. ತಾಯಿ ಸಂಗಮ್ಮರ ತಮ್ಮನಾದ ಪೊಲೀಸ್ ಇಲಾಖೆಯಲ್ಲಿದ್ದ ಸಂಗಪ್ಪ ಗೋನಾಳ್ ಅವರು ಬೆಂಗಳೂರಿನ ದಲ್ಲಾಳಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಸಿದರು. ಆರಂಭದಲ್ಲಿ ಮೂರು ತಿಂಗಳ ಕಾಲ ಸಂಬಳವಿಲ್ಲದೇ ಉಚಿತವಾಗಿ ದುಡಿದ ಬಳಿಕ 700 ರೂಪಾಯಿ ಸಂಬಳ ನಿಗದಿ ಮಾಡಿದರು. 1993ರಲ್ಲಿ ತಂದೆ ಅಕಾಲಿಕ ನಿಧನ ಹೊಂದಿದ ಬಳಿಕ ಮತ್ತೆ ದಾವಣಗೆರೆಗೆ ಮಹಾಂತೇಶ್ ವಿ. ಒಣರೊಟ್ಟಿ ಅವರು ತಾಯಿ, ತಂಗಿ ಜೊತೆ ವಾಪಸ್ ಆದರು. ಡ್ರೈವರ್ ಜೊತೆ ಆಗಮಿಸಿದ್ದ ಮಹಾಂತೇಶ್ ಅವರನ್ನು ಟ್ರಾನ್ಸ್ ಪೋರ್ಟ್ ನಲ್ಲಿ ಸೇರಿಸಿದರು.

ಇಲ್ಲಿಂದ ಬದಲಾಯಿತು ಮಹಾಂತೇಶ್ ಒಣರೊಟ್ಟಿ ಅವರ ಜೀವನ. ಆಗ ಜೆಟಿಎಸ್ ಟ್ರಾನ್ಸ್ ಪೋರ್ಟ್ ಮಾಲೀಕರಾದ ನೇತಾಜಿ ರಾವ್ ಘೋರ್ಪಡೆ ಅವರು ಮಹಾಂತೇಶ್ ಒಣರೊಟ್ಟಿ ಅವರ ಕಾರ್ಯಕ್ಷಮತೆ, ಚಾಕಚಕ್ಯತೆ, ಬುದ್ದಿವಂತಿಕೆ ಗುರುತಿಸಿದರು. ಪ್ರಾಮಾಣಿಕತೆ, ನಿಷ್ಠೆ, ಕೆಲಸ ಗುರುತಿಸಿ ಆರಂಭದಲ್ಲಿ ದಿನಕ್ಕೆ 5 ರೂಪಾಯಿ ಕೊಡುತ್ತಿದ್ದ ಮಾಲೀಕರು ಒಂದು ವರ್ಷದ ಬಳಿಕ 125 ರೂಪಾಯಿಗೆ ಏರಿಸಿದರು.

ದಾಂಪತ್ಯ ಜೀವನ:

1997ರ ಫೆಬ್ರವರಿ 9 ಮತ್ತು 10ರಂದು ಹರಿಹರದ ಮಂಜುಳಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಹಾಂತೇಶ್ ವಿ. ಒಣರೊಟ್ಟಿ ಮತ್ತು ಮಂಜುಳಾ ದಂಪತಿಗೆ ಚೇತನ್ ಕುಮಾರ್ ಮತ್ತು ಐಶ್ವರ್ಯ ಮಕ್ಕಳು. ಎಂಬಿಎ ವಿದ್ಯಾಭ್ಯಾಸ ಮಾಡಿರುವ ಪುತ್ರ ಮಂಗಳೂರಿನ ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿಯಲ್ಲಿ ಮ್ಯಾನೇಜರ್ ಆಗಿದ್ದರೆ, ಪುತ್ರಿ ಐಶ್ವರ್ಯ ಅವರು ಕಂಪ್ಯೂಟರ್ ಸೈನ್ಸ್ ಓದಿದ್ದಾರೆ.

ನಾಗರತ್ನಮ್ಮ ಟೀಚರ್ ನನಗೆ ಸಹಾಯ ಮಾಡಿದ್ರು:

ಏಳನೇ ತರಗತಿ ಓದುತ್ತಿದ್ದಾಗ ಶಿಕ್ಷಕಿ ನಾಗರತ್ನಮ್ಮ ಶಾಲೆ ಶುಲ್ಕ ಪಾವತಿಸಲು ಪರದಾಡುತ್ತಿದ್ದ ಮಹಾಂತೇಶ್ ವಿ. ಒಣರೊಟ್ಟಿ ಅವರಿಗೆ ಸಹಾಯ ಮಾಡಿದ್ದರು. ಈಗಲೂ ಈ ಶಿಕ್ಷಕಿ ಅವರಿಗೆ ಅಪಾರ ಗೌರವ, ಭಕ್ತಿ ಹೊಂದಿರುವ ಮಹಾಂತೇಶ್ ಅವರನ್ನು ನೋಡಿದಾಗಲೆಲ್ಲಾ ಹೆಮ್ಮೆ ಎನಿಸುತ್ತದೆ. ಸಹಾಯ ಮಾಡಿದ್ದನ್ನು ಇನ್ನೂ ಮರೆತಿಲ್ಲ.

ಫಿನಿಕ್ಸ್ ನಂತೆ ಉದ್ಯಮದಲ್ಲಿ ಯಶಸ್ಸು:

2003ರಲ್ಲಿ ಬಸವೇಶ್ವರ ಎಂಬ ಹೆಸರಿನಲ್ಲಿ ಲಾರಿ ಟ್ರಾನ್ಸ್ ಪೋರ್ಟ್ ಆರಂಭಿಸಿದ ಮಹಾಂತೇಶ್ ವಿ. ಒಣರೊಟ್ಟಿ ಅವರು ಹಿಂತಿರುಗಿ ನೋಡಲೇ ಇಲ್ಲ. ಮುಟ್ಟಿದ್ದೆಲ್ಲಾ ಚಿನ್ನವಾಯ್ತು. ದಾವಣಗೆರೆ ಜನರು, ಲಾರಿ ಮಾಲೀಕರು, ಚಾಲಕರು, ನಿರ್ವಾಹಕರು, ಉದ್ಯಮಿಗಳು ಸತತವಾಗಿ ಕೈ ಹಿಡಿದ ಫಲವಾಗಿ ಜೀವನ ರೂಪಿಸಿಕೊಳ್ಳಲು ಸಾಧ್ಯವಾಯಿತು ಎನ್ನುತ್ತಾರೆ ಅವರು.

ಕೋವಿಡ್ ಕಾಲದ ಆಶಾಕಿರಣ, ಹಸಿದವರಿಗೆ ಅನ್ನ:

ಮಾನವೀಯತೆಯ ನಿಜವಾದ ಪರೀಕ್ಷೆಯಾಗಿದ್ದು ಕೋವಿಡ್-19 ಮಹಾಮಾರಿಯ ಭೀಕರ ದಿನಗಳಲ್ಲಿ. ಇಡೀ ಜಗತ್ತೇ ಲಾಕ್‌ಡೌನ್ ಆಗಿ, ಜನರು ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದಾಗ, ಇವರು ತಮ್ಮ ಪ್ರಾಣದ ಹಂಗು ತೊರೆದು ಬೀದಿಗೆ ಇಳಿದರು. ಕೆಲಸ ಕಳೆದುಕೊಂಡು ಕಂಗಾಲಾಗಿದ್ದ ವಲಸೆ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ನಿರಂತರವಾಗಿ ಉಚಿತ ರೇಷನ್ ಕಿಟ್ ಹಾಗೂ ಸಿದ್ಧಪಡಿಸಿದ ಆಹಾರವನ್ನು ವಿತರಿಸಿದರು. ತುರ್ತು ಚಿಕಿತ್ಸೆಗೆ ಹಣವಿಲ್ಲದ ಎಷ್ಟೋ ಕುಟುಂಬಗಳಿಗೆ ರಹಸ್ಯವಾಗಿ ಆರ್ಥಿಕ ಸಹಾಯ ಹಸ್ತ ಚಾಚಿದರು. ಭಯದಲ್ಲಿದ್ದ ನೂರಾರು ಕುಟುಂಬಗಳಿಗೆ ಫೋನ್ ಮೂಲಕ ಹಾಗೂ ಖುದ್ದಾಗಿ ಮಾತನಾಡಿ ಧೈರ್ಯ ತುಂಬುವ ಮೂಲಕ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿದರು.

ನಿಸ್ವಾರ್ಥ ಸೇವೆ ಮತ್ತು ಸಜ್ಜನಿಕೆ

ಇವರ ಸೇವೆಯ ಹಿಂದ ಯಾವುದೇ ಪ್ರಚಾರದ ಹಪಾಹಪಿ ಇರಲಿಲ್ಲ. “ಬಲಗೈಲಿ ಕೊಡುವುದು ಎಡಗೈಗೆ ತಿಳಿಯಬಾರದು” ಎಂಬ ತತ್ವದಂತೆ, ಪ್ರಚಾರದಿಂದ ದೂರ ಉಳಿದು ಶ್ರದ್ಧೆಯಿಂದ ಕೆಲಸ ಮಾಡಿದರು. ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಎದುರಿಗೆ ಸಿಕ್ಕಾಗ ಗೌರವದಿಂದ ನಮಸ್ಕರಿಸುವ, ಎಲ್ಲರ ಕಷ್ಟ-ಸುಖಗಳನ್ನು ತಾಳ್ಮೆಯಿಂದ ಆಲಿಸುವ ಇವರ ಸಜ್ಜನ ಗುಣವೇ ಇವರನ್ನು ಎಲ್ಲರಿಗೂ ಹತ್ತಿರವಾಗಿಸಿತು.

ಅನ್ನದಾನೇಶ್ವರ ಸೇವಾ ಸಂಘದ ಸಂಘಟನಾ ಕಾರ್ಯದರ್ಶಿ, ದಾವಣಗೆರೆ ಜಿಲ್ಲಾ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಖಜಾಂಚಿ, ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯದರ್ಶಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಸಂಘ ಸಂಸ್ಥೆಗಳು ಮಹಾಂತೇಶ್ ಒಣರೊಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಿವೆ.

ಲಯನ್ಸ್ ಕ್ಲಬ್ ನಲ್ಲಿ 12 ವರ್ಷಗಳಿಂದ ಸದಸ್ಯರಾಗಿರುವ ಮಹಾಂತೇಶ್ ವಿ. ಒಣರೊಟ್ಟಿ ಅವರು ಈಗ ಲಯನ್ಸ್ ಕ್ಲಬ್ 317 ಹೆಚ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬಡತನದಿಂದ ಮೇಲೆ ಬಂದು ಸಮಾಜದಲ್ಲಿ ಪ್ರಚಾರ ಬಯಸದೇ ತೆರೆಮರೆಯಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿರುವ ಹೃದಯವಂತನ ಸರಳತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಬದುಕಿನ ಕಥೆಯೇ ಎಲ್ಲರಿಗೂ ಸ್ಫೂರ್ತಿ. ಮತ್ತಷ್ಟು ಹುದ್ದೆಗಳು, ಸಹಾಯ ಮಾಡುವ ಗುಣ ಹೊಂದಿರುವ ಇವರಿಗೆ ಆಯಸ್ಸು, ಆರೋಗ್ಯ, ಅಧಿಕಾರ ಮತ್ತಷ್ಟು ಸಿಗಲಿ ಎಂಬುದು ಅಭಿಮಾನಿಗಳು, ಕುಟುಂಬದವರು, ಸ್ನೇಹಿತರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಆಶಯವಾಗಿದೆ.

Share

Leave a comment

Leave a Reply

Your email address will not be published. Required fields are marked *