ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಇಂಜಿನಿಯರಿಂಗ್ ಪದವೀಧರರ ಉದ್ಯೋಗಾರ್ಹತೆ ಮತ್ತು ಪ್ರಾಯೋಗಿಕ ಕೌಶಲ್ಯಗಳ ಕೊರತೆಯ ಕುರಿತು ಮಾತನಾಡುತ್ತಾ ಬಳಸಿದ “ಕ್ರಿಮಿನಲ್ ವೇಸ್ಟ್” (Criminal Waste) ಎಂಬ ಪದವು ರಾಜ್ಯ ರಾಜಕೀಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.
ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, “ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ನನ್ನ ಎರಡು ಕಣ್ಣುಗಳಿದ್ದಂತೆ. ರಾಜ್ಯದಲ್ಲಿ ಪ್ರತಿವರ್ಷ ಸುಮಾರು 1.10 ಲಕ್ಷ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಮುಗಿಸಿ ಹೊರಬರುತ್ತಿದ್ದಾರೆ. ಆದರೆ, ಅವರಲ್ಲಿ ಹಲವರಿಗೆ ಒಂದು ಉದ್ಯೋಗ ಅರ್ಜಿ (Job Application) ಬರೆಯಲು ಕೂಡ ಸಾಧ್ಯವಾಗುತ್ತಿಲ್ಲ. ಸಣ್ಣ ಉದ್ಯೋಗಗಳನ್ನು ಮಾಡಲು ಅವರು ಒಪ್ಪುವುದಿಲ್ಲ, ಜೊತೆಗೆ ಅಗತ್ಯ ಕೌಶಲ್ಯಗಳನ್ನು ಕಲಿಯುವುದಿಲ್ಲ” ಎಂದು ಕಳವಳ ವ್ಯಕ್ತಪಡಿಸಿದರು.
ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿದ ಸಿಎಂ, ತಾವು ವಿದ್ಯಾರ್ಥಿಗಳನ್ನು ದೂಷಿಸುತ್ತಿಲ್ಲ, ಬದಲಾಗಿ ಪ್ರಸ್ತುತ ಇರುವ ಶಿಕ್ಷಣ ವ್ಯವಸ್ಥೆಯನ್ನು ಎತ್ತಿ ತೋರಿಸುತ್ತಿರುವುದಾಗಿ ತಿಳಿಸಿದರು.
ಪ್ರತಿಪಕ್ಷಗಳ ತೀವ್ರ ವಾಗ್ದಾಳಿ:
BRS ವಾಗ್ದಾಳಿ: BRS ಕಾರ್ಯಾಧ್ಯಕ್ಷ ಕೆ. ಟಿ. ರಾಮರಾವ್ (KTR) ಸಿಎಂ ಹೇಳಿಕೆಯನ್ನು ಖಂಡಿಸಿ, “ರೇವಂತ್ ರೆಡ್ಡಿ ತಮ್ಮ ಜೀವನದಲ್ಲಿ ಎಂದಾದರೂ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದಾರೆಯೇ ಅಥವಾ ಪ್ರೊಫೆಷನಲ್ ವಾತಾವರಣದಲ್ಲಿ ಕೆಲಸ ಮಾಡಿದ್ದಾರೆಯೇ? ವಿದ್ಯಾರ್ಥಿಗಳನ್ನು ನಿಂದಿಸಲು ಅವರಿಗೆ ಏನು ಅರ್ಹತೆ ಇದೆ?” ಎಂದು ಪ್ರಶ್ನಿಸಿದ್ದಾರೆ.
BJP ಟೀಕೆ: ಬಿಜೆಪಿ ವಕ್ತಾರ ಎನ್. ವಿ. ಸುಭಾಷ್ ಮಾತನಾಡಿ, “ಇಂಜಿನಿಯರ್‌ಗಳು ದೇಶದ ಬೆನ್ನೆಲುಬು. ಕಾಂಗ್ರೇಸ್ ನಾಯಕರು ವಿದ್ಯಾರ್ಥಿ ಸಮುದಾಯಕ್ಕೆ ಅಪಮಾನ ಎಸಗಿದ್ದಾರೆ” ಎಂದು ಆರೋಪಿಸಿದರು.
ಕಾಂಗ್ರೆಸ್ ತಿರುಗೇಟು:
ಕಾಂಗ್ರೆಸ್ ಸಂಸದ ಚಾಮಲ ಕಿರಣ್ ಕುಮಾರ್ ರೆಡ್ಡಿ ತಮ್ಮ ಸಿಎಂ ಪರ ವಹಿಸಿ, “ರೇವಂತ್ ರೆಡ್ಡಿ ಸ್ವಪ್ರಯತ್ನದಿಂದ ಕೆಳಹಂತದಿಂದ ಬೆಳೆದು ಬಂದ ನಾಯಕ. ರಾಜಕೀಯ ವಾರಸುದಾರಿಕೆಯಿಂದ ಬಂದ ನಾಯಕರಿಗೆ ಸಾಮಾನ್ಯ ಜನರ ಮತ್ತು ವಿದ್ಯಾರ್ಥಿಗಳ ವಾಸ್ತವ ಸ್ಥಿತಿ ಅರ್ಥವಾಗುವುದಿಲ್ಲ” ಎಂದು ಬಿಆರ್‌ಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.





Leave a comment