ಬೆಂಗಳೂರು: ತೆರಿಗೆ ವಂಚನೆಯ ಸುಳ್ಳು ದೂರನ್ನು ಮುಕ್ತಾಯಗೊಳಿಸಲು ಉದ್ಯಮಿಯೊಬ್ಬರಿಂದ ₹8 ಲಕ್ಷ ಲಂಚದ ಹಣ ಪಡೆಯುತ್ತಿದ್ದ ಕೇಂದ್ರ ಜಿಎಸ್‌ಟಿ (CGST) ಅಧೀಕ್ಷಕ ಹಾಗೂ ಮಧ್ಯವರ್ತಿಯನ್ನು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ದಕ್ಷಿಣ ವಿಭಾಗ-4ರ (ಸೌತ್ ಕಮಿಷನರೇಟ್) ಸಿಜಿಎಸ್‌ಟಿ ಅಧೀಕ್ಷಕ ಮೋಹಿತ್ ಪ್ರತಾಪ್ ಸಿಂಗ್ ಮತ್ತು ಆತನ ಮಧ್ಯವರ್ತಿ ಸಲ್ಮಾನ್ ಶೇಖ್ ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿಗಳು.
ಘಟನೆಯ ವಿವರ:
ನಗರದ ಕೋರಮಂಗಲದಲ್ಲಿರುವ ಕೆಂದ್ರೀಯ ಸದನದಲ್ಲಿ ಈ ಜಿಎಸ್‌ಟಿ ಕಚೇರಿಯಿದೆ. ಕಬ್ಬಿಣ ಸಾಮಗ್ರಿ ಮಾರಾಟ ಮಾಡುವ ಉದ್ಯಮಿ ಸೈಯ್ಯದ್ ಜಮೀರ್ ಅವರ ಮೇಲೆ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ದೂರೊಂದನ್ನು ದಾಖಲಿಸಲಾಗಿತ್ತು. ತನಿಖೆಯ ವೇಳೆ ಈ ದೂರು ಆಧಾರರಹಿತ ಮತ್ತು ಸುಳ್ಳು ಎಂದು ತಿಳಿದಿದ್ದರೂ, ಪ್ರಕರಣವನ್ನು ಪೂರ್ಣವಾಗಿ ರದ್ದುಗೊಳಿಸಲು (ಕೇಸ್ ಕ್ಲೋಸ್ ಮಾಡಲು) ಅಧೀಕ್ಷಕ ಮೋಹಿತ್ ಪ್ರತಾಪ್ ಸಿಂಗ್ ಆರಂಭದಲ್ಲಿ ₹20 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಸಾಕಷ್ಟು ಚೌಕಾಸಿಯ ನಂತರ ₹8 ಲಕ್ಷ ಹಣವನ್ನು ನೀಡುವುದಾಗಿ ಒಪ್ಪಂದವಾಗಿತ್ತು. ಲಂಚದ ಹಣವನ್ನು ಮಧ್ಯವರ್ತಿ ಸಲ್ಮಾನ್ ಶೇಖ್ ಮುಖಾಂತರ ತಲುಪಿಸುವಂತೆ ಉದ್ಯಮಿಗೆ ಅಧಿಕಾರಿ ಸೂಚಿಸಿದ್ದರು.
ಲೋಕಾಯುಕ್ತ ದಾಳಿ ಹಾಗೂ ಬಂಧನ:
ಅಧಿಕಾರಿಯ ಭ್ರಷ್ಟಾಚಾರದಿಂದ ಬೇಸತ್ತ ಉದ್ಯಮಿ ಸೈಯ್ಯದ್ ಜಮೀರ್ ಅವರು ಸಾಕ್ಷ್ಯಾಧಾರಗಳೊಂದಿಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಲೋಕಾಯುಕ್ತ ಪೊಲೀಸರು ರಹಸ್ಯ ಪ್ಲಾನ್ ರೂಪಿಸಿದ್ದರು.
ಕೋರಮಂಗಲದ ಜಿಎಸ್‌ಟಿ ಕಚೇರಿಯ ಚೇಂಬರ್ ಬಳಿ ಮಧ್ಯವರ್ತಿಯ ಮೂಲಕ ₹8 ಲಕ್ಷ ನಗದು ಹಣ ಸ್ವೀಕರಿಸುತ್ತಿದ್ದ ವೇಳೆಯಲ್ಲಿಯೇ ಡಿವೈಎಸ್ಪಿಗಳಾದ ಭರತ್ ರೆಡ್ಡಿ ಹಾಗೂ ತಿಪ್ಪೇಸ್ವಾಮಿ ನೇತೃತ್ವದ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಲಂಚ ಪಡೆದ ಹಣವನ್ನು ವಶಕ್ಕೆ ಪಡೆದ ಅಧಿಕಾರಿಗಳು, ಇಬ್ಬರೂ ಆರೋಪಿಗಳನ್ನು ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ. ಈ ಇಡೀ ಕಾರ್ಯಾಚರಣೆಯ ಪ್ರಮುಖ ದೃಶ್ಯಗಳು ರಹಸ್ಯ ಕ್ಯಾಮೆರಾದಲ್ಲೂ ಸೆರೆಯಾಗಿವೆ ಎನ್ನಲಾಗಿದೆ.
ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಪ್ರತಿಬಂಧಕ ಕಾಯ್ದೆ (Prevention of Corruption Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಲೋಕಾಯುಕ್ತ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.





Leave a comment