ನವದೆಹಲಿ: ರಾಂಚಿಯ ನಿವಾರಣ್‌ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಚೇರಿಯ ಮೇಲೆ ಜೂನ್ ತಿಂಗಳಿನಲ್ಲಿ ನಡೆದ ಪೆಟ್ರೋಲ್ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಗುರುವಾರ ದೇಶದ ವಿವಿಧೆಡೆ ಬೃಹತ್ ಕಾರ್ಯಾಚರಣೆ ನಡೆಸಿದೆ.
ದೆಹಲಿ, ಬಿಹಾರ, ಜಾರ್ಖಂಡ್ ಹಾಗೂ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಇಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಜೂನ್ 16 ಮತ್ತು 17ರ ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳು ರಾಂಚಿಯ ಆರ್‌ಎಸ್ಎಸ್ ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿದ್ದರು. ಆ ನಂತರ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಯನ್ನು ಕೈಗೆತ್ತಿಕೊಂಡಿತ್ತು. ತನಿಖೆ ವೇಳೆ ಬಂಧಿತರಾದ ಸೈಫ್ ಅನ್ಸಾರಿ ಮತ್ತು ಅಮನ್ ಅನ್ಸಾರಿ ಎಂಬ ಆರೋಪಿಗಳ ಪೈಕಿ ಒಬ್ಬಾತ ದುಬೈಗೆ ಪ್ರಯಾಣ ಬೆಳೆಸಿದ್ದಾಗ, ಪಾಕಿಸ್ತಾನ ಮೂಲದ ಉಗ್ರ ಶಹಜಾದ್ ಭಟ್ಟಿಯ ಸಹಚರ “ರಾಣಾ ಸಾಹಿಬ್” ಎಂಬಾತನ ಜೊತೆ ಸಂಪರ್ಕದಲ್ಲಿದ್ದದ್ದು ಬೆಳಕಿಗೆ ಬಂದಿದೆ.
ಭಟ್ಟಿ ನೆಟ್‌ವರ್ಕ್ ಮತ್ತು ED ತನಿಖೆ:
ಕೇಂದ್ರ ಗೃಹ ಸಚಿವಾಲಯವು ಶಹಜಾದ್ ಭಟ್ಟಿ ನೆಟ್‌ವರ್ಕ್ ಅನ್ನು ‘UAPA’ ಕಾಯ್ದೆಯಡಿ ಭಯೋತ್ಪಾದಕ ಸಂಸ್ಥೆ ಎಂದು ಘೋಷಿಸಿದ ಬೆನ್ನಲ್ಲೇ ಈ ದಾಳಿಗಳು ನಡೆದಿವೆ. ಗಡಿಪಾರು ಶಸ್ತ್ರಾಸ್ತ್ರ ಸರಬರಾಜು, ಮಾದಕ ದ್ರವ್ಯ ಕಳ್ಳಸಾಗಣೆ ಹಾಗೂ ದೇಶ ವಿರೋಧಿ ಕೃತ್ಯಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಈ ನೆಟ್‌ವರ್ಕ್‌ನಿಂದ ರಾಂಚಿ ದಾಳಿಗೆ ಹಣ ಹರಿದುಬಂದಿದೆಯೇ ಎಂಬುದನ್ನು ಪತ್ತೆಹಚ್ಚಲು ಇಡಿ ಶೋಧ ಮುಂದುವರಿಸಿದೆ.





Leave a comment