ನವದೆಹಲಿ / ಗುರುಗ್ರಾಮ್: ಗುರುಗ್ರಾಮ್‌ನಲ್ಲಿ ಸಂಭವಿಸಿದ ಸಂಚಲನಕಾರಿ ಹಿಟ್ ಅಂಡ್ ರನ್ ಪ್ರಕರಣದಲ್ಲಿ ದಿನಕ್ಕೊಂದು ಆಘಾತಕಾರಿ ಮಾಹಿತಿ ಹೊರಬರುತ್ತಿದೆ. ಪಾರ್ಟಿ ಮುಗಿಸಿ ವಾಪಸಾಗುತ್ತಿದ್ದ ಕಾರು ಚಾಲಕ ಕಲ್ಯಾಣ್ ಬೈಂಸ್ಲಾ ಹಾಗೂ ಆತನ ಸ್ನೇಹಿತ ಲವ್ನೀಶ್, ಏಪ್ರಿಲಿಯಾ ಆರ್‌ಎಸ್ 457 ಬೈಕ್‌ನಲ್ಲಿ ಸಾಗುತ್ತಿದ್ದ ಮಹಿಳಾ ಬೈಕರ್ ಶಿವಾನಿ ಚೌಹಾಣ್ (ಸಿಯಾ) ಅವರನ್ನು ಸುಮಾರು 2 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರ ಬೆನ್ನಟ್ಟಿ, ಉದ್ದೇಶಪೂರ್ವಕವಾಗಿಯೇ ಡಿಕ್ಕಿ ಹೊಡೆದಿರುವುದು ಎಸ್ಐಟಿ ತನಿಖೆಯಿಂದ ತಿಳಿದುಬಂದಿದೆ.
ಘಟನೆಯ ವಿವರ:
ವಿಶೇಷ ತನಿಖಾ ತಂಡದ (SIT) ಮೂಲಗಳ ಪ್ರಕಾರ, ಜಿಮ್ ಮಾಲೀಕ ಕಲ್ಯಾಣ್ ಬೈಂಸ್ಲಾ ತನ್ನ ಸಹಪ್ರಯಾಣಿಕ ಹಾಗೂ ಸ್ನೇಹಿತ ಲವ್ನೀಶ್ ಸೇರಿದಂತೆ ಒಟ್ಟು ನಾಲ್ಕು ಜನರೊಂದಿಗೆ ಕ್ಲಬ್‌ನಲ್ಲಿ ಪಾರ್ಟಿ ಮಾಡಿ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಗುರುಗ್ರಾಮ್‌ನ ಸೆಕ್ಟರ್ 53 ಮೆಟ್ರೋ ನಿಲ್ದಾಣದ ಬಳಿ ಸಿಯಾ ಚೌಹಾಣ್ ಅವರ ಬೈಕ್ ಕಂಡು, ಲವ್ನೀಶ್ ಅಶ್ಲೀಲ ಕಮೆಂಟ್‌ಗಳನ್ನು ಮಾಡಿದ್ದಾನೆ.
ನಂತರ, ಆಕೆಯನ್ನು ಬೆನ್ನಟ್ಟುವಂತೆ ಲವ್ನೀಶ್ ಕಾರು ಚಾಲಕ ಬೈಂಸ್ಲಾಗೆ ಪ್ರಚೋದನೆ ನೀಡಿದ್ದಾನೆ. ಕೇವಲ ವಾಕ್ಸಮರದಿಂದ ಆರಂಭವಾದ ಜಗಳ, ಸಿಯಾ ತನ್ನ ಕಾರಿನಿಂದ ದೂರವಿರಲು ಯತ್ನಿಸಿದರೂ, ಬೈಂಸ್ಲಾ ಆಕೆಯ ಬೈಕನ್ನು 2 ಕಿ.ಮೀ ಬೆನ್ನಟ್ಟಿ ಕೊಲ್ಲುವ ಉದ್ದೇಶದಿಂದಲೇ ಮಾರ್ಷಲ್/ಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದ್ದಾನೆ.
ಪೋಲಿಸ್ ತನಿಖೆ ಮತ್ತು ಬಂಧನ:
ಈ ಕೃತ್ಯ ಎಸಗಿದ ಬಳಿಕ ರಾಜಸ್ಥಾನದ ದೌಸಾಗೆ ಪರಾರಿಯಾಗಿದ್ದ ಬೈಂಸ್ಲಾ ಹಾಗೂ ಆತನ ಸ್ನೇಹಿತ ಲವ್ನೀಶ್ ಇಬ್ಬರನ್ನೂ ಗುರುಗ್ರಾಮ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧನದ ವೇಳೆ ಮೂತ್ರ ವಿಸರ್ಜನೆ ನೆಪದಲ್ಲಿ ಓಡಿಹೋಗಲು ಯತ್ನಿಸಿದ ಆರೋಪಿ ಬೈಂಸ್ಲಾ, ಕೆಳಗೆ ಬಿದ್ದು ಗಾಯಗೊಂಡಿದ್ದರಿಂದ ಆತನಿಗೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.
ಪ್ರಸ್ತುತ, ಆರೋಪಿಗಳು ಮದ್ಯಪಾನ ಮಾಡಿದ್ದರೇ ಎಂಬುದನ್ನು ಖಚಿತಪಡಿಸಿಕೊಳ್ಳಲು ರಕ್ತ ಹಾಗೂ ಮೂತ್ರದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಕಾರಿನಲ್ಲಿದ್ದ ಉಳಿದ ಇಬ್ಬರಿಗೂ ನೋಟಿಸ್ ಜಾರಿ ಮಾಡಲಾಗಿದೆ. ಗುರುಗ್ರಾಮ್ ಪೊಲೀಸರು ಈ ಪ್ರಕರಣದಲ್ಲಿ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.





Leave a comment