ಖರಗ್‌ಪುರ/ಕೋಲ್ಕತ್ತಾ: ವಿಡಿಯೋ ಒಂದರಲ್ಲಿ ʼಅಸ್ಸಲಾಮ್ ಅಲೈಕುಮ್ʼ ಹಾಗೂ ʼಇನ್ಶಾ ಅಲ್ಲಾಹ್ʼ ಎಂಬ ಧಾರ್ಮಿಕ ಶಬ್ದಗಳನ್ನು ಬಳಸಿದ್ದಾರೆಂಬ ಕಾರಣಕ್ಕೆ, ಪಶ್ಚಿಮ ಬಂಗಾಳದ ಮಹಿಳಾ ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ಅವರನ್ನು ಇದ್ದಕ್ಕಿದ್ದಂತೆ ವರ್ಗಾವಣೆ ಮಾಡಲಾಗಿದ್ದು, ಪ್ರಸ್ತುತ ದೇಶಾದ್ಯಂತ ದೊಡ್ಡ ರಾಜಕೀಯ ಹಾಗೂ ಸಾಮಾಜಿಕ ವಿವಾದಕ್ಕೆ ಕಾರಣವಾಗಿದೆ.
ಖರಗ್‌ಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ 2021ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ಅವರನ್ನು, ಚಾರ್ಜ್ ತೆಗೆದುಕೊಂಡ ಕೇವಲ ಎರಡೂವರೆ ತಿಂಗಳಲ್ಲೇ ರಾಜ್ಯ ಸಶಸ್ತ್ರ ಪಡೆ ಡೆಪ್ಯುಟಿ ಕಮಾಂಡೆಂಟ್ ಹುದ್ದೆಗೆ ವರ್ಗಾಯಿಸಲಾಗಿದೆ.
ಘಟನೆಯ ವಿವರ:
ಉತ್ತರ ಪ್ರದೇಶದ ಕನ್ನೌಜ್ ಮೂಲದ ಬುಷ್ರಾ ಬಾನೋ ಅವರು, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಿಂದಪಿಎಚ್‌ಡಿ ಪೂರೈಸಿ, ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದರು. ನಂತರ ಭಾರತಕ್ಕೆ ಮರಳಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿ ಐಪಿಎಸ್ ಅಧಿಕಾರಿಯಾದರು. ಇತ್ತೀಚೆಗೆ ಸಿವಿಲ್ ಸರ್ವಿಸ್ ಪರೀಕ್ಷಾ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರೇರಣಾದಾಯಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು.
ಆ ವಿಡಿಯೋದಲ್ಲಿ ತಮ್ಮ ಪರೀಕ್ಷಾ ಸಿದ್ಧತೆಗೆ ನೆರವಾದ ಅಲಿಗಢ ಮುಸ್ಲಿಂ ಯೂನಿವರ್ಸಿಟಿಯ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿ ನೆರವನ್ನು ಸ್ಮರಿಸಿದ್ದ ಅವರು, ಆರಂಭದಲ್ಲಿ ʼಅಸ್ಸಲಾಮ್ ಅಲೈಕುಮ್ʼ ಎಂದು ಶುಭಾಶಯ ಕೋರಿ, ಕೊನೆಯಲ್ಲಿ ʼಇನ್ಶಾ ಅಲ್ಲಾಹ್ʼ ಎಂದು ಹೇಳಿದ್ದರು.
ಬಲಪಂಥೀಯ ಸಂಘಟನೆಗಳ ಆಕ್ಷೇಪ:
ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿಯೊಬ್ಬರು ಅಧಿಕೃತ ಮಾದರಿಯ ಸಂವಹನದಲ್ಲಿ ಧಾರ್ಮಿಕ ಪದಗಳನ್ನು ಬಳಸುವುದು ತಟಸ್ಥತೆಗೆ ಧಕ್ಕೆ ತರುತ್ತದೆ ಎಂದು ಬಲಪಂಥೀಯ ಸಂಘಟನೆಗಳು ಹಾಗೂ ʼಹಿಂದೂ ಲೀಗಲ್ ಫಂಡ್ʼ ಆಕ್ಷೇಪ ವ್ಯಕ್ತಪಡಿಸಿ ಪಶ್ಚಿಮ ಬಂಗಾಳ ಗೃಹ ಕಾರ್ಯದರ್ಶಿಗೆ ದೂರು ನೀಡಿದ್ದವು. ವಿಡಿಯೋದಲ್ಲಿ ‘ವಂದೇ ಮಾತರಂ’ ಅಥವಾ ‘ಜೈ ಹಿಂದ್’ ಬಳಸಿಲ್ಲ ಎಂದು ಆರೋಪಿಸಲಾಗಿತ್ತು.
ರಾಜಕೀಯ ಕೆಸರೆರಚಾಟ:
ದೂರು ದಾಖಲಾದ ಬೆನ್ನಲ್ಲೇ ಸೆಪ್ಟೆಂಬರ್ 14 ರಂದು ರಾಜ್ಯ ಸರ್ಕಾರ ಅವರನ್ನು ವರ್ಗಾಯಿಸಿದೆ. ಸರ್ಕಾರ ಇದನ್ನು “ಸಾಕಲ್ಯ ಹಿತಾಸಕ್ತಿಯ” ಸಾಮಾನ್ಯ ವರ್ಗಾವಣೆ ಎಂದು ಹೇಳಿದ್ದರೂ, ವಿಪಕ್ಷ ನಾಯಕರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ವೈಯಕ್ತಿಕ ನಂಬಿಕೆ ಅಥವಾ ಅಭ್ಯಾಸದ ನುಡಿಮುತ್ತುಗಳನ್ನು ಬಳಸಿದ್ದಕ್ಕಾಗಿ ದಂಡಿಸುವುದು ತಾರತಮ್ಯದ ನೀತಿ ಎಂದು ಪ್ರತಿಪಕ್ಷಗಳು ಆರೋಪಿಸಿವೆ.





Leave a comment