ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ ಸ್ವೀಕರಿಸಿದ ಸಮಾರಂಭಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ ಗೈರಾಗಿದ್ದರು. ಈ ಕುರಿತು ಎದ್ದಿದ್ದ ರಾಜಕೀಯ ವದಂತಿಗಳು ಹಾಗೂ ಟೀಕೆಗಳಿಗೆ ತಲೈವಾ ರಜನಿಕಾಂತ್ ಭಾನುವಾರ ಬೆಳಿಗ್ಗೆ ತಮ್ಮ ಪೋಯಸ್ ಗಾರ್ಡನ್ ನಿವಾಸದಲ್ಲಿ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದ್ದಾರೆ.
“ನನ್ನ ಮೌನವು ಸುಳ್ಳು ಕಥೆಗಳು ನಿಜವಾಗಲು ಬಿಡುತ್ತದೆ, ಅದಕ್ಕಾಗಿಯೇ ಮಾತನಾಡುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.
ರಜನಿಕಾಂತ್ ನೀಡಿದ ಪ್ರಮುಖ ಸ್ಪಷ್ಟನೆಗಳು:
ಎಂ. ಕೆ. ಸ್ಟಾಲಿನ್ ಭೇಟಿ ರಾಜಕೀಯವಲ್ಲ: ಚುನಾವಣೆ ಮುಗಿದ ಬಳಿಕ ಎಂ. ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿದ್ದರ ಬಗ್ಗೆ ಸ್ಪಷ್ಟನೆ ನೀಡಿದ ರಜನಿ, “ನಮ್ಮ ಸ್ನೇಹ ರಾಜಕೀಯವನ್ನು ಮೀರಿದ್ದು. ಕುಳತ್ತೂರು ಕ್ಷೇತ್ರದಲ್ಲಿ ಸ್ಟಾಲಿನ್ ಸೋತಿದ್ದು ನನಗೆ ವೈಯಕ್ತಿಕವಾಗಿ ಬೇಸರ ತಂದಿದೆ. ಅನಗತ್ಯವಾಗಿ ಮಾತನಾಡುವಷ್ಟು ರಜಿನಿ ಕೀಳು ಮಟ್ಟದ ವ್ಯಕ್ತಿಯಲ್ಲ” ಎಂದಿದ್ದಾರೆ.
ವಿಜಯ್ ಸಿಎಂ ಆಗಿದ್ದಕ್ಕೆ ಆಶ್ಚರ್ಯ: ನಟ ವಿಜಯ್ ಮುಖ್ಯಮಂತ್ರಿಯಾಗಿದ್ದನ್ನು ಕೇಳಿ ತಮಗೆ ತೀವ್ರ ಆಶ್ಚರ್ಯವಾಯಿತು ಎಂದು ರಜನಿಕಾಂತ್ ಒಪ್ಪಿಕೊಂಡಿದ್ದಾರೆ. ಫಲಿತಾಂಶ ಬಂದ ತಕ್ಷಣವೇ ತಾವು ವಿಜಯ್ ಅವರಿಗೆ ಕರೆ ಮಾಡಿ ಶುಭ ಹಾರೈಸಿದ್ದಾಗಿ ತಿಳಿಸಿದ್ದಾರೆ.
ರಾಜಕೀಯದಿಂದ ದೂರ: “ನಾನು ರಾಜಕೀಯದಿಂದ ದೂರ ಸರಿದು ಹಲವು ದಿನಗಳಾಗಿವೆ. ನನಗೂ ವಿಜಯ್‌ಗೂ 28 ವರ್ಷಗಳ ವಯಸ್ಸಿನ ವ್ಯತ್ಯಾಸವಿದೆ. ತಮಿಳುನಾಡಿನ ಎರಡು ಪ್ರಮುಖ ದ್ರಾವಿಡ ಪಕ್ಷಗಳ ಎದುರು ಏಕಾಂಗಿಯಾಗಿ ನಿಂತು ವಿಜಯ್ ಈ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ” ಎಂದು ಶ್ಲಾಘಿಸಿದ್ದಾರೆ.
ಮತ್ತೊಂದೆಡೆ, ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಮೊದಲ ಸಚಿವ ಸಂಪುಟದಲ್ಲಿ ಗೃಹ, ಪೊಲೀಸ್ ಮತ್ತು ಸಾರ್ವಜನಿಕ ಆಡಳಿತದಂತಹ ಪ್ರಮುಖ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದು, ಹಿರಿಯ ನಾಯಕ ಕೆ. ಎ. ಸೆಂಗೊಟ್ಟಯನ್ ಅವರಿಗೆ ಹಣಕಾಸು ಸಚಿವ ಸ್ಥಾನವನ್ನು ನೀಡಿದ್ದಾರೆ.





Leave a comment