ಬೆಂಗಳೂರು: ನಗರದ ಜನಪ್ರಿಯ ಹಸಿರು ತಾಣವಾದ ಕಬ್ಬನ್ ಪಾರ್ಕ್‌ನಲ್ಲಿ ಇಬ್ಬರು ಯುವತಿಯರು ನಡುರಸ್ತೆಯಲ್ಲೇ ಪರಸ್ಪರ ಕೂದಲು ಹಿಡಿದು ಬಡಿದಾಡಿಕೊಂಡಿರುವ (ಜಡೆಜಗಳ) ಆಘಾತಕಾರಿ ಘಟನೆ ಭಾನುವಾರ ವರದಿಯಾಗಿದೆ.
ವಾರದ ರಜಾ ದಿನವಾದ್ದರಿಂದ ಕಬ್ಬನ್ ಪಾರ್ಕ್‌ಗೆ ಕಾಲಕ್ಷೇಪಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಯುವ ಜನತೆ ಆಗಮಿಸಿದ್ದರು. ಈ ಜನಸಂದಣಿಯ ನಡುವೆಯೇ ಇಬ್ಬರು ಯುವತಿಯರ ನಡುವೆ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ನಡು ರಸ್ತೆಯಲ್ಲೇ ಕೈಕೈಮಿಲಾಯಿಸುವ ಹಂತಕ್ಕೆ ತಲುಪಿದೆ. ಇಬ್ಬರೂ ಪರಸ್ಪರ ಫೈಟಿಂಗ್ ಮಾಡಿಕೊಳ್ಳುತ್ತಿರುವ ದೃಶ್ಯವನ್ನು ಅಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಪ್ರಸ್ತುತ ಈ ಜಡೆಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಆದಾಗ್ಯೂ, ಇಬ್ಬರು ಯುವತಿಯರ ನಡುವಿನ ಈ ಬಹಿರಂಗ ಗಲಾಟೆಗೆ ನಿಖರವಾದ ಕಾರಣವೇನು ಎಂಬುದು ಇನ್ನುಯಾವ ಮಾಹಿತಿಯೂ ಲಭ್ಯವಾಗಿಲ್ಲ.
ಕುಟುಂಬಸ್ಥರು ಮತ್ತು ಮಕ್ಕಳು ಬರುವ ಪ್ರಮುಖ ಸಾರ್ವಜನಿಕ ಸ್ಥಳದಲ್ಲೇ ಯುವತಿಯರು ಈ ರೀತಿಯಲ್ಲಿ ಬೀದಿರಸ್ತೆಯಲ್ಲಿ ಜಗಳವಾಡಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇಂತಹ ಅಸಭ್ಯ ವರ್ತನೆಗಳ ಬಗ್ಗೆ ಆತಂಕ ವ್ಯಕ್ತವಾಗಿದೆ.





Leave a comment