ರಾಜಸ್ತಾನ: ರಾಜಸ್ಥಾನದ 309 ನಗರ ಸ್ಥಳೀಯ ಸಂಸ್ಥೆಗಳ (Urban Local Bodies) 10,000ಕ್ಕೂ ಹೆಚ್ಚು ವಾರ್ಡ್‌ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕೆಲವು ಅಭ್ಯರ್ಥಿಗಳಿಗೆ ದೊರೆತ ಮತಗಳ ಸಂಖ್ಯೆ ಭಾರಿ ಅಚ್ಚರಿ ಮೂಡಿಸಿದೆ. ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳೇ ಕೇವಲ ಒಂದೊಂದೇ ಮತ ಅಥವಾ ಶೂನ್ಯ ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ.
ಒಂದೇ ಒಂದು ಮತ ಪಡೆದ ಬಿಜೆಪಿ ಅಭ್ಯರ್ಥಿ:
ದಿದ್ವಾನಾ-ಕುಚಮನ್ ಜಿಲ್ಲೆಯ ಪರ್ಬತ್‌ಸರ್ ಪುರಸಭೆಯ ವಾರ್ಡ್ ಸಂಖ್ಯೆ 13ರಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕೈಲಾಶ್‌ಚಂದ್ ಅವರಿಗೆ ಸಿಕ್ಕಿದ್ದು ಕೇವಲ 1 ಮತ. ಈ ವಾರ್ಡ್‌ನಲ್ಲಿ ಕಾಂಗ್ರೇಸ್‌ನ ಹೀನಾ ಖಾನಂ 376 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಕೈಲಾಶ್‌ಚಂದ್, “ನನ್ನ ಹೆಸರು ನೆರೆಹೊರೆಯ ವಾರ್ಡ್ 12ರ ಮತದಾರರ ಪಟ್ಟಿಯಲ್ಲಿದೆ. ಆದ್ದರಿಂದ ನನಗೆ ನಾನೇ ಮತ ಹಾಕಿಕೊಳ್ಳಲು ಸಾಧ್ಯವಾಗಲಿಲ್ಲ. ವಾರ್ಡ್ 13ರ ಯಾರೋ ಒಬ್ಬರು ನನಗೆ ಮತ ನೀಡಿದ್ದಾರೆ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗೂ ಸಿಕ್ಕಿತು ಕೇವಲ 1 ಮತ:
ನಾಗೌರ್ ಜಿಲ್ಲೆಯ ರಿಯಾನ್‌ಬಾರಿ ಪುರಸಭೆಯ ವಾರ್ಡ್ 15ರಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮಜೀದ್ ಮೊಹಮ್ಮದ್ ಅವರಿಗೂ ಸಹ ದೊರೆತಿದ್ದು ಕೇವಲ 1 ಮತ. ಈ ವಾರ್ಡ್‌ನಲ್ಲಿ ಬಿಜೆಪಿಯ ಸುನಿಲ್ ಕುಮಾರ್ ಚೌಹಾಣ್ ಜಯಗಳಿಸಿದರು.
ತಮ್ಮ ಸ್ವಂತ ಮತವನ್ನೂ ಪಡೆಯದ ಆರ್‌ಎಲ್‌ಪಿ ಅಭ್ಯರ್ಥಿ (0 ಮತ):
ಬಾಲೋತ್ರಾ ಜಿಲ್ಲೆಯ ಸಿಂಧರಿ ಪುರಸಭೆಯ ವಾರ್ಡ್ 3ರಲ್ಲಿ ಆರ್‌ಎಲ್‌ಪಿ (RLP) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಓಂ ಪ್ರಕಾಶ್ ಅವರಿಗೆ 0 ಮತಗಳು ಬಿದ್ದಿವೆ. ಕಾಂಗ್ರೆಸ್‌ನ ಭನ್ವರಾ ರಾಮ್ 133 ಮತಗಳನ್ನು ಪಡೆದು ಗೆದ್ದರೆ, ಬಿಜೆಪಿಯ ಖೇಮಾ ರಾಮ್ 93 ಮತಗಳನ್ನು ಪಡೆದರು. ಫಲಿತಾಂಶದ ನಂತರ ಆಕ್ರೋಶ ವ್ಯಕ್ತಪಡಿಸಿದ ಓಂ ಪ್ರಕಾಶ್, “ನನ್ನ ಕುಟುಂಬದಲ್ಲೇ 10 ಮತಗಳಿದ್ದವು, ನಾನೂ ಸಹ ನನಗೇ ಮತ ಹಾಕಿದ್ದೆ. ಇವಿಎಂ (EVM) ಸೀಲ್ ಮಾಡುವಾಗ ಕಾಂಗ್ರೆಸ್ ಹೊರತುಪಡಿಸಿ ಇತರ ಪಕ್ಷಗಳ ಏಜೆಂಟ್‌ಗಳನ್ನು ಹೊರಗಿಡಲಾಗಿತ್ತು. ಮತಗಳನ್ನು ಕದಿಯಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ” ಎಂದು ಆರೋಪಿಸಿದ್ದಾರೆ.





Leave a comment