SUDDIKSHANA KANNADA NEWS/ DAVANAGERE/ DATE:24-05-2024
ದಾವಣಗೆರೆ: ರಾಜಸ್ಥಾನದಲ್ಲಿ ವಾಲ್ಮೀಕಿ ಸಮುದಾಯದ ರಮೇಶ ವಾಲ್ಮೀಕಿ ಎಂಬ ಯುವಕನನ್ನು ಅದೇ ಗ್ರಾಮದ ಲಿಕ್ಕರ್ ಮಾಫಿಯಾದವರು ಅಕ್ರಮವಾಗಿ ಬಂಧಿಸಿಟ್ಟು ಅಮಾನುಷವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ ತಾಲೂಕು ನಾಯಕ ಸಮಾಜ, ಎಲ್.ಜಿ.ಹಾವನೂರು ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಶ್ರೀ ಜಯದೇವ ವೃತ್ತ, ಹಳೆ ಪಿಬಿ ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿವರೆಗೆ ರಾಜಸ್ಥಾನದ ರಮೇಶ ವಾಲ್ಮೀಕಿ ಹಂತಕರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು, ಅಲ್ಲಿನ ಸಮಾಜ ಕಲ್ಯಾಣ ಸಚಿವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೆಂದು ಒತ್ತಾಯಿಸಿ ಉಪ ವಿಭಾಗಾಧಿಕಾರಿ ಮುಖಾಂತರ ರಾಜಸ್ಥಾನ, ಕೇಂದ್ರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.
ಈ ವೇಳೆ ಮಾತನಾಡಿದ ನಾಯಕ ಸಮಾಜದ ಹಿರಿಯ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ, ರಾಜಸ್ಥಾನದ ಜುಂಜುನು ಜಿಲ್ಲೆಯ ಹಳ್ಳಿಯೊಂದರ 27 ವರ್ಷದ ದಲಿತ ಯುವಕ ರಾಮೇಶ್ವರ ವಾಲ್ಮೀಕಿಯನ್ನು ಅದೇ ಗ್ರಾಮದ ಲಿಕ್ಕರ್ ಮಾಫಿಯಾದ ಗುಂಪು ಅಪಹರಿಸಿ, ಅಜ್ಞಾತ ಸ್ಥಳವೊಂದರಲ್ಲಿ ಕೈ-ಕಾಲುಗಳನ್ನು ಕಟ್ಟಿ, ಅಮಾನವೀಯವಾಗಿ, ಪೈಶಾಚಿಕವಾಗಿ ಹಲ್ಲೆ ಮಾಡಿ, ಕಡೆಗೆ ಆತನನ್ನು ಕೊಂದಿರುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂದು ಹೇಳಿದರು.
ರಾಮೇಶ್ವರ ವಾಲ್ಮೀಕಿ ಮೇಲೆ ಹಲ್ಲೆ, ಹತ್ಯೆ ಮಾಡುವ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿರುವ ದುಷ್ಕರ್ಮಿಗಳ ಗುಂಪು ನಂತರ ಮೃತಪಟ್ಟ ರಾಮೇಶ್ವರನ ಶವವನ್ನು ಆತನ ಮನೆಯ ಮುಂದೆ ಬಿಸಾಕಿ ಹೋಗಿದೆ. ಮಾನವೀಯತೆಯನ್ನೇ ಮರೆತು, ಪೈಶಾಚಿಕ ಕೃತ್ಯ ಎಸಗಿರುವ ಅಲ್ಲಿನ ಲಿಕ್ಕರ್ ಮಾಫಿಯಾದ ರೌಡಿಗಳನ್ನು ಮಟ್ಟ ಹಾಕುವ ಕೆಲಸವನ್ನು ರಾಜಸ್ಥಾನ ಹಾಗೂ ಕೇಂದ್ರ ಸರ್ಕಾರಗಳು ಮೊದಲು ಮಾಡಬೇಕು. ಪರಿಶಿಷ್ಟ ಪಂಗಡದ ಯುವಕನ ಮೇಲೆ ನಿರ್ದಯವಾಗಿ ಹಲ್ಲೆ ಮಾಡಿ, ಹತ್ಯೆಗೈದವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಅವರು ಒತ್ತಾಯಿಸಿದರು.
ರಾಜಸ್ಥಾನ ಸರ್ಕಾರವು ದಲಿತ ಯುವಕನ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಮೃತನ ಕುಟುಂಬಕ್ಕೆ ಕನಿಷ್ಟ 3 ಕೋಟಿ ರು. ಪರಿಹಾರ ನೀಡಬೇಕು. ಮೃತನ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡುವ ಮೂಲಕ ಜೀವನ ಭದ್ರತೆ, ಸುರಕ್ಷತೆ ಕಲ್ಪಿಸಬೇಕು. ದೇಶದಲ್ಲಿ ಸುಮಾರು ಶೇ.19ಕ್ಕಿಂತ ಹೆಚ್ಚು ವಾಲ್ಮೀಕಿ ಸಮಾಜವಿದೆ. ಉತ್ತರ ಭಾರತದಲ್ಲಿ ಸಫಾಯಿ ಕರ್ಮಚಾರಿ, ಸ್ಮಶಾನ ಕೆಲಸ, ಚರಂಡಿ ಕೆಲಸ, ಮ್ಯಾನ್ಯುವಲ್ ಕೆಲಸ ಹೀಗೆ ಅತ್ಯಂತ ದಯನೀಯ ಸ್ಥಿತಿಯಲ್ಲಿ ಸಮಾಜವಿದೆ. ಉತ್ತರ ಪ್ರದೇಶ, ಉತ್ತರ ಭಾರತದಲ್ಲಿ ಪ್ರಾಣಿಗಳಿಗಿಂತ ಕಡೆಯಾಗಿ ಸಮಾಜ ಬಾಳುತ್ತಿದೆ. ಅಲ್ಲಿನ ವಾಲ್ಮೀಕಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಲಿ. ಅಲ್ಲಿನ ವಾಲ್ಮೀಕಿ ಸಮುದಾಯಕ್ಕೆ ಕರ್ನಾಟಕ ಮಾದರಿಯಲ್ಲಿ ಸೌಲಭ್ಯ ಕಲ್ಪಿಸಬೇಕು ಎಂದು ಹುಚ್ಚವ್ವನಹಳ್ಳಿ ಮಂಜುನಾಥ ಆಗ್ರಹಿಸಿದರು.
ನಾಯಕ ಸಮಾಜದ ಮುಖಂಡ ಹದಡಿ ಹಾಲೇಶಪ್ಪ ಮಾತನಾಡಿ, ರಾಜಸ್ಥಾನದಲ್ಲಿ ರಾಮೇಶ್ವರ ವಾಲ್ಮೀಕಿಯೆಂಬ ಯುವಕನ ಕೈಕಾಲುಗಳನ್ನು ಕೋಲಿಗೆ ಕಟ್ಟಿ, ಅಮಾನುಷ ವಾಗಿ ಹತ್ಯೆ ಮಾಡಿರುವುದು ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವ ಸಂಗತಿಯಾಗಿದೆ. ಇಡೀ ಪ್ರಕರಣವನ್ನು ರಾಜಸ್ಥಾನ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಹಂತಕರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಲ್ಲಿನ ವಾಲ್ಮೀಕಿ ಸಮಾಜಕ್ಕೆ ಸಾಮಾಜಿಕ ನ್ಯಾಯ, ಜೀವನ ಭದ್ರತೆ, ರಕ್ಷಣೆ ಒದಗಿಸುವ ಕೆಲಸವನ್ನು ರಾಜಸ್ಥಾನ ಸರ್ಕಾರ ಮಾಡಲಿ ಎಂದು ಆಗ್ರಹಿಸಿದರು.
ಸಮಾಜದ ಮುಖಂಡರಾದ ರಾಜನಹಟ್ಟಿ ರಾಜು, ಆಲೂರು ಪರಶುರಾಮ, ಯಲೋದಹಳ್ಳಿ ರವಿಕುಮಾರ, ಯಲೋದಹಳ್ಳಿ ಪರಶುರಾಮ, ಕರನಾಯಕನಹಳ್ಳಿ ತಿಪ್ಪಣ್ಣ, ಗಂಡುಗಲಿ ಅಸ್ತಾಫನಹಳ್ಳಿ, ಕರಿಯಪ್ಪ ನಾಯಕ, ಶಿವಪುರ ಕೃಷ್ಣಮೂರ್ತಿ, ಮುಸ್ಲಿಂ ಸಮಾಜದ ಜಿಕ್ರಿಯಾ, ಜಮೀರ್ ಬಾಷಾ, ಭೋವಿ ಸಮಾಜದ ದಯಾನಂದ, ಆರನೇಕಲ್ಲು ಹನುಮಂತಪ್ಪ, ಶ್ಯಾಗಲೆ ಸತೀಶ, ತ್ಯಾವಣಿಗೆ ಜ್ಞಾನೇಶ, ರಾಜನಹಟ್ಟಿ ರಾಜು, ಗೌರವನಹಳ್ಳಿ ಸತೀಶ ಮತ್ತಿತರರು ಹಾಜರಿದ್ದರು.
2011ರ ಜಾತಿಗಣತಿ ಪ್ರಕಾರ ಶೇ.19.6 ವಾಲ್ಮೀಕಿ ಸಮಾಜವಿದೆ. ಉತ್ತರ ಭಾರತದಲ್ಲಿ ಸಮಾಜದ ಸ್ಥಿತಿ ದಯನೀಯವಾಗಿದೆ. ಅತ್ಯಂಕ ಕೆಳಮಟ್ಟದ ಕೆಲಸ ಮಾಡುತ್ತಿದ್ದಾರೆ. ಕಡು ಬಡತನದಲ್ಲಿರುವ ಈ ಸಮುದಾಯಕ್ಕೆ ಮುಖ್ಯವಾಹಿನಿಗೆ ಬರಲು ಕೇಂದ್ರ ಸರ್ಕಾರ ಸಬ್ಸಿಡಿ ದರದ ಸಾಲ, ಗಂಗಾ ಕಲ್ಯಾಣ, ಸ್ವಯಂ ಉದ್ಯೋಗಕ್ಕೆ ಕರ್ನಾಟಕ ಮಾದರಿ ಸೌಲಭ್ಯ ನೀಡಬೇಕು. ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮುಂದೆ ತರಬೇಕು.
ಹುಚ್ಚವ್ವನಹಳ್ಳಿ ಮಂಜುನಾಥ, ನಾಯಕ ಸಮಾಜದ ಹಿರಿಯ ಮುಖಂಡ