ಬೆಂಗಳೂರು: “ಪ್ರಿಯಾಂಕ್ ಖರ್ಗೆ” ಎಂಬ ಹೆಸರು ಇಷ್ಟು ದಿನ ಬಿಜೆಪಿಯವರಿಗೆ ಉದ್ಯೋಗ ನೀಡುತ್ತಿತ್ತು, ಸುದ್ದಿಯಲ್ಲಿರಲು ವಸ್ತುವಾಗುತ್ತಿತ್ತು. ಈಗ ಜೆಡಿಎಸ್ ನವರಿಗೂ ಪ್ರಿಯಾಂಕ್ ಹೆಸರು ಪ್ರಿಯವಾಗುತ್ತಿದೆ! ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಕೇಂದ್ರ ಸಚಿವರಾದ ಸನ್ಮಾನ್ಯ ಕುಮಾರಸ್ವಾಮಿಯವರಿಗೆ ನನ್ನ ವಿರುದ್ಧ ಮುಗಿಬೀಳಲು ಅಮಿತ್ ಶಾ ಟಾಸ್ಕ್ ಕೊಟ್ಟಿರಬಹುದು. ಅಥವಾ ಕೆಪಿಎಸ್ಸಿ ಅಕ್ರಮಗಳ ಬಗ್ಗೆ ಮಾತನಾಡಲು ಬಿಜೆಪಿಗರಿಗೆ ಸಾಧ್ಯವಾಗದ ಕಾರಣ ಕುಮಾರಣ್ಣರನ್ನು ವೇದಿಕೆಗೆ ತಂದು ಕೂರಿಸಿರಬಹುದು! ಎಂದು ವ್ಯಂಗ್ಯವಾಡಿದ್ದಾರೆ.
ಕೆಪಿಎಸ್ಸಿ ಅಧ್ಯಕ್ಷರ ಅಕ್ರಮಗಳ ಬಗ್ಗೆ ಕುಮಾರಸ್ವಾಮಿಯವರು ತಮ್ಮ ಕೇಸರಿ ಮಿತ್ರರನ್ನೇ ಕೇಳಿದ್ದಿದ್ದರೆ ಉತ್ತರ ಸಿಗುತ್ತಿತ್ತು, ಕೇಳಲು ಅಡ್ಜಸ್ಟ್ಮೆಂಟ್ ಮಿತ್ರತ್ವ ಅಡ್ಡ ಬರುತ್ತದೆಯೇ? ಕನಿಷ್ಠಪಕ್ಷ ರೆಬಲ್ ಬಿಜೆಪಿಗರಾದ ಶ್ರೀ ಯತ್ನಾಳ್ ಅವರನ್ನಾದರೂ ಕೇಳಬಹುದಿತ್ತು, ಪೂರ್ಣ ಉತ್ತರ ಸಿಗುತ್ತಿತ್ತು ಎಂದು ತಿಳಿಸಿದ್ದಾರೆ.
ಕೆಪಿಎಸ್ಸಿ ಅಧ್ಯಕ್ಷರನ್ನು ನೇಮಿಸಿದ್ದು ಯಾರು, ಯಾರ ಸಂಬಂಧಿ? ಎಷ್ಟು ಕೋಟಿಗೆ ಆ ಹುದ್ದೆ ಸೇಲ್ ಆಗಿತ್ತು? ಎಷ್ಟು ಅಕ್ರಮಗಳು ನಡೆದಿವೆ ಎಲ್ಲದಕ್ಕೂ ಜಗನ್ನಾಥ ಭವನದಲ್ಲೇ ಉತ್ತರವಿದೆ, ಕುಮಾರಣ್ಣ ಎಂದು ಪ್ರಶ್ನಿಸಿದ್ದಾರೆ.
ಕುಮಾರಣ್ಣ, ಕೆಪಿಎಸ್ಸಿಯಲ್ಲಿ ನೀವು ನಡೆಸಿದ ಅಕ್ರಮಗಳ ವಿಷಯ ಬಾಯಿ ತಪ್ಪಿ ನಿಮ್ಮ ಬಾಯಿಯಲ್ಲೇ ಹೊರಬಿದ್ದಿತ್ತು, ನೆನಪಿದೆಯೇ? ಕೆಲವು ವರ್ಷಗಳ ಹಿಂದೆ ನಿಮ್ಮ ಪಕ್ಷ ತೊರೆದು ನಮ್ಮ ಪಕ್ಷ ಸೇರಿದವರೊಬ್ಬರ ವಿರುದ್ಧ ಆರೋಪ ಮಾಡುವಾಗ, “ಅವರ ಹಲವು ಸಂಬಂಧಿಗಳಿಗೆ ಕ್ಲಾಸ್ ಒನ್ ಹುದ್ದೆಗಳನ್ನು ಕೊಡಿಸಿದ್ದೆ” ಎಂದು ಹೇಳಿದ್ದಿರಿ, ಕೆಪಿಎಸ್ಸಿಯಲ್ಲಿ ನೀವೂ ಪ್ರಭಾವ ಬೀರಿದ್ದೀರಿ ಎಂದಾಯಿತಲ್ಲವೇ? ಅಕ್ರಮಗಳಲ್ಲಿ ನಿಮ್ಮ ಲೆಕ್ಕವೂ ಸೇರಿದೆಯಲ್ಲವೇ? ಎಂದಿದ್ದಾರೆ.
ನಿಮ್ಮ ಮೈತ್ರಿ ಸರ್ಕಾರದ ಅವಧಿಯಲ್ಲಿ ನೀವೇ ನೇಮಿಸಿದ್ದ ಹಿಂದಿನ ಕೆಪಿಎಸ್ಸಿ ಅಧ್ಯಕ್ಷರ ಅವಧಿಯಲ್ಲಿ ನಡೆದಿದ್ದ ಹಗರಣಗಳನ್ನು ಮರೆತಿರುವಿರಾ? ನೀವು ನೇಮಿಸಿದ್ದ ಅಧ್ಯಕ್ಷರ ಅವಧಿಯಲ್ಲಿ, 1998ರಲ್ಲಿ ಕೆಎಎಸ್ ಅಧಿಕಾರಿಗಳ ನೇಮಕಾತಿಯಲ್ಲಿ ನಡೆದ ಬೃಹತ್ ಅಕ್ರಮವನ್ನು ನೀವು ಮರೆತಿದ್ದರೂ ರಾಜ್ಯ ಮರೆತಿಲ್ಲ ಎಂದು ಛೇಡಿಸಿದ್ದಾರೆ.
ಕುಮಾರಸ್ವಾಮಿಯವರೇ, ನನ್ನ ಮೈಗೆ ಕೆಸರು ಅಂಟಿಸುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ, ನಿಮ್ಮೆಲ್ಲಾ ಆರೋಪಗಳಿಗೂ ನಾನು ವಾಸ್ತವಾಂಶ ತೆರೆದಿಡುತ್ತೇನೆ. ಆದರೆ, ಕೆಪಿಎಸ್ಸಿ ನೇಮಕಾತಿಯಲ್ಲಿ ನಿಮ್ಮ ಅವಧಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ಉತ್ತರಿಸಬೇಕಾದ ಪ್ರಶ್ನೆಗಳು ಹೆಚ್ಚಿವೆ ಎಂದು ಹೇಳಿದ್ದಾರೆ.





Leave a comment